UP dowry murder case : ದುರಾಸೆಗೆ ಯಾವುದೇ ಮಿತಿ ಇಲ್ಲ. ಆದರೆ, ಅದೇ ದುರಾಸೆ ಮನುಷ್ಯನನ್ನು ಎಂಥಾ ಕೀಳು ಮಟ್ಟಕ್ಕೆ ಇಳಿಸಿ ಬಿಡುತ್ತದೆ ಅನ್ನೋದಕ್ಕೆ ಉತ್ತರ ಪ್ರದೇಶದ ವರದಕ್ಷಿಣೆ ಪ್ರಕರಣ ತಾಜಾ ಸಾಕ್ಷಿಯಾಗಿದೆ. ತಂದೆಯ ಕಿರಾಣಿ ಅಂಗಡಿಯ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದ ಇಬ್ಬರು ಸಹೋದರರು ಮದುವೆಯ ವರದಕ್ಷಿಣೆಯಾಗಿ ಹೈ ಎಂಡ್ ಎಸ್ಯುವಿ ಕಾರು, ರಾಯಲ್ ಎನ್ಫೀಲ್ಡ್ ಬೈಕ್, ಸುಮಾರು 500 ಗ್ರಾಂ ಚಿನ್ನ ಮತ್ತು ನಗದನ್ನು ಪಡೆದರೂ ಅವರ ದುರಾಸೆ ಅಷ್ಟಕ್ಕೆ ನಿಲ್ಲಲಿಲ್ಲ. ಕೊನೆಗೆ ಇದು ಎಲ್ಲಿಯವರೆಗೆ ಹೋಯಿತು ಎಂದರೆ ಕೊನೆಗೆ ಓರ್ವ ಹೆಣ್ಣನ್ನೇ ಬಲಿ ಪಡೆಯಿತು. ಈ ಪ್ರಕರಣ ಇಡೀ ದೇಶದಲ್ಲೇ ಕಳವಳವನ್ನು ಉಂಟು ಮಾಡಿದ್ದು, ಎಲ್ಲರನ್ನು ಚರ್ಚೆಗೆ ದೂಡಿದೆ.
ಈ ಪ್ರಕರಣದ ಪ್ರಮುಖ ವಿಲನ್ಗಳು ಯಾರೆಂದರೆ ನಿರೋದ್ಯೋಗಿ ಸಹೋದರರಾದ ವಿಪಿನ್ ಮತ್ತು ರೋಹಿತ್. ಇವರಿಬ್ಬರು 2016ರಲ್ಲಿ ಸಹೋದರಿಯರಾದ ನಿಕ್ಕಿ ಮತ್ತು ಕಾಂಚನ್ರನ್ನು ವಿವಾಹವಾದರು. ವಿಪಿನ್, ನಿಕ್ಕಿಯನ್ನು ವರಿಸಿದರೆ, ರೋಹಿತ್, ಕಾಂಚನ್ಗಳನ್ನು ಮದುವೆಯಾದನು. ಏಕಕಾಲದಲ್ಲಿ ಇಬ್ಬರ ಮದುವೆ ನೆರವೇರಿತು. ಬಹಳ ವಿಜೃಂಭಣೆಯಿಂದ ಮದುವೆ ಮಾಡಿಕೊಡಲಾಯಿತು. ಹೈ ಎಂಡ್ ಎಸ್ಯುವಿ ಕಾರು, ರಾಯಲ್ ಎನ್ಫೀಲ್ಡ್ ಬೈಕ್, ಸುಮಾರು 500 ಗ್ರಾಂ ಚಿನ್ನ ಮತ್ತು ನಗದನ್ನು ವರದಕ್ಷಿಣೆಯಾಗಿ ನೀಡಲಾಯಿತು. ಆರಂಭದಲ್ಲಿ ಜೀವನ ಚೆನ್ನಾಗಿಯೇ ಸಾಗುತ್ತಿತ್ತು. ಆದರೆ, ದಿನಗಳು ಕಳೆದಂತೆ ಸಹೋದರರಿಬ್ಬರ ಅಸಲಿ ಮುಖಗಳು ಅನಾವರಣಗೊಂಡಿತು. ಅಲ್ಲದೆ, ಸಹೋದರರಿಗೆ ಅವರು ಮನೆಯವರು ಕೂಡ ಸಾಥ್ ನೀಡಿದರು. ತಮ್ಮ ಮನೆಯ ಸೊಸೆಯಂದಿರಿಗೆ ಚಿತ್ರ ಹಿಂಸೆ ನೀಡಲು ಆರಂಭಿಸಿದರು.
ನಿಕ್ಕಿ ಮತ್ತು ಕಾಂಚನ್ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡುವುದು ವಿಪಿನ್ಗೆ ಇಷ್ಟವಿರಲಿಲ್ಲ. ಸಹೋದರಿಯರು ತಮ್ಮ ಸಲೂನ್ ವ್ಯವಹಾರವನ್ನು ಪ್ರಚಾರ ಮಾಡಲು ತಮ್ಮ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದರು. ಪೋಸ್ಟ್‌ಗಳ ಮೂಲಕ ತಮ್ಮ ವ್ಯವಹಾರದ ಪ್ರಚಾರ ಮಾಡುತ್ತಿದ್ದರು ಎಂದು ಮೃತ ನಿಕ್ಕಿಯ ಕುಟುಂಬ ಹೇಳಿದೆ. ಸಹೋದರಿಯರು ತಮ್ಮ ರೀಲ್‌ಗಳಲ್ಲಿ, ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ತಮ್ಮ ಮೇಕಪ್ ಮತ್ತು ಬೂಟಿಕ್ ಕೆಲಸವನ್ನು ಪ್ರದರ್ಶಿಸುತ್ತಿದ್ದರು. ಇದಕ್ಕೆ ಅತ್ತೆ ಮನೆಯವರಿಂದ ಯಾವುದೇ ಸಹಾಯ ಇರಲಿಲ್ಲ. ಆದರೆ, ಸಹೋದರಿಯರಿಗೆ ಅವರ ತಂದೆ ಆರ್ಥಿಕ ನೆರವು ನೀಡುತ್ತಿದ್ದರು. ತಮ್ಮ ಮಕ್ಕಳು ಸ್ವತಂತ್ರರಾಗಲು ತಂದೆ ಬಯಸಿದ್ದರು.
ಆರೋಪಿ ವಿಪಿನ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಲು ಇಷ್ಟವಿರಲಿಲ್ಲ ಆದರೆ, ಸಹೋದರಿಯರು ಸಂಪಾದಿಸುತ್ತಿದ್ದ ಹಣದಿಂದ ಐಷಾರಾಮಿ ಜೀವನ ಮಾತ್ರ ನಡೆಸುತ್ತಿದ್ದರು. ಅಂದಹಾಗೆ, ಇಂದು ಪ್ರತಿಯೊಬ್ಬರು ಇನ್‌ಸ್ಟಾಗ್ರಾಂ ಖಾತೆ ಹೊಂದಿರುವುದು ಸಾಮಾನ್ಯ. ಬಹುತೇಕ ಮಂದಿ ನಿತ್ಯವೂ ಸಾವಿರಾರು ರೀಲ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇದು ಕೂಡ ತುಂಬಾ ಸಾಮಾನ್ಯ. ಆದರೆ, ಕೆಟ್ಟ ಮನಸ್ಥಿತಿ ಹೊಂದಿರುವ ಜನರು ಎಲ್ಲದರಲ್ಲೂ ತಪ್ಪು ಹುಡುಕುವ ಮತ್ತು ತಪ್ಪು ನೋಡುವ ದುರಾಭ್ಯಸವನ್ನು ಬೆಳೆಸಿಕೊಂಡಿದ್ದಾರೆ. ಈ ಸಹೋದರರ ವಿಚಾರದಲ್ಲೂ ಅದೇ ನಡೆದಿದ್ದು. ಇಬ್ಬರಿಗೂ ಇನ್‌ಸ್ಟಾಗ್ರಾಂ ಎಂಬುದು ಒಂದು ನೆಪವಾಗಿತ್ತಷ್ಟೇ, ಅವರಿಗೆ ಬೇಕಾಗಿದ್ದು ಹಣ ಮಾತ್ರ. ಅದಕ್ಕಾಗಿ ಅವರು ನಿಕ್ಕಿ ಮತ್ತು ಕಾಂಚನ್ ಬಳಿ ಹಣಕ್ಕಾಗಿ ಆಗಾಗ ಬೇಡಿಕೆ ಇಡುತ್ತಿದ್ದರು. ಆದರೆ, ಸಹೋದರಿಯರಿಬ್ಬರು ತಾವು ಸಂಪಾದಿಸಿದ ಹಣವನ್ನು ತಮ್ಮ ಖರ್ಚು ಮತ್ತು ಮಕ್ಕಳ ಭವಿಷ್ಯಕ್ಕಾಗಿ ಇಟ್ಟುಕೊಂಡಿದ್ದರು. ಈ ಒಂದು ಸದುದ್ದೇಶವೇ ಜಗಳಗಳಿಗೆ ಕಾರಣವಾಯಿತು ಎಂದು ಮೃತ ನಿಕ್ಕಿಯ ಚಿಕ್ಕಪ್ಪ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ನಿಕ್ಕಿ ಮತ್ತು ಕಾಂಚನ್ 2016, ಡಿಸೆಂಬರ್ 10 ರಂದು ಒಂದೇ ಸಮಾರಂಭದಲ್ಲಿ ಸಹೋದರರಾದ ವಿಪಿನ್ ಮತ್ತು ರೋಹಿತ್ ಅವರನ್ನು ವಿವಾಹವಾದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು ಎಂದು ನಿಕ್ಕಿಯ ಚಿಕ್ಕಪ್ಪ ಹೇಳಿದ್ದಾರೆ. ನಾವು ಕಾರು, ಬಟ್ಟೆ, ಆಭರಣಗಳನ್ನು ನೀಡಿದ್ದೇವೆ. ಮಗುವಾದಾಗ ಬೈಕ್ಗೆ ಬೇಡಿಕೆ ಇಡಲಾಗುತ್ತಿತ್ತು. ಅದರಂತೆ ಬೈಕ್ ಕೂಡ ನೀಡಿದ್ದೇವೆ. ಅವರೆಲ್ಲ ಸೇರಿ ನಮ್ಮ ಬಳಿ ಸುಲಿಗೆ ಮಾಡಬಹುದು ಎಂದು ಆ ಸಮಯದಲ್ಲಿ ನಮಗೆ ಅರ್ಥವಾಯಿತು. ಆರೋಪಿ ವಿಪಿನ್ಗೆ ಮದ್ಯದ ಚಟ ಇತ್ತು ಮತ್ತು ಆಗಾಗ್ಗೆ ಪತ್ನಿಯ ಜತೆ ಜಗಳವಾಡುತ್ತಿದ್ದನು. ಇದಿಷ್ಟೇ ಅಲ್ಲದೆ, ಬೇರೊಂದು ಯುವತಿಯ ಜೊತೆ ಅಕ್ರಮ ಸಂಬಂಧ ಕೂಡ ಇಟ್ಟುಕೊಂಡಿದ್ದನು. ತನ್ನ ಹಾದಿಗೆ ನಿಕ್ಕಿ ಅಡ್ಡಲಾಗಿದ್ದಾಳೆ ಎಂದು ವಿಪಿನ್ ಭಾವಿಸಿದ್ದ. ಹೀಗಾಗಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ನಿಕ್ಕಿಯ ಚಿಕ್ಕಪ್ಪ ಹೇಳಿದ್ದಾರೆ.
ಇನ್ನು ವಿಪಿನ್ ಮತ್ತು ರೋಹಿತ್ ಹೆಚ್ಚಾಗಿ ತಡರಾತ್ರಿಯವರೆಗೂ ಹೊರಗೆ ಇರುತ್ತಿದ್ದರು. ಅಲ್ಲದೆ, ನಾವು ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ ಎಂದು ನಿಕ್ಕಿಯ ಸಹೋದರಿ ಕಾಂಚನ್ ಹೇಳಿದ್ದಾರೆ. ಎಲ್ಲಿದ್ದೀರಿ ಎಂದು ಕೇಳಿದರೆ, ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಅವರು ಇತರ ಮಹಿಳೆಯರೊಂದಿಗೆ ಸಮಯ ಕಳೆಯುತ್ತಿದ್ದರು. ಈ ಬಗ್ಗೆ ನಾವು ಅವರನ್ನು ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದರು. ನಾವು ಎಷ್ಟೋ ರಾತ್ರಿಗಳನ್ನು ಅಳುತ್ತಾ ಕಳೆದಿದ್ದೇವೆ ಎಂದು ಕಾಂಚನ್ ಹೇಳಿದ್ದಾರೆ.
ನಿಕ್ಕಿಯ ತಂದೆ ಭಿಕಾರಿ ಸಿಂಗ್ ಪೈಲಾ ಮರ್ಸಿಡಿಸ್ ಕಾರು ಹೊಂದಿದ್ದರು. ಹೀಗಾಗಿ ವಿಪಿನ್ ನಿಕ್ಕಿಯ ಬಳಿ ಐಷಾರಾಮಿ ಕಾರನ್ನು ಕೇಳುತ್ತಿದ್ದನು. ವಿಪಿನ್ ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಕಾರಿಗೆ ಬೇಡಿಕೆ ಇಟ್ಟಿದ್ದ. ಮರ್ಸಿಡಿಸ್ ಅಥವಾ 60 ಲಕ್ಷ ರೂ.ಗಳನ್ನು ಕೊಡಬೇಕೆಂದು ಒತ್ತಾಯ ಮಾಡುತ್ತಿದ್ದ. ಕಳೆದ ಜನ್ಮಾಷ್ಟಮಿಯಂದು ವಿಪಿನ್, ನಿಕ್ಕಿಯ ಮೇಲೆ ಹಲ್ಲೆ ನಡೆಸಿದ್ದ. ನೋವು ತಾಳಲಾರದೇ ನಿಕ್ಕಿ ತನ್ನ ಕುಟುಂಬಕ್ಕೆ ಮಾಹಿತಿ ನೀಡಿದಳು. ಇದರಿಂದ ಕೋಪಗೊಂಡ ನಿಕ್ಕಿಯ ತಂದೆ ಮತ್ತು ಇತರ ಸಂಬಂಧಿಕರು ವಿಪಿನ್ ಮನೆಗೆ ಹೋಗಿ, ಆಕೆಯನ್ನು ಮನೆಗೆ ಕರೆತರಲು ಮುಂದಾಗಿದ್ದರು. ಆದರೆ, ವಿಪಿನ್ ಕುಟುಂಬಸ್ಥರು ಮತ್ತು ಸಂಬಂಧಿಕರು ಇನ್ನು ಮುಂದೆ ಈ ರೀತಿ ಮತ್ತೆ ಸಂಭವಿಸುವುದಿಲ್ಲ ಎಂದು ಭರವಸೆ ನೀಡಿದರು. ಪ್ರತಿ ಬಾರಿಯೂ ಇಂತಹ ಭರವಸೆಗಳನ್ನು ನೀಡುತ್ತಿದ್ದರು. ಆದರೆ, ಇದೀಗ ಆ ಭರವಸೆ ಒಂದು ಹೆಣ್ಣು ಮಗಳನ್ನೇ ಬಲಿ ಪಡೆದುಕೊಂಡಿದೆ ಎಂದು ನಿಕ್ಕಿಯ ಸಂಬಂಧಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಹಣದ ದಾಹಕ್ಕೆ ಗಂಡ ಮತ್ತು ಆತನ ಹೆತ್ತವರು ಸೇರಿ ಪತ್ನಿಗೆ ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಮೃತಳನ್ನು ನಿಕ್ಕಿ ಎಂದು ಗುರುತಿಸಲಾಗಿದೆ. ಈಕೆ 2016ರಲ್ಲಿ ಸಿರ್ಸಾ ಮೂಲದ ವಿಪಿಎನ್ ಎಂಬಾತನನ್ನು ಮದುವೆಯಾಗಿದ್ದಳು. ಕಳೆದ ಗುರುವಾರ (ಆಗಸ್ಟ್ 21) ಗಂಭೀರ ಸುಟ್ಟು ಗಾಯಗಳಿಂದ ನಿಕ್ಕಿಯನ್ನು ಗ್ರೇಟರ್ ನೋಯ್ಡಾದ ಫೋರ್ಟೀಸ್ ಆಸ್ಪತ್ರೆಗೆ ಕರೆತಂದಾಗ ಘಟನೆ ಬೆಳಕಿಗೆ ಬಂದಿತು. ಗಂಭೀರ ಗಾಯಗೊಂಡಿದ್ದ ನಿಕ್ಕಿಯನ್ನು ಪರೀಕ್ಷಿಸಿದ ಫೋರ್ಟೀಸ್ ಆಸ್ಪತ್ರೆ ವೈದ್ಯರು, ಉತ್ತಮ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅಂತೆಯೇ, ಆಕೆಯನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಮದುವೆ ಸಮಯದಲ್ಲಿ ಭಾರೀ ವರದಕ್ಷಿಣೆ ನೀಡಲಾಗಿತ್ತು. ಆದರೆ, ಇಷ್ಟಕ್ಕೆ ಗಂಡನ ಮನೆಯವರ ಹಣದಾಹ ತಣಿಸಲಿಲ್ಲ. ಮತ್ತೆ 36 ಲಕ್ಷ ರೂ. ಹಣ ತೆಗೆದುಕೊಂಡು ಬರುವಂತೆ ವಿಪಿನ್ (ಮೃತ ಯುವತಿಯ ಗಂಡ) ಮತ್ತು ಆತನ ಕುಟುಂಬ ನಿಕ್ಕಿಯನ್ನು ಒತ್ತಾಯಿಸಿದರು. ಅಷ್ಟೊಂದು ಹಣವನ್ನು ತೆಗೆದುಕೊಂಡು ಬರಲು ಸಾಧ್ಯವಾಗದಿದ್ದಾಗ, ಮನಬಂದತೆ ಥಳಿಸಿದ ಗಂಡನ ಮನೆಯವರು, ಆಕೆಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿದ್ದಾರೆ. ಈ ಭಯಾನಕ ಕೃತ್ಯವನ್ನು ಮೃತ ಯುವತಿಯ 6 ವರ್ಷದ ಪುಟ್ಟ ಮಗುವೇ ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ. ನನ್ನ ಕಣ್ಣ ಮುಂದೆಯೇ ನನ್ನ ಅಪ್ಪ ನನ್ನ ತಾಯಿಯನ್ನು ಕೊಂದರು ಎಂದು ಹೇಳಿರುವುದು ಅನೇಕರ ಕಣ್ಣಂಚಲ್ಲಿ ನೀರು ತರಿಸಿದೆ.
ಬಂಧಿತನಾದ ಆರೋಪಿ ವಿಪಿನ್, ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಯಿತು. ಗುಂಡೇಟಿನ ನೋವಿನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿಪಿನ್ಗೆ ಪೊಲೀಸರು ಸರಣಿ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಆರೋಪಿ, “ಈ ಕೃತ್ಯದಲ್ಲಿ ನನಗೆ ಯಾವುದೇ ಪಶ್ಚಾತಾಪವಿಲ್ಲ. ನಾನು ಆಕೆಗೆ ಬೆಂಕಿ ಹಚ್ಚಲಿಲ್ಲ. ಅವಳೇ ಆತ್ಮಹತ್ಯೆ ಮಾಡಿಕೊಂಡಿದ್ದು. ಗಂಡ-ಹೆಂಡತಿ ಮಧ್ಯೆ ಇಂತಹ ಜಗಳಗಳು ನಡೆಯುತ್ತಲೇ ಇರುತ್ತದೆ. ಇದು ತೀರ ಸಾಮಾನ್ಯ. ನಾನವಳನ್ನು ಕೊಂದಿಲ್ಲ” ಎಂದು ಹೇಳಿರುವುದಾಗಿ ‘ಪಿಟಿಐ’ ವರದಿ ಉಲ್ಲೇಖಿಸಿದೆ. ಪ್ರಸ್ತುತ, ವಿಪಿನ್ ತಾಯಿಯನ್ನು ಬಂಧಿಸಿರುವ ಖಾಕಿ ಪಡೆ, ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.
ಈ ಕುರಿತು ‘ಎನ್ಡಿಟಿವಿ’ಗೆ ಪ್ರತಿಕ್ರಿಯಿಸಿರುವ ಯುವತಿಯ ತಂದೆ ಭಿಕಾರಿ ಸಿಂಗ್ ಪೈಲಾ, “ಅವರು ಕೊಲೆಗಾರರು. ಮಗಳನ್ನು ಕೊಂದ ಆಕೆಯ ಅತ್ತೆ-ಮಾವ, ಗಂಡನನ್ನು ಗುಂಡಿಕ್ಕಿ ಹತ್ಯೆಗೈಯಬೇಕು. ಅವರ ಮನೆಯನ್ನು ಛಿದ್ರಗೊಳಿಸಬೇಕು. ನನ್ನ ಪುತ್ರಿ ಬ್ಯೂಟಿ ಪಾರ್ಲರ್ ನಡೆಸುವ ಮೂಲಕ ಮಗನನ್ನು ನೋಡಿಕೊಳ್ಳುತ್ತಿದ್ದಳು. ಅಂಥವಳಿಗೆ ಈ ರೀತಿ ಚಿತ್ರಹಿಂಸೆ ನೀಡಿದ್ದಾರೆ. ಅವರ ಇಡೀ ಕುಟುಂಬವೇ ಪಿತೂರಿಯಲ್ಲಿ ಭಾಗಿಯಾಗಿದೆ” ಎಂದು ಕಣ್ಣೀರಿಟ್ಟಿದ್ದಾರೆ. (ಏಜೆನ್ಸೀಸ್)