ನ್ಯೂಸ್

23 ಮಕ್ಕಳ ಒತ್ತೆಯಾಳು ಪ್ರಕರಣ: ಬಗೆದಷ್ಟು ತೆರೆದುಕೊಳ್ಳುತ್ತಿದೆ ಮೃತ ಆರೋಪಿಯ ಭಯಾನಕ ಯೋಜನೆ

ಫಾರೂಕಾಬಾದ್: ಉತ್ತರ ಪ್ರದೇಶದ 23 ಮಕ್ಕಳ ಒತ್ತೆಯಾಳು ಪ್ರಕರಣ ಸಂಬಂಧ ತನಿಖೆ ನಡೆದಷ್ಟು ಭಯಾನಕ ಮಾಹಿತಿ ಹೊರಬರುತ್ತಿದೆ. ಪೊಲೀಸ್​ ಗುಂಡೇಟಿಗೆ ಬಲಿಯಾದ ಆರೋಪಿ ಸುಭಾಷ್​ ಬಾಥಮ್​ ಒಂದು ತಿಂಗಳಿನಿಂದಲೂ ಯೋಜನೆ ರೂಪಿಸಿ, ನಿರಂತರವಾಗಿ ಅದೇ ರೀತಿಯ ಪ್ರಕರಣಗಳನ್ನು ಅಧ್ಯಯನ ನಡೆಸುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

ಪ್ರಕರಣವನ್ನು ನೋಡಲು ಒಂದು ತಿಂಗಳ ಹಿಂದೆಯೇ ಆರೋಪಿ ಯೋಜನೆ ರೂಪಿಸಿದಂತಿದೆ. ಆರೋಪಿಯ ಮೊಬೈಲ್ ಫೋನ್​ ಪರಿಶೀಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಬಾಂಬ್​ ತಯಾರಿಸುವ ತಂತ್ರಗಳನ್ನು ಅಂತರ್ಜಾಲದಲ್ಲಿ ಹುಡುಕಾಡಿ ಡೌನ್​ಲೋಡ್​ ಮಾಡಿಕೊಂಡಿದ್ದ. ಅಲ್ಲದೆ, 2004ರಲ್ಲಿ ರಷ್ಯಾದಲ್ಲಿ ನಡೆದಿದ್ದ ಮಕ್ಕಳ ಒತ್ತೆಯಾಳು ಪ್ರಕರಣದ ಜತೆಗೆ ಇನ್ನಿತರ ಪ್ರಕರಣಗಳನ್ನು ಬಾಥಮ್ ಅಧ್ಯಯನ​ ಮಾಡಿದ್ದ ಎಂದು ಕಾನ್ಪುರ ವಲಯದ ಇನ್ಸ್​ಪೆಕ್ಟರ್​ ಜನರಲ್​ ಮೊಹಿತ್​ ಅಗರ್​ವಾಲ್​ ಮಾಹಿತಿ ನೀಡಿದರು.

ಆರೋಪಿ ಬಾಥಮ್​ ಹತ್ತು ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದ. ಅಲ್ಲದೆ, ದರೋಡೆ ಪ್ರಕರಣದಲ್ಲಿ ನಾಲ್ಕು ತಿಂಗಳು ಹಿಂದಷ್ಟೇ ಜೈಲಿಗೆ ಹೋಗಿ ಬಂದಿದ್ದ. ಬಳಿಕ ಒತ್ತೆಯಾಳಾಗಿರಿಸಿಕೊಳ್ಳುವ ಸಂಬಂಧ ಯೋಜನೆ ರೂಪಿಸಿದ್ದಾನೆ. ತನ್ನ ಜೈಲು ವಾಸಿಗಳಿಂದಲೂ ಕೆಲವು ಮಾಹಿತಿಯನ್ನು ಪಡೆದುಕೊಂಡಿದ್ದ. ಅವರ ಸಹಾಯದಿಂದಲೇ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿದ್ದ ಎಂದು ಅಗರ್​ವಾಲ್ ಪ್ರಕರಣದ ಎಳೆಯನ್ನು ಬಿಚ್ಚಿಟ್ಟರು.

ಮೊಬೈಲ್​ ಪರಿಶೀಲಿಸಿದಾಗ ಬಾಥಮ್ ಭೇಟಿಯಾದ ವ್ಯಕ್ತಿಗಳ ಸಂಪರ್ಕವು ಪತ್ತೆಯಾಗಿದೆ. ಈ ಸಂಬಂಧ ತನಿಖೆಯು ಮುಂದುವರಿದಿದೆ. ಯಾರಾದರೂ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದು ಕಂಡುಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮನೆಯ ಅಡಿಪಾಯದೊಳಗೆ ಬಾಂಬ್​ ಇಟ್ಟಿರುವುದಾಗಿ ಗುರುವಾರ ಬೆದರಿಕೆಯೊಡ್ಡಿದ್ದ. ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆವು. ಆದರೆ ಫೈರಿಂಗ್​ ನಡೆಸಿದ. ಅಲ್ಲದೆ, ಬಾಂಬ್​ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ. ಬಳಿಕ ವಿಧಿಯಿಲ್ಲದೇ ಆತನ ಮೇಲೆ ಫೈರಿಂಗ್​ ನಡೆಸಬೇಕಾಯಿತು. ಈ ವೇಳೆ ಬಾಥಮ್​ ಕಲ ಇಂಧನವನ್ನು ನೆಲಕ್ಕೆ ಚೆಲ್ಲಿದ್ದ. ಇದು ಆತ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದ ಎಂಬುದನ್ನು ಸೂಚಿಸುತ್ತದೆ ಎಂದು ಅಗರ್​ವಾಲ್​ ಹೇಳಿದ್ದಾರೆ.

ಆರೋಪಿ ಬಾಥಮ್​ ಪತ್ನಿ ಮಕ್ಕಳ ಕುಟುಂಬದಿಂದ ತಲಾ ಒಂದೊಂದು ಕೋಟಿ ರೂ.ಗೆ ಬೇಡಿಕೆಗೆ ಯೋಜನೆ ರೂಪಿಸಿದ್ದಳು ಎಂದು ತನಿನೆಯಲ್ಲಿ ತಿಳಿದುಬಂದಿದೆ. ಆಕೆಯನ್ನು ಬಾಥಮ್​ ಮೃತಪಟ್ಟ ದಿನವೇ ಸ್ಥಳೀಯರು ಕಲ್ಲು ತೂರಾಟ ನಡೆಸಿ, ಥಳಿಸಿ ಹತ್ಯೆಗೈದರು. (ಏಜೆನ್ಸೀಸ್​)