ನಿಗೂಢತೆಗಳಿಂದ ಕೂಡಿರುವ ಜೀವನವೆಂದರೆ ಅದು ಅಘೋರಿಗಳದ್ದು. ಕತ್ತರಿಯೇ ಕಾಣದ ಸುಕ್ಕುಗಟ್ಟಿದ ಜಡೆ, ಅಂಟುಗಟ್ಟಿದ ಗಡ್ಡ, ಸ್ನಾನವನ್ನೇ ಕಾಣದ ದೇಹ, ಕೆಂಪು ಕಣ್ಣುಗಳು, ಕೊರಳಲ್ಲಿ ರುದ್ರಾಕ್ಷಿಗಳ ಸರಮಾಲೆ, ಹಣೆಯಲ್ಲಿ ಅರಿಶಿನ ಕುಂಕುಮ ಮಿಶ್ರಿತ ದೊಡ್ಡ ಹಣ್ಣೆಪಟ್ಟಿ, ಒಂದು ಕೈಯಲ್ಲಿ ಮಾನವನ ತಲೆ ಬುರುಡೆ, ಮತ್ತೊಂದರಲ್ಲಿ ತ್ರಿಶೂಲ ಹಿಡಿದ ಭಸ್ಮಧಾರಿಗಳೇ ಅಘೋರಿಗಳು. ಅಘೋರಿಗಳೆಂದರೆ ತಟ್ಟನೆ ನೆನಪಿಗೆ ಬರುವುದೇ ಈ ದೃಶ್ಯ. ಸಿನಿಮಾಗಳಲ್ಲಿ ಕಂಡುಬರುವ ದೃಶ್ಯಗಳನ್ನು ನೋಡಿ ಜನ ಅಘೋರಿಗಳೆಂದರೆ ಹೀಗೆ ಎಂದು ತಮ್ಮದೇ ಆದ ಕಲ್ಪನೆಯೊಂದನ್ನು ಮಾಡಿಕೊಂಡಿರುತ್ತಾರೆ. ಆದರೆ ನಿಜವಾದ ಅಘೋರಿಗಳ ಪರಿಚಯ ಕಲ್ಪನೆಗೂ ಮೀರಿದ್ದು.
ಅಘೋರಿಗಳ ಜೀವನ ಶೈಲಿ ಸಾಮಾನ್ಯ ಮಾನವನ ಜೀವನಶೈಲಿಗಿಂತ ಬಹಳ ವಿಭಿನ್ನ. ಈ ಅಘೋರಿಗಳಲ್ಲೂ 2 ಪಗಂಡಗಳಿವೆ. ಕೆಲವರು ಲಂಗೋಟಿ ಧರಿಸಿದರೆ, ಇನ್ನೂ ಕೆಲವರಂತೂ ಮೈಮೇಲೆ ಒಂದು ತುಂಡು ಬಟ್ಟೆಯನ್ನೂ ಹಾಕಿರದೇ, ನಿರ್ವಸ್ತ್ರಧಾರಿಗಳಾಗಿಯೇ ಬದುಕುತ್ತಾರೆ. ಇವರ ಆಹಾರ ಕ್ರಮವಂತೂ ಬಹಳ ಭಯಾನಕ. ಸತ್ತ ಮಾನವನ ದೇಹವನ್ನು ತಿನ್ನುವ ಇವರಿಗೆ ಲೋಕದ ಯಾವ ಗೊಡವೆ- ಗೊಂದಲಗಳ ಬಗ್ಗೆ ಮಾಹಿತಿ ಇರುವುದಿಲ್ಲ.
ಅಘೋರಿಗಳು ಆಹಾರಕ್ಕಾಗಿ ಮನುಷ್ಯರನ್ನು ಕೊಂದು ತಿನ್ನುತ್ತಾರೆ ಎಂಬ ಮಾತಿದೆ. ಆದರೆ ಇದು ಅಕ್ಷರಶಃ ಸುಳ್ಳು. ಕಾರಣ ಹಲವಾರು ಸಂಶೋಧನೆ ಮತ್ತು ಮಾಹಿತಿಗಳ ಪ್ರಕಾರ ಅವರು ಮನುಷ್ಯರನ್ನು ಆಹಾರಕ್ಕಾಗಿ ಸಾಯಿಸುವುದಿಲ್ಲ. ಬದಲಿಗೆ ಅವರು ಸತ್ತ ಮಾನವರ ದೇಹವನ್ನು ತಿನ್ನುತ್ತಾರೆ. ಸತ್ತವರ ಹಸಿ ಮಾಂಸವನ್ನು ತಿನ್ನುವ ಇವರು, ಅರೆಬರೆ ಬೆಂದ ಮೃತದೇಹಗಳನ್ನು ಆಹಾರವಾಗಿ ಸ್ವೀಕರಿಸುತ್ತಾರೆ. ಜತೆಗೆ ಸತ್ತ ಮಾನವನ ಕೈ ಕಾಲುಗಳ ಮೂಳೆ, ಬುರುಡೆಗಳನ್ನು ಇತರ ಕೆಲಸಗಳಿಗಾಗಿ ಬಳಸಿಕೊಳ್ಳುತ್ತಾರೆ. ಅಘೋರಿಗಳು ಶಿವನ ಆರಾಧಕರಾಗಿದ್ದು, ಗಾಂಜಾ, ಭಂಗಿ ಮುಂತಾದವುಗಳನ್ನು ಸೇದುತ್ತಾರೆ. ವಿಚಿತ್ರವೆಂದರೆ ಇವರು ಸತ್ತ ಮಾನವನ ಮಲ ಮತ್ತು ಮೂತ್ರವನ್ನು ಸೇವಿಸುತ್ತಾರೆ. ಇವರಿಗೆ ಸತ್ತ ಮಾನವನ ಮೆದುಳಿನ ಭಾಗ ತಿನ್ನಲು ಬಲು ಇಷ್ಟವಂತೆ.
ಅಘೋರಿಗಳು ಸದಾ ಸ್ಮಶಾನದಲ್ಲಿ ವಾಸಿಸಲು ಬಯಸುತ್ತಾರೆ ಹಾಗೂ ಮಾನವರು, ಪ್ರಾಣಿಗಳಿಂದ ದೂರವಿರಲು ಇಷ್ಟಪಡ್ತಾರೆ. ಮೃತದೇಹಗಳ ಮೇಲೆ ಕುಳಿತು ಜಪ ಮಾಡುತ್ತಾರೆ. ಇತ್ತೀಚೆಗೆ ತಮಿಳುನಾಡು ಹಾಗೂ ಮುಂತಾದೆಡೆ ಯೂಟ್ಯೂಬ್ ಚಾನೆಲೆಗಳಲ್ಲಿ ಅಘೋರಿಗಳ ಹೆಸರೇಳಿಕೊಂಡು ಜನರಿಗೆ ಮೋಸ ಮಾಡುವ ಪ್ರಕರಣಗಳು ಹೆಚ್ಚಾಗಿದೆ.