ನ್ಯೂಸ್

ವಿದ್ಯುತ್ ಕಡಿತ​ ಸಮಸ್ಯೆ; ಮಹಿಳೆಯರ ಆಕ್ರೋಶಕ್ಕೆ ಪುಡಿಪುಡಿಯಾಯ್ತು ಪವರ್ ಹೌಸ್​ನ ಕಿಟಿಕಿ, ಬಾಗಿಲು!

ಗಾಜಿಯಾಬಾದ್‌: ಬಿಸಿಲಿನ ಬೇಗೆಯಿಂದ ಧಣಿದಿರುವ ಉತ್ತರ ಪ್ರದೇಶದ ಜನ, ಇದೀಗ ವಿದ್ಯುತ್ ಕಡಿತದಿಂದ ಹೈರಾಣಾಗಿದ್ದಾರೆ. ಈ ನಡುವೆ ಲೋನಿಯ ಬಲರಾಮ್ ನಗರದಲ್ಲಿ ಪವರ್​ ಕಟ್​ ಸಮಸ್ಯೆಯಿಂದ ರೋಸಿ ಹೋದ ಮಹಿಳೆಯರ ಗುಂಪೊಂದು ಪವರ್ ಹೌಸ್‌ಗೆ ನುಗ್ಗಿ ದಾಂಧಲೆ ನಡೆಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಹಿಳೆಯೊಬ್ಬರು ಪವರ್ ಹೌಸ್​ನ ಕಿಟಕಿ ಗಾಜನ್ನು ಪುಡಿ ಮಾಡುತ್ತಿರುವುದು, ಮತ್ತೊಬ್ಬ ಮಹಿಳೆ ದೊಣ್ಣೆ ಹಿಡಿದುಕೊಂಡು ಬಂದು ಬಾಗಿಲು ಒಡೆಯುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಜೂನ್ 15ರಂದು ಮಹಿಳೆಯರಿಂದ ದಾಂಧಲೆ ಸಂಭವಿಸಿದ್ದು, ಬಳಿಕ ಇಲಾಖೆಯ ಕಿರಿಯ ಇಂಜಿನಿಯರ್ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಘಟನೆ ಬಗ್ಗೆ ದೂರು ದಾಖಲಾಗಿದ್ದು, ಆರೋಪಿ ಮಹಿಳೆಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸರಿಯಾಗಿ ವಿದ್ಯುತ್ ಪೂರೈಸಿ

ಇಂಧನ ಸಚಿವ ಎ.ಕೆ.ಶರ್ಮಾ ಮತ್ತು ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಪವರ್ ಕಟ್ ಸಮಸ್ಯೆ ಬಗೆಹರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಅಗತ್ಯ ಬಿದ್ದರೆ ಹೆಚ್ಚುವರಿ ವಿದ್ಯುತ್ ಖರೀದಿಸಿ, ಹಣದ ಕೊರತೆ ಇಲ್ಲ. ಒಂದು ವೇಳೆ ಟ್ರಾನ್ಸ್​ಫಾರ್ಮರ್ ಕೆಟ್ಟು ಹೋಗಿದ್ದಲ್ಲಿ ಬದಲಾಯಿಸಿ. ರಾಜ್ಯದಲ್ಲಿ ವಿದ್ಯುತ್ ಸರಬರಾಜಿನ ಕುರಿತು ಪ್ರತಿ ಜಿಲ್ಲೆಯಿಂದ ವರದಿ ತರಿಸಿಕೊಂಡು ಪರಿಶೀಲಿಸುತ್ತಿರಬೇಕು ಎಂದು ಸಿಎಂ ಸೂಚಿಸಿದ್ದಾರೆ ಎಂದು ವರದಿಯಾಗಿದೆ.