ನ್ಯೂಸ್

ಮರಣದಂಡನೆ ರದ್ದತಿಗೆ ವಿಶ್ವಸಂಸ್ಥೆ ಮನವಿ

ವಿಶ್ವಸಂಸ್ಥೆ: ಜಗತ್ತಿನ ಎಲ್ಲ ದೇಶಗಳು ಮರಣ ದಂಡನೆ ವಿಧಿಸುವುದನ್ನು ನಿಲ್ಲಿಸಬೇಕು ಅಥವಾ ಅದರ ಮೇಲೆ ನಿರ್ಬಂಧ ವಿಧಿಸಬೇಕು ಎಂದು ವಿಶ್ವಸಂಸ್ಥೆ ಕರೆ ನೀಡಿದೆ. ನಿರ್ಭಯಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡಿದ ಬೆನ್ನಲ್ಲೇ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಈ ಬಗ್ಗೆ ಮನವಿ ಮಾಡಿದ್ದಾರೆ.

‘ಮರಣದಂಡನೆ ವಿಧಿಸುವುದನ್ನು ಸಂಪೂರ್ಣ ವಾಗಿ ನಿಲ್ಲಿಸಬೇಕು ಇಲ್ಲವೇ ಅದರ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಬೇಕೆನ್ನುವುದು ವಿಶ್ವಸಂಸ್ಥೆಯ ನಿಲುವಾಗಿದೆ’ ಎಂದು ಗುಟೆರೆಸ್​ರ ವಕ್ತಾರ ಸ್ಟೆಫಾನೆ ಡುಜಾರಿಕ್ ಹೇಳಿದ್ದಾರೆ.

2012ರಲ್ಲಿ ಅರೆವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿನಿ ಮೇಲೆ ಘೋರ ಅಪರಾಧ ಎಸಗಿದ ಮುಕೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಸಿಂಗ್​ನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಶುಕ್ರವಾರ ಗಲ್ಲಿಗೇರಿಸಲಾಗಿತ್ತು.

ವಿನಯ್ ಶರ್ವಗೆ ಗರಿಷ್ಠ ದಂಡನೆ: ನಿರ್ಭಯಾ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾದ ವಿನಯ್ ಶರ್ವ, ಸೆರೆಮನೆಯಲ್ಲಿದ್ದ ಏಳು ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಜೈಲು ನಿಯಮಗಳ ಉಲ್ಲಂಘನೆಗೆ ಗರಿಷ್ಠ ದಂಡನೆ ಅನುಭವಿಸಿದ್ದ ಎಂದು ತಿಹಾರ್ ಸೆರೆಮನೆ ಅಧಿಕಾರಿಗಳು ತಿಳಿಸಿದ್ದಾರೆ. ನಿಯಮಗಳನ್ನು ಪಾಲಿಸದಿರುವುದಕ್ಕೆ 11 ಸಾರಿ ದಂಡನೆ ಅನುಭವಿಸಿದ್ದ. ಪವನ್ ಗುಪ್ತಾ 8, ಮುಕೇಶ್ ಸಿಂಗ್ 3 ಹಾಗೂ ಅಕ್ಷಯ್ ಸಿಂಗ್ ಒಂದು ಬಾರಿ ಈ ರೀತಿಯ ದಂಡನೆಗೆ ಗುರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಣ್ಣ ಜಗಳವಾಡಿದ್ದಕ್ಕಾಗಿ ಕುಟುಂಬ ಸದಸ್ಯರ ಭೇಟಿ ಸಂಖ್ಯೆ ಕಡಿಮೆ ಮಾಡುವುದು, ಗಂಭೀರ ತೊಂದರೆ ಸೃಷ್ಟಿಗೆ ಬ್ಯಾರಕ್​ಗಳ ಬದಲಾವಣೆ ಮೊದಲಾದವು ವಿನಯ್ಗೆ ವಿಧಿಸಲಾದ ಶಿಕ್ಷೆಯಲ್ಲಿ ಸೇರಿದ್ದವು.