Oplus_131072 
ನ್ಯೂಸ್

ವಿಶ್ವ ವಿದ್ಯಾಲಯ ಮುಚ್ಚುವುದು ಖಂಡನೀಯ; ಎ. ಮುರಿಗೆಪ್ಪ

ಹಾವೇರಿ: ಹಿಂದಿನ ಸರ್ಕಾರ ಆರಂಭಿಸಿದ ಹಾವೇರಿ ವಿಶ್ವ ವಿದ್ಯಾಲಯ ಸೇರಿದಂತೆ 9 ವಿವಿಗಳನ್ನು ರಾಜ್ಯ ಸರ್ಕಾರವು ಮುಚ್ಚಲು ಮುಂದಾಗಿರುವುದು ಸರಿಯಾದ ನಡೆಯಲ್ಲ ಎಂದು ವಿಶ್ರಾಂತ ಉಪಕುಲಪತಿ ಎ. ಮುರಿಗೆಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಲೆ ಕಾಲೇಜುಗಳು ಜಾಸ್ತಿ ಆದಂತೆಲ್ಲ ಅವುಗಳಿಗೆ ಪೂರಕವಾಗಿ ವಿಶ್ವ ವಿದ್ಯಾಲಯಗಳು ಕೂಡ ಬೇರೆ ಬೇರೆಯಾಗಬೇಕಾಗುತ್ತದೆ. ಒಂದು ಕಾಲದಲ್ಲಿ ಮೈಸೂರು ವಿವಿ ಮತ್ತು ಕರ್ನಾಟಕ ವಿವಿ ಎರಡೆ ಇದ್ದವು, ಆನಂತರ ಬೇರೆ ಬೇರೆ ಕೇಂದ್ರಗಳಾಗಿ ವಿಶ್ವ ವಿದ್ಯಾಲಯಗಳಾದವು. ಹಾಗಾಗಿ ಇಂದು ಇಷ್ಟು ವಿವಿಗಳು ಅಸ್ತಿತ್ವಕ್ಕೆ ಬಂದಿವೆ. ಅವುಗಳಿಗೆ ವಿವಿಧ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಾ ಬಂದಿದೆ.

ಹಿಂದಿನ ಸರ್ಕಾರ ಜಿಲ್ಲೆಗೊಂದು ವಿವಿಗಳು ಎಂದು ಅಯ್ದ ಕೆಲವು ಜಿಲ್ಲೆಗಳಲ್ಲಿ ವಿವಿಗಳನ್ನು ಆರಂಭಿಸಿತು. ಈ ವಿವಿ ಆರಂಭಿಸುವಾಗ ಈಗಿರುವ ಸೌಕರ್ಯಗಳೇನಿವೆಯೊ ಅಷ್ಟನ್ನು ಮಾತ್ರ ಬಳಸಿಕೊಳ್ಳಬೇಕು ಹೆಚ್ಚಿನದನ್ನು ಕೇಳಬಾರದು ಎಂಬುವ ನಿರ್ಣಯ ಇತ್ತು ಅಂತ ಕಾಣುತ್ತೆ. ಆದರೆ ಆ ರೀತಿ ಕಂಡಿಶನ್​ ಹಾಕಿರುವುದು ತಪ್ಪು. ಸೌಕರ್ಯಗಳನ್ನು ಕೊಡದೆ ವಿವಿ ನಡೆಸಲು ಹೇಗೆ ಸಾಧ್ಯ? ಅಲ್ಲಿಗೆ ಬೇಕಾದ ಅಧಿಕಾರಿ ವರ್ಗ, ಕಚೆೇರಿಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗುತ್ತೆ. ಇವನ್ನು ಯಾವುದೊ ಒಂದು ಕಾಲಕ್ಕೆ ಮಾತ್ರ ಕೊಟ್ಟು ಕೈ ತೊಳಕೊಳ್ಳತಕ್ಕದಲ್ಲ್ಲ, ಕಾಲ ಕಾಲಕ್ಕೆ ಸೌಲಭ್ಯ ಒದಗಿಸಬೇಕಾಗುತ್ತದೆ. ಹಾಗಾಗಿ ಯಾವುದೇ ಸೌಲಭ್ಯ ಕೊಡದೆ ವಿ.ವಿ ನಡೆಸಿಕೊಂಡು ಹೋಗಿ ಅನ್ನುವುದು ತಪ್ಪು.

ಮೂಲಭೂತ ಸೌಲಭ್ಯ ಒದಗಿಸುವ ಬದಲಾಗಿ ವಿ.ವಿ ಬಂದ್​ ಮಾಡಲು ಹೊರಟಿರುವ ಸರ್ಕಾರದ ಧೋರಣೆ ಸರಿಯಲ್ಲ. ಮುಚ್ಚುವ ಬದಲಾಗಿ ಈ ವಿಶ್ವವಿದ್ಯಾಲಯಗಳಿಗೆ ಏನೆಲ್ಲ ಸೌಲಭ್ಯ ಬೇಕು ಎಂಬುದನ್ನು ಚಚಿರ್ಸಿಕೊಂಡು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶವನ್ನು ಒಳಗೊಂಡಿರುವಂತಹ ಹಾವೇರಿ ವಿಶ್ವ ವಿದ್ಯಾಲಯವನ್ನು ಮುಚ್ಚುವುದು ಸರಿಯಲ್ಲ. ಹಾವೇರಿ ಅಷ್ಟೆ ಅಲ್ಲದೇ ಕೊಪ್ಪಳ, ಹಾಸನ ಸೇರಿದಂತೆ ಯಾವುದೇ ವಿಶ್ವ ವಿದ್ಯಾಲಯಗಳನ್ನು ಮುಚ್ಚುವುದು ಸರಿಯಲ್ಲ. ಹಾಗಾಗಿ ರಾಜ್ಯ ಸರ್ಕಾರ ಈ ತೀರ್ಮಾನವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.