ಲೋಹಿಯಾ: 2019ರ ಜೂನ್ 14ರಂದು ಉತ್ತರ ಪ್ರದೇಶದ ಲೋಹಿಯಾ ಎಂಬ ಗ್ರಾಮದಲ್ಲಿ ರುಂಡವಿಲ್ಲದ ಯುವತಿಯ ಮೃತದೇಹ ಪತ್ತೆಯಾಗಿತ್ತು. ಅವಳ ತೋಳುಗಳೂ ಸಹ ಕತ್ತರಿಸಲ್ಪಟ್ಟಿದ್ದವು.
ಇಷ್ಟು ಭೀಕರಸ್ಥಿತಿಯಲ್ಲಿ ಸಿಕ್ಕ ಮೃತದೇಹ ಪಂಜಾಬ್ನ ಲುಧಿಯಾನಾದ, ಬಿಕಾಂ ವಿದ್ಯಾರ್ಥಿನಿಯದ್ದು ಎಂಬುದನ್ನು ಕೆಲವೇ ದಿನಗಳಲ್ಲಿ ಪೊಲೀಸರು ಪತ್ತೆ ಹಚ್ಚಿದ್ದರೂ, ಇಷ್ಟು ಬರ್ಭರವಾಗಿ ಹತ್ಯೆ ಮಾಡಿದವರು ಯಾರು? ಕೊಲೆಗೆ ಕಾರಣವೇನು ಎಂಬುದು ಗೊತ್ತಾಗಿರಲಿಲ್ಲ. ಅಂದು ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದರು.
ಒಂದು ವರ್ಷದ ಒಳಗೆ ಈಗ ಯುಪಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 6ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಪ್ರಮುಖ ಆರೋಪಿ ಶಕೀಬ್ ಎಂಬಾತ.
ಇದೊಂದು ಪ್ರೀತಿ, ವಂಚನೆಯ ಕತೆ. ಶಕೀಬ್ ಎಂಬಾತ ಅಮನ್ ಎಂದು ಹೆಸರಿಟ್ಟುಕೊಂಡು, 19 ವರ್ಷದ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿ, ನಂತರ ಆಕೆಯನ್ನು ಹತ್ಯೆಗೈದ ಸ್ಟೋರಿ ಇದು ಎಂಬುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.
ಮೀರತ್ ಎಸ್ಎಸ್ಪಿ ಅಜಯ್ ಸಾಹ್ನಿ ಅವರು ಕೊಲೆ ಪ್ರಕರಣದ ಸಂಪೂರ್ಣ ವಿವರಣೆಯನ್ನು ನೀಡಿದ್ದಾರೆ. ಅಂದು ತಲೆಯ ಭಾಗವೇ ಇಲ್ಲದ ಮೃತದೇಹ ಪತ್ತೆಯಾದಾಗ ತೀವ್ರ ಗೊಂದಲವಾಗಿತ್ತು. ಮೊದಲು ಆಕೆ ಯಾರು ಎಂಬುದೇ ತಿಳಿಲಿಲ್ಲ. ಆ ಕೇಸ್ ಜಟಿಲ ಎನಿಸಿತು.
ಆಕೆಯ ಶವ ಸಿಕ್ಕ ಹಳ್ಳಿಯವರ ಮೊಬೈಲ್ ಫೋನ್ ನಂಬರ್ ಪರಿಶೀಲನೆ ಮಾಡಲಾಯಿತು. ಆಗ ಆಕೆಯ ನಂಬರ್ ಉತ್ತರ ಪ್ರದೇಶದಲ್ಲಿ ನೋಂದಣಿಯಾಗಿದ್ದಲ್ಲ, ಬದಲಿಗೆ ಪಂಜಾಬ್ನ ಲುಧಿಯಾನಾದ್ದು ಎಂಬುದು ಬೆಳಕಿಗೆ ಬಂತು.
ಪ್ರಾರಂಭದಲ್ಲಿ ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋ ಮತ್ತು ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ಮೂಲಕ ಮಾಹಿತಿ ಕಲೆಹಾಕಲು ಯತ್ನಿಸಿದೆವು. ಆದರೆ ಏನೇನೂ ಪ್ರಯೋಜನ ಆಗಲಿಲ್ಲ. ನಂತರ ಈ ಹಳ್ಳಿಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಿರುವವರನ್ನು ಪತ್ತೆಹಚ್ಚಲು ಪೊಲೀಸ್ ತಂಡವನ್ನು ನಿಯೋಜಿಸಲಾಯಿತು. ಆಗಲೇ ಶಕೀಬ್ ಬಗ್ಗೆ ಮಾಹಿತಿ ಸಿಕ್ಕಿದ್ದು.
ಆಳವಾಗಿ ತನಿಖೆ ಮಾಡಿ, ವಿಚಾರಣೆ ನಡೆಸಿದಾಗ ಈಕೆ ಲುಧಿಯಾನಾದವಳು ಎಂಬುದು ಗೊತ್ತಾಯಿತು ಎಂದು ಪೊಲೀಸ್ ಅಧಿಕಾರಿ ಸಂಪೂರ್ಣ ಕತೆಯನ್ನು ಬಿಚ್ಚಿಟ್ಟಿದ್ದಾರೆ.
ಮೃತ ಯುವತಿ ಪಂಜಾಬ್ನ ಲುಧಿಯಾನಾದ ಮೋತಿನಗರದವಳು. ಆಕೆ 2019ರ ಮೇ ತಿಂಗಳಲ್ಲಿ, ತನ್ನ ಚಿನ್ನಾಭರಣವನ್ನು ತೆಗೆದುಕೊಂಡು ಮನೆಯಿಂದ ಓಡಿಹೋಗಿದ್ದಳು. ಈ ಬಗ್ಗೆ ಆಕೆಯ ಪಾಲಕರು ಪೊಲೀಸರಿಗೆ ದೂರನ್ನೂ ನೀಡಿದ್ದರು. ಆಕೆಯ ಪಾಲಕರಿಗೆ ಈ ಅಮನ್ (ಶಕೀಬ್) ಬಗ್ಗೆ ಗೊತ್ತಿತ್ತು. ಅವರೇ ಆ ಬಗ್ಗೆ ಮಾಹಿತಿ ಕೊಟ್ಟಿದ್ದರು.
ಆದರೆ ಅಮನ್ ಎಂಬುವವನು ಯಾರು ಎಂದು ಪತ್ತೆ ಹಚ್ಚಲು ಮತ್ತಷ್ಟು ವಿಚಾರಣೆ, ತನಿಖೆ ಅನಿವಾರ್ಯವಾಯಿತು. ಆದರೂ ಕೊನೆಗೆ ಸತ್ಯ ಬಯಲಾಯಿತು. ಉತ್ತರ ಪ್ರದೇಶದ ಲೋಹಿಯಾ ಗ್ರಾಮದ ಶಕೀಬ್ ಎಂಬಾತ ತನ್ನ ಹೆಸರನ್ನು ಅಮನ್ ಎಂದು ಬದಲಿಸಿಕೊಂಡು, ಲುಧಿಯಾನಾದ 19ವರ್ಷದ ಯುವತಿಯ ಸ್ನೇಹ ಬೆಳೆಸಿದ್ದ. ಇವರಿಬ್ಬರೂ ಪ್ರೀತಿ ಮಾಡುತ್ತಿದ್ದರು. ಈ ಶಕೀಬ್ ಲುಧಿಯಾನದಲ್ಲಿ ಅಂಗಡಿಯಿಟ್ಟುಕೊಂಡಿದ್ದ. ಆಗಲೇ ಇಬ್ಬರ ಮಧ್ಯೆ ಲವ್ ಶುರುವಾಗಿದ್ದು.
ಮೇ ತಿಂಗಳಲ್ಲಿ ಯುವತಿ ತನ್ನ ಮನೆಯ ಆಭರಣಗಳನ್ನೆಲ್ಲ ಎತ್ತುಕೊಂಡು ಶಕೀಬ್ ಜತೆ ಬಂದಿದ್ದಳು. ಅವರಿಬ್ಬರೂ ದೌರಾಲಾದ ಬಾಡಿಗೆ ಮನೆಯಲ್ಲಿ ಇದ್ದರು. ಆದರೆ ಯುವತಿಗೆ ಆತ ಅಮನ್ ಅಲ್ಲ ಶಕೀಬ್ ಎಂಬುದು ಗೊತ್ತಾಯಿತು. ತಾನು ಪ್ರೀತಿಸಿದವನು ತನಗೆ ಮೋಸ ಮಾಡಿದ ಎಂಬ ಕಾರಣಕ್ಕೆ ಸಿಟ್ಟಾಗಿದ್ದಳು. ಅದಾದ ಮೇಲೆ ಇಬ್ಬರ ನಡುವೆ ಪದೇಪದೆ ಗಲಾಟೆ ನಡೆಯುತ್ತಿತ್ತು.
ಈದ್ ಹಬ್ಬದಂದು ಶಕೀಬ್ ಯುವತಿಗೆ ಕೋಲ್ಡ್ಡ್ರಿಂಕ್ಸ್ ಕೊಟ್ಟಿದ್ದ. ಅದನ್ನು ಕುಡಿಯುತ್ತಿದ್ದಂತೆ ಆಕೆ ಎಚ್ಚರತಪ್ಪಿ ಬಿದ್ದಳು. ನಂತರ ಅವಳನ್ನು ಗದ್ದೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ. ಪೊಲೀಸರಿಗೆ ಯುವತಿಯ ಗುರುತು ಸಿಗಬಾರದು ಎಂಬ ಕಾರಣಕ್ಕೆ ತಲೆಯನ್ನು ಕತ್ತರಿಸಿದ್ದ. ಆಕೆ ತನ್ನ ಕೈ ಮೇಲೆ ಅವಳ ಹೆಸರು ಮತ್ತು ಅಮನ್ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಳು. ಹಾಗಾಗಿ ಕೈಯನ್ನೂ ಕತ್ತರಿಸಿ ಬಿಸಾಕಿದ್ದ ಎಂದು ಪೊಲೀಸ್ ಅಧಿಕಾರಿ ವಿವರಣೆ ನೀಡಿದ್ದಾರೆ.
ಈ ಹತ್ಯೆ ಪ್ರಕರಣದಲ್ಲಿ ಶಕೀಬ್ ಕುಟುಂಬದವರ ಸಹಕಾರವೂ ಇದೆ. ಹಾಗಾಗಿ ಅವರೆಲ್ಲ ಸೇರಿ 6 ಮಂದಿಯನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.
ಶಕೀಬ್ನನ್ನು ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾಗ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಪಕ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿಯಿಂದ ಗನ್ ಕಸಿದು, ಫೈರಿಂಗ್ ಮಾಡಿದ್ದ. ಆತನ ಕಾಲಿಗೆ ಗುಂಡು ಹೊಡೆದು, ಹಿಡಿದಿದ್ದೇವೆ. ಈ ಘಟನೆಯಲ್ಲಿ ಕಾನ್ಸ್ಟೆಬಲ್ ಕೂಡ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)