ನ್ಯೂಸ್

ಈ ದೇಶದಲ್ಲಿ ಬೆತ್ತಲೆ ಅನ್ನೋದು ತಪ್ಪೇ ಅಲ್ಲ... ಬಟ್ಟೆಯಿಲ್ಲದೇ ನಡೆಯುತ್ತೆ ಆಫೀಸ್​ ಮೀಟಿಂಗ್! Unknown Facts

Unknown Facts : ಮನೆಕೆಲಸ ಅಥವಾ ಇನ್ಯಾವುದೇ ಕೆಲಸದ ಒತ್ತಡವಿಲ್ಲದೆ ಜನರು ಹೆಚ್ಚು ಸಂತೋಷವಾಗಿರುವ ದೇಶದ ಬಗ್ಗೆ ನೀವು ಕೇಳಿದ್ದೀರಾ? ಫಿನ್​​ಲ್ಯಾಂಡ್​ ಸತತ ಎಂಟನೇ ವರ್ಷವೂ ಈ ಸ್ಥಾನವನ್ನು ಉಳಿಸಿಕೊಂಡಿದೆ. ಇಲ್ಲಿನ ಜನರ ತೃಪ್ತಿ ಅಂಕ 7.741 ಎಂದು ವರದಿ ಹೇಳುತ್ತದೆ. ಅವರ ಸಂಸ್ಕೃತಿ ಮತ್ತು ಜೀವನಶೈಲಿಯೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ನಾವೀಗ ಫಿನ್​ಲ್ಯಾಂಡ್​ ಬಗ್ಗೆ ಇನ್ನಷ್ಟು ಕುತೂಹಲಕಾರಿ ವಿಚಾರಗಳನ್ನು ತಿಳಿದುಕೊಳ್ಳೋಣ.

ಸೌನ ಸ್ನಾನ (ಉಗಿ ಸ್ನಾನ) ಫಿನ್​ಲ್ಯಾಂಡ್​ ಮಂದಿಯ ಮೂಲ ಸಂಸ್ಕೃತಿಯಾಗಿದೆ. ಹಾಗಾದರೆ, ಸೌನ ಸ್ನಾನ ಎಂದರೇನು? ಫಿನ್‌ಲ್ಯಾಂಡ್‌ ಸಂಸ್ಕೃತಿಯ ಪ್ರಾಚೀನ ಅಂಗವಾಗಿರುವ ಸೌನ ಸ್ನಾನ, ಮರದ ಪಟ್ಟಿಗಳಿಂದ ತಯಾರಿಸಿದ ಒಂದು ಸಣ್ಣ ಕೊಠಡಿಯಲ್ಲಿ ಉಷ್ಣತೆಯನ್ನು ಉತ್ಪಾದಿಸುವ ರೊಕ್‌ಗಳ ಮೇಲೆ ನೀರನ್ನು ಸುರಿಯುವ ಮೂಲಕ ನೀರಿನ ಆವಿಯೊಂದಿಗೆ ಒಣ ತಾಪಮಾನವನ್ನು ಸೃಷ್ಟಿಸಿ ಸ್ನಾನ ಮಾಡುವುದಾಗಿದೆ. ಈ ಕೋಣೆ ಸಾಮಾನ್ಯವಾಗಿ 70-100 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿರುತ್ತದೆ. ಇದರಿಂದ ರಕ್ತಸಂಚಾರವು ಸುಧಾರಿಸುತ್ತದೆ, ಸ್ನಾಯುಗಳ ಒತ್ತಡ ಕಡಿಮೆಯಾಗುತ್ತದೆ, ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಮತ್ತು ಡಿಟಾಕ್ಸಿಫಿಕೇಶನ್ ಸಾಧ್ಯವಾಗುತ್ತದೆ. ಆದರೆ, ಈ ಸೌನ ಸ್ನಾವನ್ನು ಹೃದ್ರೋಗ, ಹೆಚ್ಚಿನ ರಕ್ತದೊತ್ತಡ ಅಥವಾ ಗರ್ಭಿಣಿಯರು ವೈದ್ಯರ ಸಲಹೆಯೊಂದಿಗೆ ಮಾತ್ರ ಮಾಡಬೇಕು.

ಈ ಸೌನ ಸ್ನಾನವು ಫಿನ್​ಲ್ಯಾಂಡ್​ ಮಂದಿಗೆ ಸಾಮಾಜಿಕ ಸಂವಹನದ ಕೇಂದ್ರವೂ ಆಗಿದೆ. ಇಲ್ಲಿ ನಗ್ನತೆಯನ್ನು ಸಹ ಸಾಮಾನ್ಯ ವಿಷಯವೆಂದು ಪರಿಗಣಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ಸೌನಾದಲ್ಲಿ ವ್ಯಾಪಾರ ವಹಿವಾಟುಗಳು ಮತ್ತು ಗುಂಪು ಚರ್ಚೆಗಳನ್ನು ನಡೆಸಲಾಗುತ್ತದೆ. ಸೌನಾದಲ್ಲಿ ಏನಾಗುತ್ತದೆಯೋ ಅದು ಸೌನಾದಲ್ಲಿಯೇ ಉಳಿಯುತ್ತದೆ ಎಂಬ ನಂಬಿಕೆ ಅವರಲ್ಲಿದೆ. ಅನೇಕ ಜನರು ಸೌನಾದಲ್ಲಿ ಬೆತ್ತಲೆಯಾಗಿ ಸಮಯ ಕಳೆಯುತ್ತಾರೆ. ಇತ್ತೀಚೆಗೆ, ಫಿನ್ನಿಷ್ ವಿಧಾನಗಳ ಕುರಿತು ವ್ಲಾಗರ್​ ಒಬ್ಬರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫಿನ್​ಲ್ಯಾಂಡ್​ ವಿಶ್ವದ ಅತ್ಯಂತ ಸಂತೋಷದಾಯಕ ದೇಶ. ಇಲ್ಲಿ ಕಾರುಗಳಿಗಿಂತ ಹೆಚ್ಚು ಸ್ಟೀಮ್ ರೂಮ್‌ಗಳಿವೆ. ಕಂಪನಿಯ ಬಾಸ್‌ನೊಂದಿಗೆ ಬೆತ್ತಲೆಯಾಗಿ ಸಭೆಗೆ ಹೋಗುತ್ತಾರೆಂದರೆ ನಂಬುತ್ತೀರಾ? ಆದರೆ, ಇಲ್ಲಿನ ಜನರು ಆ ರೀತಿ ಮಾಡುತ್ತಾರೆ. ಪ್ರತಿ ವರ್ಷ, ಕಚೇರಿಗಳು ಪ್ರಯಾಣಕ್ಕಾಗಿಯೇ ಐದು ವಾರಗಳ ರಜೆ ನೀಡುತ್ತವೆ. ಅದೂ ಸಂಬಳದೊಂದಿಗೆ. ಈ ದೇಶದಲ್ಲಿ ನೀವು ನಿಖರವಾಗಿ ನಾಲ್ಕು ಗಂಟೆಗೆ ನಿಮ್ಮ ಕೆಲಸವನ್ನು ಮುಗಿಸಬಹುದು. ಹೆಚ್ಚಿನ ಡ್ಯೂಟಿ ಇರುವುದಿಲ್ಲ.

ಇಲ್ಲಿ ಮಕ್ಕಳನ್ನು ಏಳು ವರ್ಷಕ್ಕೆ ಶಾಲೆಗಳಿಗೆ ಸೇರಿಸಲಾಗುತ್ತದೆ. ಇಲ್ಲಿ ಮಕ್ಕಳಿಗೆ ಮನೆಕೆಲಸವನ್ನು ನೀಡಲಾಗುವುದಿಲ್ಲ. ಫಿನ್‌ಲ್ಯಾಂಡ್‌ನಲ್ಲಿ ಪ್ರೌಢಶಾಲಾ ಪದವಿ ದರವು ಶೇ. 93 ರಷ್ಟಿದೆ. ಯುಎಸ್‌ನಲ್ಲಿ, ಇದು ಕೇವಲ ಶೇ. 76 ರಷ್ಟಿದೆ. ತರಗತಿಯ ಗಾತ್ರವೂ ಚಿಕ್ಕದಾಗಿದೆ. 2025 ರ ವರದಿಯ ಪ್ರಕಾರ, ಫಿನ್ನಿಷ್ ಮಕ್ಕಳು ಅತ್ಯಂತ ಸಂತೋಷದಾಯಕರು ಎಂದು ವಿಡಿಯೋ ಹೇಳುತ್ತದೆ. (ಏಜೆನ್ಸೀಸ್​)