ನ್ಯೂಸ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಬ್ಜ ಜೋಡಿ; ಮೂರಡಿ ವರ, ನಾಲ್ಕಡಿ ವಧು

ಬಿಹಾರ: ದೇವರು ಯುವಕ, ಯುವತಿಯರಿಗೆ ಒಂದೊಂದು ಜೋಡಿ ಮಾಡಿರುತ್ತಾನೆ ಎನ್ನುವ ಮಾತಿದೆ. ಕೆಲವರು ತಮ್ಮ ಜೀವನ ಸಂಗಾತಿಯನ್ನು ಬೇಗನೆ ಕಂಡುಕೊಳ್ಳುತ್ತಾರೆ, ಇನ್ನು ಕೆಲವರು ಮದುವೆಯ ವಿಷಯದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸುತ್ತಾರೆ. ಆದರೆ ಕೆಲವರಿಗೆ ಎಲ್ಲ ರೀತಿಯಲ್ಲೂ ತಮಗಿಷ್ಟವಾಗುವ ಜೀವನ ಸಂಗಾತಿಯನ್ನು ಕಂಡುಕೊಳ್ಳುವ ಅದೃಷ್ಟವಿರುತ್ತದೆ.

ಮೈ ಬಣ್ಣ, ಆಸ್ತಿ, ಕೆಲಸ, ಎತ್ತರದಂತಹ ಸಮಸ್ಯೆಗಳು ಮದುವೆ ಸಮಯದಲ್ಲಿ ಎದುರಾಗುತ್ತವೆ. ಯಾರಾದರೂ 6 ಅಡಿಗಿಂತ ಹೆಚ್ಚು ಎತ್ತರವಿದ್ದರೆ.. ಅಂತಹ ವ್ಯಕ್ತಿಗೆ ಅವರು ಬಯಸಿದ ಸಂಗಾತಿಯನ್ನು ಪಡೆಯಲು ಕಷ್ಟವಾಗುತ್ತದೆ. ಎತ್ತರ ಕಡಿಮೆಯಾದ್ರೂ ಕೂಡಾ ವಧು, ವರರು ಸಿಗುವುದು ಕಷ್ಟ. ಆದರೆ ಬಿಹಾರದ ಛಪ್ರಾ ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದಿದೆ.

ಲೆರುವಾ ನಿವಾಸಿ ಸತೇಂದ್ರ ಸಿಂಗ್ ಅವರ ಪುತ್ರ ರೋಹಿತ್ ಮೂರೂವರೆ ಅಡಿ, ಅಂದರೆ 42 ಇಂಚು ಎತ್ತರ ಇರುವ ಕಾರಣದಿಂದ ಇಲ್ಲಿಯವರೆಗೆ ಆತನ ಮದುವೆ ನಡೆದಿರಲಿಲ್ಲ. ಅವನಿಗೆ ತಕ್ಕಂತ ವಧು ಎಷ್ಟೇ ಹುಡುಕಿದರೂ ಕಂಕಣ ಭಾಗ್ಯ ಕೂಡಿಬಂದಿರಲಿಲ್ಲ. ಮೂರೂವರೆ ಅಡಿಯ ರೋಹಿತ್​ಗೆ ಬನಿಯಾಪುರದ 4 ಅಡಿಯ ವಧು ನೇಹಾ ಎಂಬ ವಧು ಸಿಕ್ಕಿದ್ದಾಳೆ. ಖಬಾಸಿ ನಿವಾಸಿ ಆಗಿರುವ 4 ಅಡಿ ವಧು ನೇಹಾ ಹಾಗೂ ರೋಹಿತ್ ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು.

ಗಧಾದೇವಿ ದೇವಸ್ಥಾನದಲ್ಲಿ ನಡೆದ ಈ ನವ ದಂಪತಿ ರೋಹಿತ್ ನೇಹಾ ಮದುವೆಯಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು ಅಷ್ಟೇ ಅಲ್ಲದೇ, ಅವರ ಸ್ನೇಹಿತರು ಮತ್ತು ನೆರೆಹೊರೆಯವರು ಭಾಗವಹಿಸಿ ಶುಭಾಶಯ ಕೋರಿದರು. ನೇಹಾ ಐದನೇ ತರಗತಿವರೆಗೆ ಓದಿದ್ದಾಳೆ, ಬಹಳ ಬುದ್ಧಿವಂತೆ. ರೋಹಿತ್ ಎತ್ತರ 3.5 ಅಡಿ, ನೇಹಾ ಅವರ ಎತ್ತರ 4 ಅಡಿ, ಪತಿಗಿಂತ ಅರ್ಧ ಅಡಿ ಎತ್ತರ ಇದ್ದಾಳೆಂದು ಸ್ಥಳೀಯರು ಹೇಳಿದ್ದಾರೆ.

ವರನ ಹಿರಿಯ ಸಹೋದರ ಅಮರ್ ಕುಮಾರ್ ಮಾತನಾಡಿ, ರೋಹಿತ್ ತನ್ನ ಎತ್ತರ ಕಡಿಮೆ ಇರುವುದರಿಂದ ಜೀವನದಲ್ಲಿ ಅನೇಕ ರೀತಿಯ ಅಪಹಾಸ್ಯ ಮತ್ತು ಕಿರುಕುಳ ಎದುರಿಸಬೇಕಾಯಿತು. ಈಗ ಅವನಿಗೆ ತಕ್ಕ ಹುಡುಗಿ ಸಿಕ್ಕಿದ್ದರಿಂದ ಮದುವೆಯಾಗಿದೆ. ಇದರಿಂದ ನಮಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.