ಲಖನೌ: ಪಾಕಿಸ್ತಾನ ಗುಪ್ತಚರ ಏಜೆನ್ಸಿ ಐಎಸ್‌ಐ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಮೀರತ್ ಮೂಲದ ಯುವಕನ್ನು ಉತ್ತರ ಪ್ರದೇಶ ವಿಶೇಷ ಕ್ರಿಯಾ ಪಡೆ (ಯುಪಿ-ಎಸ್‌ಟಿಎಫ್) ಗುರುವಾರ (ಆ.17) ಬಂಧಿಸಿದೆ.
ಬಂಧಿತನನ್ನು ಕಲೀಮ್ ಎಂದು ಗುರುತಿಸಲಾಗಿದೆ. ಈತ ಅಕ್ರಮವಾಗಿ ಆಯುಧಗಳನ್ನು ಸಂಗ್ರಹಿಸುತ್ತಿದ್ದ. ಪಾಕಿಸ್ತಾನದ ಐಎಸ್‌ಐ ಜತೆ ಸೇರಿ ಸಂಚು ರೂಪಿಸುತ್ತಿದ್ದ. ದೇಶದಲ್ಲಿ ಉದ್ವಿಗ್ನತೆ ಮತ್ತು ಸಾಮರಸ್ಯವನ್ನು ಕದಡುವ ಉದ್ದೇಶದಿಂದ ದಾಳಿ ನಡೆಸಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗುತ್ತಿತ್ತು ಎಂದು ಎಸ್‌ಟಿಎಫ್ ತಿಳಿಸಿದೆ.
ಎಸ್‌ಟಿಎಫ್ ಹೇಳಿಕೆಯ ಪ್ರಕಾರ ಆರೋಪಿ ಸಲೀಂ, ಚಿತ್ರಗಳನ್ನು ಸೆರೆಹಿಡಿದು ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು ಮತ್ತು ಅದನ್ನು ಪಾಕಿಸ್ತಾನದಲ್ಲಿರುವ ಐಎಸ್‌ಐ ಜತೆಗೆ ವಾಟ್ಸ್ಆ್ಯಪ್ ಮೂಲಕ ಹಂಚಿಕೊಳ್ಳುತ್ತಿದ್ದ. ಅವರು ಕೇಳಿದಾಗಲೆಲ್ಲ ಮಾಹಿತಿ ಸಂಗ್ರಹಿಸಿ ರವಾನಿಸುತ್ತಿದ್ದ ಎಂದು ಎಸ್‌ಟಿಎಫ್ ಹೇಳಿಕೆ ನೀಡಿದೆ.
ಭಾರತದಲ್ಲಿನ ಭದ್ರತೆಗೆ ಸಂಬಂಧಿಸಿದ ಸ್ಥಳಗಳ ಛಾಯಾಚಿತ್ರಗಳು ಮತ್ತು ವಾಟ್ಸ್ಆ್ಯಪ್ ಸಂದೇಶಗಳನ್ನು ಐಎಸ್‌ಐ ಮತ್ತು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಲಾಗಿದೆ. ಅಲ್ಲದೆ, ಆರೋಪಿ ರಾಫೆಲ್ ಜೆಟ್ಸ್ ಫೋಟೋಗಳನ್ನು ಐಎಸ್‌ಐ ಜತೆಗೆ ಹಂಚಿಕೊಂಡಿದ್ದಾನೆಂದು ವರದಿಗಳು ತಿಳಿಸಿವೆ.
ಆರೋಪಿಯು ಪ್ರಸ್ತುತ ಬಂಧನದಲ್ಲಿದ್ದಾನೆ ಮತ್ತು ಹೆಚ್ಚಿನ ಮಾಹಿತಿ ಪಡೆಯಲು ತನಿಖೆ ನಡೆಸಲಾಗುತ್ತಿದೆ. ಆತನೊಬ್ಬನೆ ಈ ಕೆಲಸ ಮಾಡಿದ್ದಾನಾ? ಅಥವಾ ಪಾಕಿಸ್ತಾನದ ಏಜೆನ್ಸಿಗಳಿಗೆ ಮಾಹಿತಿಯನ್ನು ರವಾನಿಸುವ ದೊಡ್ಡ ಜಾಲದ ಭಾಗವಾಗಿದ್ದಾನಾ? ಎಂಬ ಆಯಾಮದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)