ಕುವೆಂಪು ವಿವಿ ಘಟಿಕೋತ್ಸವದಲ್ಲಿ ಕಾಗೋಡು ತಿಮ್ಮಪ್ಪ, ಡಿ.ನಾಗರಾಜ ಹಾಗೂ ಪ್ರೊ. ಸಿ.ಎಸ್.ಉನ್ನಿಕೃಷ್ಣನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಥಾವರಚಂದ್ ಗೆಹಲೋತ್, ಪ್ರೊ. ರಾಮ್ ರಾಮಸ್ವಾಮಿ, ಪ್ರೊ. ಶರತ್ ಅನಂತಮೂರ್ತಿ ಇತರರಿದ್ದರು. 
ನ್ಯೂಸ್

ವಿವಿಗಳು ಹೊಸತು ಸೃಷ್ಟಿಸುವ ಕೇಂದ್ರಗಳಾಗಲಿ: ರಾಮ್ ರಾಮಸ್ವಾಮಿ

ಶಿವಮೊಗ್ಗ: ಮುಂದಿನ 50 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಅದರಲ್ಲಿ ಕೆಲವು ಒಳ್ಳೆಯದಾಗಿದ್ದರೆ, ಇನ್ನು ಕೆಲವು ಅಹಿತವಾಗಿರುತ್ತವೆ. ಈ ಬದಲಾವಣೆಗೆ ಹೊಂದಿಕೊಳ್ಳಲು ವಿದ್ಯಾರ್ಥಿಗಳು ತಮ್ಮನ್ನು ಅಣಿಗೊಳಿಸಿಕೊಳ್ಳಬೇಕಿದೆ ಎಂದು ಹೈದರಾಬಾದ್ ವಿವಿ ವಿಶ್ರಾಂತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ 34ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವಿಕಸನಗೊಳ್ಳುತ್ತಿರುವ ಜಗತ್ತನ್ನು ನಿಭಾಯಿಸುವ ಶಕ್ತಿ ನೀಡುವಲ್ಲಿ ಶಿಕ್ಷಣ ಯಶಸ್ವಿಯಾಗಿದೆ. ಮುಂದೆ ಆಗಬಹುದಾದ ಕೆಲವು ಬದಲಾವಣೆಗಳ ಕಲ್ಪನೆಗಳು ಪದವಿ ಪಡೆದವರಿಗೆ ಇರಬೇಕು ಎಂದರು.

ವಿವಿಗಳು ಕಲಿತ ವಿಚಾರಗಳ ವೇಗವರ್ಧಿಸುವ ಕೇಂದ್ರಗಳಾಗಬೇಕು. ಸಮಾಜದ ಒಂದು ಭಾಗವಾಗಿ, ಭವಿಷ್ಯದ ದೃಷ್ಟಿಯಿಂದ ಅನೇಕ ತಲೆಮಾರುಗಳ ವಿದ್ಯಾರ್ಥಿಗಳಿಗೆ ವಿಚಾರ ಮಾಡಲು ಹೊಸದನ್ನು ಅನ್ವೇಷಿಸಲು, ಸೃಷ್ಟಿಸಲು ತರಬೇತಿ ನೀಡುವ ಕೇಂದ್ರವಾಗಬೇಕು. ಸಮಾಜ, ಸಂಸ್ಕೃತಿ ಮತ್ತು ಆಸಕ್ತಿಯನ್ನು ಪ್ರೇರೇಪಿಸುವ ಹಾಗೂ ಜೀವನವನ್ನು ಉತ್ತಮಗೊಳಿಸುವ ಸ್ಥಳವಾಗಬೇಕು ಎಂದು ಅಭಿಪ್ರಾಯಪಟ್ಟರು.

ಪಡೆದ ಶಿಕ್ಷಣವನ್ನು ವೈಯಕ್ತಿಕ ಒಳಿತಿಗಾಗಿ ಬಳಸಿಕೊಳ್ಳುವುದು ಸಹಜ. ಆದರೆ ಸ್ವಲ್ಪ ಭಾಗವನ್ನು ಸಾರ್ವಜನಿಕರ ಒಳಿತಿಗೂ ಬಳಸುವುದು ಉತ್ತಮ. ಸಾಮಾಜಿಕ ಸಮಾನತೆ, ಎಲ್ಲರಿಗೂ ಉತ್ತಮ ಆರೋಗ್ಯ ಒದಗಿಸಲು ಶಿಕ್ಷಣ ನೆರವಾಗುತ್ತದೆ. ಸಾರಿಗೆ, ಸಂವಹನ, ಸಾರ್ವಜನಿಕ ಆರೋಗ್ಯ, ಆರೋಗ್ಯ ಸೇವೆ ಇವೆಲ್ಲವೂ ಸುಧಾರಿಸಿವೆ. ಆದರೂ ಅನೇಕ ಸವಾಲುಗಳಿವೆ. ನಮ್ಮ ಪರಿಸರದಲ್ಲಾಗುವ ಅನೇಕ ಬದಲಾವಣೆಗೆ, ಇಂದಿನ ಅನೇಕ ಸಮಸ್ಯೆಗಳಿಗೆ ಜನಸಂಖ್ಯೆ ಹೆಚ್ಚಳವೇ ಮೂಲ ಕಾರಣ ಎಂದು ತಿಳಿಸಿದರು.

ವಿವಿಯ ಕುಲಾಧಿಪತಿ ಥಾವರಚಂದ್ ಗೆಹಲೋತ್, ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ (ಆಡಳಿತ) ಎ.ಎಲ್.ಮಂಜುನಾಥ್, ಕುಲಸಚಿವ (ಮೌಲ್ಯಮಾಪನ) ಪ್ರೊ. ಎಸ್.ಎಂ.ಗೋಪಿನಾಥ್, ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.