ಶಿವು ಹುಣಸೂರು
ತಾಲೂಕಿನ ಹನಗೋಡು ನಾಲಾ ಸೀರೀಸ್ ಭಾಗದ ಉದ್ದೂರು ನಾಲಾ ವ್ಯಾಪ್ತಿಯ ಕೊಡಗಳ್ಳಿಕೆರೆಯ ಬಳಿ ಇದ್ದ ಪಿಕ್‌ಅಪ್ ಒಡೆದಿರುವ ಕಾರಣ ನೀರು ನಿಲ್ಲದೇ ಪೋಲಾಗಿ ಹರಿದುಹೋಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹನಗೋಡು ನಾಲಾ ಸೀರೀಸ್ ವ್ಯಾಪ್ತಿಯಲ್ಲಿರುವ ಉದ್ದೂರು ನಾಲೆ ಬಳಿಯಲ್ಲಿ ಕೊಡಗಳ್ಳಿಕೆರೆ, ಕಾಕನಹಳ್ಳಿಕೆರೆ ಮತ್ತು ಹೊನ್ನೇಗೌಡನಕೆರೆ ಎಂಬ ಮೂರು ಕೆರೆಗಳಿವೆ. ಇವುಗಳ ಪೈಕಿ ಸ.ನಂ.270ರ ಪ್ರದೇಶದಲ್ಲಿರುವ ಕೊಡಗಳ್ಳಿಕೆರೆಯ ಹಳ್ಳದ ಬಳಿ ಈ ಹಿಂದೆ ಪಿಕ್‌ಅಪ್ ಒಂದನ್ನು ನಿರ್ಮಿಸಿ ಹಳ್ಳದಲ್ಲಿ ನೀರು ಸಂಗ್ರಹಿಸಲಾಗುತ್ತಿತ್ತು. ಇದರಿಂದ ಹಳ್ಳದ ಮುಂಭಾಗದ ಅರಕೇಶ್ವರಸ್ವಾಮಿ ದೇವಾಲಯದವರೆಗೂ ಸುಮಾರು 200 ಎಕರೆಗೂ ಹೆಚ್ಚಿನ ಜಮೀನಿಗಳಿಗೆ ನೀರು ಒದಗುತ್ತಿತ್ತು. ವಾರ್ಷಿಕ ಎರಡು ಬೆಳೆಗಳನ್ನು ಈ ಭಾಗದ ರೈತರು ಬೆಳೆಯುತ್ತಿದ್ದರು.
ನಾಲ್ಕು ವರ್ಷವಾದರೂ ದುರಸ್ತಿಯಾಗಿಲ್ಲ: ನಾಲ್ಕು ವರ್ಷಗಳ ಹಿಂದೆ ಈ ಪಿಕ್‌ಅಪ್ ಒಡೆದುಹೋಯಿತು. ಅಂದಿನಿಂದ ನೀರಾವರಿ ಇಲಾಖೆ ಅಧಿಕಾರಿಗಳು ಒಡೆದಿರುವ ಪಿಕ್‌ಅಪ್ ಅನ್ನು ನೋಡಿಕೊಂಡು ಹೋಗುತ್ತಿದ್ದಾರೆಯೇ ಹೊರತು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಭತ್ತದೊಂದಿಗೆ ಎರಡನೇ ಬೆಳೆಯಾಗಿ ರಾಗಿ, ಜೋಳ ಮುಂತಾದ ಬೆಳೆಗಳನ್ನು ರೈತರು ಬೆಳೆಯುತ್ತಿದ್ದರು. ಆದರೆ ನಾಲ್ಕು ವರ್ಷದಿಂದ ಒಂದು ಬೆಳೆಯನ್ನೂ ಬೆಳೆಯಲಾಗುತ್ತಿಲ್ಲ.
ಪೋಲಾಗುತ್ತಿರುವ ನೀರು: ಪಿಕ್‌ಅಪ್ ಒಡೆದಿರುವುದರಿಂದ ನಾಲೆಯಲ್ಲಿ ಹರಿದುಬಂದ ನೀರು ಹಳ್ಳದ ಭಾಗದಲ್ಲಿರುವ ಜಮೀನಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುತ್ತಿದೆ. ಮಾತ್ರವಲ್ಲ ನೀರು ಸದ್ಬಳಕೆಯಾಗದೆ ಪೋಲಾಗಿ ರತ್ನಪುರಿ, ಹೊನ್ನೇನಹಳ್ಳಿ ಮೂಲಕ ಸಂತೆಕೆರೆ ಕೋಡಿಯ ಒಡಲು ಸೇರುತ್ತಿದೆ. ನೀರು ಹರಿದುಬಂದರೂ ನಮಗೆ ಅನುಕೂಲವಾಗುತ್ತಿಲ್ಲವಲ್ಲ ಎನ್ನುವುದೇ ಈ ಭಾಗದ ರೈತರ ಅಳಲಾಗಿದೆ.
ವಿಶೇಷ ಕಪ್ಪು ಮೀನಿನ ಕಣಜ: ಕೊಡಗಳ್ಳಿ ಕೆರೆ ಬಳಿಯ ಪಿಕ್‌ಅಪ್ ಇರುವ ಈ ಹಳ್ಳದಲ್ಲಿ ಅತ್ಯಂತ ವಿಶೇಷ ಕಪ್ಪುಮೀನುಗಳು ಕಾಣಸಿಗುತ್ತವೆ. ಈ ಮೀನುಗಳು ತಲೆಕೆಳಗಾಗಿ ಈಜುತ್ತವೆ. ಈ ಮೀನು ಸಾಕಣೆಗೆ ತಾಲೂಕಿನ ವಿವಿಧ ಭಾಗಗಳಿಂದ ಮೀನು ಕೃಷಿಕರು ಬರುತ್ತಾರೆ. ಅತ್ಯಂತ ರುಚಿಕರ ಮತ್ತು ವಿಶೇಷವಾದ ಮೀನು ಇದಾಗಿದೆ ಎನ್ನುತ್ತಾರೆ ಈ ಭಾಗದ ರೈತರು.
ಹಳ್ಳಕ್ಕೆ ಅಡ್ಡಲಾಗಿ ಕಟ್ಟಿದ್ದ ಪಿಕ್‌ಅಪ್ ಒಡೆದು ಹೋಗಿರುವ ಪರಿಣಾಮ ವಾರ್ಷಿಕ ಒಂದು ಬೆಳೆ ಪಡೆಯುವುದೂ ಕಷ್ಟವಾಗಿದೆ. ಈ ಭಾಗದಲ್ಲಿ ದೊಡ್ಡ ಹಿಡುವಳಿದಾರರು ಇಲ್ಲ, ಒಂದೆರಡು ಎಕರೆ ಭೂಮಿ ಹೊಂದಿರುವ ರೈತರೇ ಹೆಚ್ಚು, ಉದ್ದೂರು ನಾಲೆಯ ಲೈನಿಂಗ್ ಕಾಮಗಾರಿ ಕೂಡ ಅರ್ಧಕ್ಕೆ ನಿಂತಿದೆ. ಪಿಕ್‌ಅಪ್ ಮೂಲಕ ನೀರು ಪೋಲಾಗುತ್ತಿರುವುದನ್ನು ಕೂಡಲೇ ನಿಲ್ಲಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.
ಚಲುವರಾಜು, ಯುವಕೃಷಿಕ, ಬನ್ನಿಕುಪ್ಪೆ
ಉದ್ದೂರು ನಾಲೆಯ ಲೈನಿಂಗ್ ಕಾಮಗಾರಿ ಹಣ ಬಿಡುಗಡೆಯಾದ ಕೂಡಲೇ ಮುಂದುವರೆಯಲಿದೆ. ಪಿಕ್‌ಅಪ್ ದುರಸ್ತಿ ಕುರಿತು ಶೀಘ್ರ ಸ್ಥಳಪರೀಕ್ಷೆ ನಡೆಸಿ ಯೋಜನೆ ರೂಪಿಸಿ ಕಾಮಗಾರಿ ನಡೆಸಲಾಗುವುದು.
ಮಂಜುನಾಥ್, ಎಇಇ, ಹಾರಂಗಿ ನೀರಾವರಿ ನಿಗಮ, ಹುಣಸೂರು ವಿಭಾಗ