ನ್ಯೂಸ್

ತನ್ನ ಕುಟುಂಬವನ್ನೇ ಸರ್ವನಾಶ ಮಾಡಿದ ಪಾಪಿ: ತಂದೆ, ತಾಯಿ, ಅಣ್ಣ, ಅತ್ತಿಗೆ, ಮಕ್ಕಳಿಬ್ಬರನ್ನು ಕೊಂದು ಪೊಲೀಸರಿಗೆ ಶರಣು

ಲಖನೌ: ಆಸ್ತಿ ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನದೇ ಕುಟುಂಬದ ಆರು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶ ರಾಜಧಾನಿ ಲಖನೌದ ಹೊರವಲಯದಲ್ಲಿ ಗುರುವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಅಜಯ್​ ಸಿಂಗ್​(26) ಎಂದು ಗುರುತಿಸಲಾಗಿದೆ. ಕೊಲೆಗೈದ ಬಳಿಕ ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾನೆ.

ಆಸ್ತಿ ವಿವಾದ ಸಂಬಂಧ ಕುಟುಂಬದೊಂದಿಗೆ ಆರೋಪಿ ಸಿಂಗ್ ಮಾತಿಗೆ ಇಳಿದಾಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚೂಪಾದ ಆಯುಧಗಳಿಂದ ಕುಟುಂಬದ ಸದ್ಯಸರ ಮೇಲೆ ಸಿಂಗ್​ ದಾಳಿ ಮಾಡಿದ್ದಾನೆ.​ ಪರಿಣಾಮ ಆರೋಪಿಯ​ ತಾಯಿ, ತಂದೆ, ಹಿರಿಯ ಸಹೋದರ, ಅತ್ತಿಗೆ ಮತ್ತು ಅವರ ಇಬ್ಬರು(ಗಂಡು, ಹೆಣ್ಣು) ಮಕ್ಕಳು ಹತರಾಗಿದ್ದಾರೆ.

ಸಂತ್ರಸ್ತರನ್ನು ಅಮರ್​(60), ರಮಾಸಖಿ(55), ಅರುಣ್​(40), ರಾಮ್ದುಲರಿ(35), ಸೌರಭ್​(7) ಮತ್ತು ಸಾರಿಕ(2) ಎಂದು ಗುರುತಿಸಲಾಗಿದೆ.

ಕುಟುಂಬದ ಆರು ಮಂದಿಯನ್ನು ಕೊಂದು ತಾನೇ ಖುದ್ದಾಗಿ ಬಂದು ಠಾಣೆಗೆ ಶರಣಾಗಿದ್ದಾನೆ ಎಂದು ಪೊಲೀಸ್​ ಆಯುಕ್ತ ಸುಜೀತ್​ ಪಾಂಡೆ ಸುದ್ದಿಗಾರರು ಕೇಳಿದ ಪ್ರಶ್ನಗೆ ಸ್ಪಷ್ಟನೆ ನೀಡಿದ್ದಾರೆ.

ಆರೋಪಿ ಸಿಂಗ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)