ನ್ಯೂಸ್

ಆಕೆ ನನ್ನಿಂದ ಅದನ್ನು ಮುಚ್ಚಿಟ್ಟಳು... ಚೆನ್ನೈನಿಂದ ಮಂಗಳೂರಿಗೆ ಬಂದು ಸಾವಿಗೆ ಶರಣಾದ ಯುಪಿ ವ್ಯಕ್ತಿ! UP Man

UP Man : ತನ್ನ ಗರ್ಲ್​ಫ್ರೆಂಡ್​ ಮೋಸ ಮಾಡಿದ್ದಾಳೆ ಎಂದು ಹೇಳಿ ವಿಡಿಯೋ ಮಾಡಿಟ್ಟು ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ಮಂಗಳೂರಿನ ಲಾಡ್ಜ್‌ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ವ್ಯಕ್ತಿಯನ್ನು ಅಭಿಷೇಕ್​ ಸಿಂಗ್​ (40) ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಘಾಜಿಪುರ್​ ಮೂಲದವರು. ಚೆನ್ನೈನ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ಮಂಗಳೂರಿನ ಲಾಡ್ಜ್​ನಲ್ಲಿ ನೇಣಿಗೆ ಶರಣಾಗಿರುವ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಈತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ, ತನ್ನ ಗರ್ಲ್​ಫ್ರೆಂಡ್​ ವಿರುದ್ಧ ಗಂಭೀರ ಆರೋಪ ಮಾಡಿ, ಅದನ್ನು ವಿಡಿಯೋ ರೆಕಾರ್ಡ್ ಮಾಡಿ ತನ್ನ ಇನ್​ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ಪೇಜ್​ನಲ್ಲಿ ಹಂಚಿಕೊಂಡಿದ್ದಾನೆ.

ಅವಳಿಗೆ ಈ ಹಿಂದೆಯೇ ಮದುವೆ ಆಗಿರುವುದು ಮತ್ತು ಆಕೆ ಒಂದು ಹೆಣ್ಣು ಮಗುವಿನ ತಾಯಿ ಎಂಬುದು ನನಗೆ ತಿಳಿದಿರಲಿಲ್ಲ. ಅವಳು ನನ್ನನ್ನು ಸಂಕಷ್ಟದ ಪರಿಸ್ಥಿತಿಗೆ ತಳ್ಳಿದ್ದಾಳೆ ಮತ್ತು ನನ್ನ ಜೀವನ ಈಗ ತುಂಬಾ ಕಷ್ಟದಲ್ಲಿದೆ. ಆಕೆ ನನ್ನಿಂದ ಹಣ ಕೇಳುತ್ತಿದ್ದಾಳೆ. ಕೊಡದಿದ್ದರೆ ನಾನು ಕೆಲಸ ಮಾಡುವ ಕಂಪನಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ವಿಡಿಯೋದಲ್ಲಿ ಅಭಿಷೇಕ್​ ಸಿಂಗ್​ ಆರೋಪಿಸಿದ್ದಾರೆ.

ನಾನು ಆಕೆಯ ಬಲೆಗೆ ಬಿದ್ದು ತಪ್ಪು ಮಾಡಿದೆ. ನನ್ನ ಜೀವನ ಈಗ ಹಾಳಾಗಿದೆ. ಈಗ ನಾನು ಬದುಕುವುದರಲ್ಲಿ ಅರ್ಥವೇನು? ಅವಳು ಆ ಹಂತಕ್ಕೆ ನನ್ನನ್ನು ತಂದಿದ್ದಾಳೆ. ಇದು ನನ್ನ ಮರಣಶಾಸನ ಎಂದು ಪರಿಗಣಿಸಿ. ಆಕೆ ಜನರನ್ನು ಬಳಸಿಕೊಳ್ಳುತ್ತಾಳೆ ಮತ್ತು ತನ್ನ ಖರ್ಚುಗಳನ್ನು ಅವರಿಂದ ಭರಿಸುತ್ತಾಳೆ ಹಾಗೂ ಲಾಭ ಮಾಡಿಕೊಳ್ಳುತ್ತಾಳೆ ಎಂದು ಅಭಿಷೇಕ್​ ಹೇಳಿದ್ದಾರೆ.

ಮಹಿಳೆಯ ಮುಖವಾಡ ಕಳಚಿ ಬಿದ್ದಾಗ ಅಭಿಷೇಕ್​ ತುಂಬಾ ನೋವು ಅನುಭವಿಸಿದ ಎಂದು ಆತನ ಸಹೋದರ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾನೆ. ಸಹೋದರ ನೀಡಿದ ದೂರಿನ ಪ್ರಕಾರ, ಅಭಿಷೇಕ್, ಮೋನಿಕಾ ಸಿಹಾಗ್ ಎಂಬಾಕೆಯ ಜೊತೆ ಸಂಬಂಧ ಹೊಂದಿದ್ದರು. ಮಾರ್ಚ್ 1 ರಂದು ಬೆಳಿಗ್ಗೆ 11.30ರ ಸುಮಾರಿಗೆ, ಮೋನಿಕಾ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆಂದು ಅಭಿಷೇಕ್ ತನ್ನ ಸಹೋದರನಿಗೆ ತಿಳಿಸಿದ್ದಾನೆ. ಆಕೆಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿದೆ ಅಂತಾನೂ ಹೇಳಿದ್ದಾನೆ. ಇನ್ನು ಸಿಂಗ್​ನಿಂದ ಮೋನಿಕಾ ಸುಮಾರು 10 ರಿಂದ 15 ಲಕ್ಷ ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಮಾರ್ಚ್ 1 ರಂದು ಮಧ್ಯಾಹ್ನ 3.45ಕ್ಕೆ, ಅಭಿಷೇಕ್ ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ವಿಡಿಯೋಗಳು ಮತ್ತು ಫೋಟೋಗಳನ್ನು ಪೋಸ್ಟ್ ಮಾಡಿ, ತಮ್ಮ ಪರಿಸ್ಥಿತಿಗೆ ಮೋನಿಕಾ ಸಿಹಾಗ್ ಕಾರಣ ಎಂದು ಆರೋಪಿಸಿದ್ದಾರೆ. ಇದರ ನಂತರ, ಮಧ್ಯಾಹ್ನ 2.30 ರಿಂದ ರಾತ್ರಿ 10.30 ರ ನಡುವೆ ತಮ್ಮ ಲಾಡ್ಜ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕರ್ನಾಟಕ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 108ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಗಾಗಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಪ್ರಸ್ತುತ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)