ಶಿವಮೊಗ್ಗ: ಬೆಲೆಕೇರಿ ಬಂದರಿನಲ್ಲಿ ಜಪ್ತಿಯಾಗಿದ್ದ ಕೋಟ್ಯಂತರ ರೂ. ಮೌಲ್ಯದ ಕಬ್ಬಿಣದ ಅದಿರನ್ನು ಕದ್ದು ಸಾಗಿಸಿದ್ದ ಆರೋಪದಲ್ಲಿ ಶಾಸಕ ಸತೀಸ್ ಸೈಲ್‌ಗೆ ಶಿಕ್ಷೆ ಪ್ರಕಟವಾಗುವ ಮೂಲಕ ಕಾಂಗ್ರೆಸ್‌ನ ಮುಖವಾಡ ಕಳಚಲು ಆರಂಭವಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಇಂತಹ ಭ್ರಷ್ಟರೇ ಬೇಕಾಗಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಜೈಲು ಸೇರಿದ್ದರು. ಇದೀಗ ಸತೀಶ್ ಸೈಲ್ ಜೈಲು ಪಾಲಾಗಿದ್ದು ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಇವು ಸಾಕ್ಷಿಯಾಗಿವೆ. ಈ ಮೂಲಕ ಕಾಂಗ್ರೆಸ್‌ನ ಅಧಃಪತನ ಶುರುವಾಗಿದೆ ಎಂದು ದೂರಿದರು.
ವಿಜಯಪುರ ಜಿಲ್ಲೆಯ ಆರ್‌ಟಿಸಿಗಳಲ್ಲಿ ರೈತರ ಹೆಸರಿನ ಬದಲಿಗೆ ವಕ್ಫ್‌ಬೋರ್ಡ್ ಹೆಸರು ನಮುದಾಗಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದೆ. ಜಾತ್ಯತೀತದ ಬಗ್ಗೆ ಬೊಗಳೆ ಬಿಡುವ ಸಚಿವ ಜಮೀರ್ ಅಹಮ್ಮದ್ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸಿದ ವೇಳೆ ಪಹಣಿ ಬದಲಾಗಿರುವುದು ಕಂಡುಬಂದಿದೆ. ಅಧಿಕಾರಿಗಳನ್ನು ಹೆದರಿಸಿ ಪಹಣಿ ಬದಲಿಸಲಾಗಿದೆ ಎಂದು ಆರೋಪ ಮಾಡಿದರು.
ಈ ಭಾಗದಲ್ಲಿ ಅನೇಕ ಮುಸ್ಲಿಮರ ಆಸ್ತಿ ಕೂಡ ವಕ್ಫ್ ಆಸ್ತಿಯಾಗಿ ಬದಲಾಗಿದೆ. ಈ ರೀತಿ ಪಹಣಿಯನ್ನು ತಪ್ಪಾಗಿ ನಮೂದಿಸಿರುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು. ಇಲ್ಲವಾದರೆ ಯಾರ ಆಸ್ತಿ ಯಾರು ಕಬಳಿಸುತ್ತಾರೆಂದು ಹೇಳಲು ಸಾಧ್ಯವಾಗದ ಸ್ಥಿತಿ ತಲುಪಬಹುದೆಂಬ ಆತಂಕವನ್ನೂ ವ್ಯಕ್ತಪಡಿಸಿದರು.
ಇದೇ ರೀತಿ ಶಿವಮೊಗ್ಗದ ಹಣಗೆರೆ ಕಟ್ಟೆಯಲ್ಲೂ ಹಿಂದೊಮ್ಮೆ ವಕ್ಫ್ ಆಸ್ತಿ ಮಾಡಲು ಹೊರಟಿದ್ದರು. ಅದನ್ನು ನಾನು ತಡೆದಿದ್ದೆ ಎಂದ ಅವರು, ದೀಪಾವಳಿಗೆ ರೈತರಿಗೆ ಜಮೀರ್ ಅಹಮ್ಮದ್ ಅವರು ಅತಿದೊಡ್ಡ ಕೊಡುಗೆ ನೀಡಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು. ವಿಜಯಪುರದ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲವಾದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.