ಗೋರಖ್ಪುರದ ಕೂಡಾಘಾಟ್ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಪಿಡಿಎ ರಥಯಾತ್ರೆ ವೇಳೆ ಘಟನೆ.
ಬುಲ್ಡೋಜರ್ ಡಿಕ್ಕಿಯಾಗಿ ಸ್ಥಳೀಯ ಬಿಜೆಪಿ ನಾಯಕರ 12 ವರ್ಷದ ಪುತ್ರ ಆರ್ಯವರ್ಧನ್ ಸಿಂಗ್ ಸಾವು.
ರ್ಯಾಲಿಯಲ್ಲಿ ಹೂ ತರುತ್ತಿದ್ದ ಬುಲ್ಡೋಜರ್ ಡಿಕ್ಕಿ ಹೊಡೆದಿದೆ ಎಂದು ಆರೋಪ.
ಗೋರಖ್ಪುರ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ...ರಾಜಕೀಯ ಪಕ್ಷಗಳು ಸಂಭ್ರಮೋಪದಿ ನಡೆಯುತ್ತಿದೆ. ಈ ಮಧ್ಯೆ ಸಮಾಜವಾದಿ ಪಕ್ಷದ ಪಿಡಿಎ ರಥಯಾತ್ರೆ ವೇಳೆ ದುರ್ಘಟನೆಯೊಂದು ಸಂಭವಿಸಿದೆ. ಹೌದು, ಗೋರಖ್ಪುರದಲ್ಲಿ ಅಖಿಲೇಶ್ ಯಾದವ್ ನೇತೃತ್ವದಲ್ಲಿ ನಡೆದ ರೋಡ್ ಶೋ ವೇಳೆ ಬುಲ್ಡೋಜರ್ ಡಿಕ್ಕಿ ಹೊಡೆದು 12 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಮೃತ ಬಾಲಕನನ್ನು ಆರ್ಯವರ್ಧನ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತ ಚೌರಿ ಚೌರಾದ ರಾಜಧಾನಿ ಗ್ರಾಮದ ನಿವಾಸಿಯಾಗಿದ್ದಾನೆ. ಈತನ ತಂದೆ ಸ್ಥಳೀಯ ಬಿಜೆಪಿ ನಾಯಕರಾಗಿದ್ದಾರೆ. ಪಕ್ಷದ ಪಿಡಿಎ ರಥಯಾತ್ರೆ ವೇಳೆ ಕೂಡಾಘಾಟ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಬಾಲಕನ ತಂದೆ ಸ್ಥಳೀಯ ಬಿಜೆಪಿ ನಾಯಕ ಓಂಕಾರ್ ಸಿಂಗ್ ಪ್ರಕಾರ, ರ್ಯಾಲಿಯ ಮೇಲೆ ಹೂವಿನ ಪಕಳೆಯನ್ನು ಸುರಿಯುತ್ತಿದ್ದ ಬುಲ್ಡೋಜರ್ ಮೂಲಕ ಸುರಿಸಲಾಗುತ್ತಿತ್ತು. ಯಾದವ್ ಅವರ ಬೆಂಗಾವಲು ಪಡೆ ಈಗಾಗಲೇ ಮುಂದೆ ಸಾಗಿತ್ತು. ವೇಗವಾಗಿ ಬಂದ ಬುಲ್ಡೋಜರ್ ತಮ್ಮ ಮಗನಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಆರ್ಯವರ್ಧನ್ ರಸ್ತೆ ಡಿವೈಡರ್ ಅಪ್ಪಳಿಸಿದ್ದು, ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿತ್ತು. ಆತ ನಂತರ ಮೃತಪಟ್ಟಿದ್ದಾನೆ. ರೋಡ್ ಶೋ ವೇಳೆ ಸಾರ್ವಜನಿಕ ಸುರಕ್ಷತೆಗೆ ಕೈಗೊಂಡ ಕ್ರಮಗಳ ಬಗ್ಗೆ, ವಿಶೇಷವಾಗಿ ಜನಸಂದಣಿಯ ನಡುವೆ ಭಾರಿ ವಾಹನಗಳ ಸಂಚಾರದ ಬಗ್ಗೆ ಪ್ರಶ್ನೆಗಳು ಎದ್ದಿವೆ. ರ್ಯಾಲಿಯಲ್ಲಿ ಭಾಗವಹಿಸುವ ವಾಹನಗಳ ಸಂಚಾರವನ್ನು ನಿಯಂತ್ರಿಸುವ ಜವಾಬ್ದಾರಿ ಯಾರದ್ದಾಗಿತ್ತು ಎಂಬ ಪ್ರಶ್ನೆಯೂ ಮೂಡಿದೆ.
ಗೋರಖ್ಪುರ ಶಾಸಕ ಎಂಜಿನಿಯರ್ ಸರ್ವಣ್ ನಿಷಾದ್, ಬಿಜೆಪಿ ನಾಯಕ ಓಂಕಾರ್ ಸಿಂಗ್ ಅವರನ್ನು ಭೇಟಿ ಮಾಡಿ ಸಂತಾಪ ಸೂಚಿಸಿದ್ದಾರೆ. ಕ್ಯಾಬಿನೆಟ್ ಸಚಿವ ಡಾ. ಸಂಜಯ್ ನಿಷಾದ್ ಕೂಡ ಶಾಸಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ನೆರವು ನೀಡುವಂತೆ ನಿರ್ದೇಶಿಸಿದ್ದಾರೆ.
ಘಟನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ಬಾಲಕನ ಸಾವಿನ ಬಗ್ಗೆ ತಮಗೆ ಮಾಹಿತಿ ಇಲ್ಲ. ರೋಡ್ ಶೋಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಆಡಳಿತ ವಿಫಲವಾಗಿದೆ. ಜನರು ಬಿಜೆಪಿ ಸದಸ್ಯರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅವರು ಯಾರನ್ನಾದರೂ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುತ್ತಾರೆ ಎಂದು ಹೇಳಿದರು.
ಬುಲ್ಡೋಜರ್ ಅನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದು, ಅದರ ಮಾಲೀಕರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಗೋರಖ್ಪುರವು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆಯಾಗಿದೆ. ಅವರು ಇಲ್ಲಿಂದ ಐದು ಬಾರಿ ಸಂಸದರಾಗಿ ಮತ್ತು ಒಂದು ಬಾರಿ ಶಾಸಕರಾಗಿ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಗೋರಖ್ಪುರದಲ್ಲಿ ಅಖಿಲೇಶ್ ಯಾದವ್ ಅವರನ್ನು ಸ್ವಾಗತಿಸುವ ಭರಾಟೆಯಲ್ಲಿ ಎಸ್ಪಿ ಬೆಂಬಲಿಗರು 12 ವರ್ಷದ ಮುಗ್ಧ ಮಗುವಿನ ಜೀವ ತೆಗೆದಿದ್ದಾರೆ. ಪಿಡಿಎ ರಥ ಮೆರವಣಿಗೆ ವೇಳೆ ಜೆಸಿಬಿ ಡಿಕ್ಕಿಯಾಗಿ ಮಗು ನೋವಿನಿಂದ ಸಾವನ್ನಪ್ಪಿದ್ದು, ಎಸ್ಪಿ ಬೆಂಬಲಿಗರ ಪುಂಡಾಟ ಮತ್ತು ಬೇಜವಾಬ್ದಾರಿ ವರ್ತನೆಯ ಫಲವಾಗಿದೆ. ಅಧಿಕಾರದಲ್ಲಿ ಇಲ್ಲದಿರುವಾಗಲೇ ಇವರು ಹೀಗಿದ್ದರೆ, ಅಧಿಕಾರಕ್ಕೆ ಬಂದರೆ ಎಂತಹ ಅನಾಹುತ ಮಾಡಬಹುದು ಎಂಬುದನ್ನು ಊಹಿಸಿ. ಇವರನ್ನು ಎಸ್ಪಿ ಬೆಂಬಲಿಗರು ಎನ್ನಬೇಕೇ ಅಥವಾ ಪುಂಡರು ಎನ್ನಬೇಕೇ? ಮುಗ್ಧ ಮಗುವಿನ ಜೀವಕ್ಕಿಂತ ಶಕ್ತಿ ಪ್ರದರ್ಶನ ಇವರಿಗೆ ಹೆಚ್ಚು ಅಮೂಲ್ಯವೇ? ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).