ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಪೊಲೀಸರ ವರ್ಗಾವಣೆಯ ವಿಚಾರದಲ್ಲಿ ಮತ್ತೆ ಗೊಂದಲ ಉಂಟಾಗಿದೆ.
ಬೆಂಗಳೂರು ನಗರದಲ್ಲಿ ಏಳು ಇನ್‌ಸ್ಪೆಕ್ಟರ್ ವರ್ಗಾವಣೆ ಆದೇಶಕ್ಕೆ ಮತ್ತೆ ತಡೆ ನೀಡಿದ್ದು, ಠಾಣೆಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ದಿಢೀರ್ ಸೂಚನೆ ನೀಡಿದೆ.
ರಾಜಾಜಿನಗರ, ಕಾಮಾಕ್ಷಿಪಾಳ್ಯ, ಬಸವೇಶ್ವರನಗರ, ಆರ್.ಟಿ.ನಗರ, ಎಸ್.ಜೆ.ಪಾರ್ಕ್, ಮಲ್ಲೇಶ್ವರ ಮತ್ತು ಯಶವಂತಪುರ ಠಾಣೆಗಳ ಹುದ್ದೆ ಪಡೆಯಲು ಇನ್‌ಸ್ಪೆಕ್ಟರ್‌ಗಳ ಮಧ್ಯೆ ಪೈಪೋಟಿ ನಡೆದಿದ್ದು, ಇದು ಸರ್ಕಾರದ ಸಚಿವರು ಮತ್ತು ಶಾಸಕರ ನಡುವೆ ಜಟಾಪಟಿಗೂ ಕಾರಣವಾಗಿದೆ. ರಾಜಕೀಯ ಹಸ್ತಕ್ಷೇಪದ ಮೇಲಾಟದಲ್ಲಿ ಪೊಲೀಸರಿಗೆ ಈಗ ತ್ರಿಶಂಕು ಪರಿಸ್ಥಿತಿ ಎದುರಾಗಿದೆ.
ಆ.1ರಂದು ರಾಜ್ಯ ಪೊಲೀಸ್ ಇಲಾಖೆಯಲ್ಲಿ 211 ಇನ್‌ಸ್ಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ ಆದೇಶ ಹೊರಡಿಸಲಾಗಿತ್ತು. ಈ ವರ್ಗಾವಣೆ ಪಟ್ಟಿಗೆ ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರು ಮತ್ತು ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮರು ದಿನವೇ ವರ್ಗಾವಣೆ ಪಟ್ಟಿಯಲ್ಲಿನ ಬೆಂಗಳೂರಿನ 69 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಗೆ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿ ದಿಢೀರ್ ತಾತ್ಕಾಲಿಕ ತಡೆ ನೀಡಿತ್ತು.
ಇದಾದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಸಮಾಲೋಚಿಸಿ 69 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿಯನ್ನು ಪರಿಷ್ಕರಿಸಿ ಬುಧವಾರ ಮರು ಆದೇಶ ಹೊರಡಿಸಲಾಗಿತ್ತು.
ಮತ್ತೆ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಯಲ್ಲಿ ಗೊಂದಲ ವ್ಯಕ್ತವಾಗಿದ್ದು, ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಗೆ ಡಿಜಿಪಿ ಸೂಚನೆ ಮೇರೆಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಏಳು ಇನ್‌ಸ್ಪೆಕ್ಟರ್‌ಗಳಿಗೆ ಅಧಿಕಾರ ಸ್ವೀಕರಿಸದಂತೆ ಸೂಚನೆ ನೀಡಿದ್ದಾರೆ. ತಡೆ ನೀಡಿದ್ದಾರೆ. ಬಹುತೇಕರು ಈಗಾಗಲೇ ಠಾಣೆಯಲ್ಲಿ ಗುರುವಾರವೇ ವರದಿ ಮಾಡಿಕೊಂಡಿದ್ದಾರೆ.