ನ್ಯೂಸ್

ಆಕ್ಸಿಜನ್ ಪೂರೈಕೆ ಮೇಲ್ವಿಚಾರಣೆಗೆ ಲೈವ್ ಪೋರ್ಟಲ್ ಆರಂಭ

ಲಖನೌ : ರಾಜ್ಯದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್​ನ ಬೇಡಿಕೆಯನ್ನು ಸಕಾಲಿಕವಾಗಿ ಪೂರೈಸುವ ಪ್ರಯತ್ನದಲ್ಲಿ ಉತ್ತರ ಪ್ರದೇಶ ಸರ್ಕಾರವು, ಡಿಜಿಟಲ್ ಪ್ಲಾಟ್‌ಫಾರ್ಮ್ ಒಂದನ್ನು ಪ್ರಾರಂಭಿಸಿದೆ. ಆಮ್ಲಜನಕ ಪೂರೈಕೆ ವ್ಯವಸ್ಥೆಯ ನೇರ ಮೇಲ್ವಿಚಾರಣೆ ಮಾಡಲಿರುವ ಈ ವೆಬ್​ ಪೋರ್ಟಲ್​ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಚಾಲನೆ ನೀಡಿದ್ದಾರೆ.

ಈ ಮೇ​ಲ್ವಿಚಾರಣಾ ವ್ಯವಸ್ಥೆಯಲ್ಲಿ ವಿವಿಧ ಜಿಲ್ಲೆಗಳಲ್ಲಿನ ಆಸ್ಪತ್ರೆಗಳಿಂದ ಆಮ್ಲಜನಕದ ಬೇಡಿಕೆ, ವಾಹನಗಳಲ್ಲಿ ಆಮ್ಲಜನಕದ ಲೋಡಿಂಗ್​, ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳ ಲೈವ್​ ಲೊಕೇಶನ್ ಮತ್ತು ಆಸ್ಪತ್ರೆಗಳಿಗೆ ಪೂರೈಕೆ ಮತ್ತು ಅದರ ಬಳಕೆಯ ಕುರಿತಾಗಿ ಲೈವ್ ಮಾಹಿತಿ ಲಭ್ಯವಿರುತ್ತದೆ. ಈ ವೆಬ್ ಪೋರ್ಟಲ್ ಲಿಂಕ್ಅನ್ನು ಆಮ್ಲಜನಕ ಪೂರೈಕೆ ಸರಪಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ನೌಕರರು ಬಳಸಬಹುದು. ಅಗತ್ಯಕ್ಕೆ ಅನುಗುಣವಾಗಿ ಆಸ್ಪತ್ರೆಗಳು ಬೇಡಿಕೆಯ ವಿವರಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬಹುದು ಎನ್ನಲಾಗಿದೆ.

ರೋಡಿಕ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಈ ವೇದಿಕೆಯನ್ನು ರಚಿಸಿದ್ದು, ಆಹಾರ ಮತ್ತು ಔಷಧ ಇಲಾಖೆ ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗೃಹ ಇಲಾಖೆ ಮತ್ತು ಸಾರಿಗೆ ಇಲಾಖೆಗಳೆಲ್ಲ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲಿವೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕೆ.ಅವಸ್ಥಿ ತಿಳಿಸಿದ್ದಾರೆ. (ಏಜೆನ್ಸೀಸ್)