ನ್ಯೂಸ್

ಬೇಡಿಕೆ ಈಡೇರಿಸಲು ಖಾಸಗಿ ವಾಹನಗಳ ಒಕ್ಕೂಟ ಆಗ್ರಹ

ಬೆಂಗಳೂರು: ಶಕ್ತಿ ಯೋಜನೆಯಿಂದ ಸಮಸ್ಯೆಗೆ ಒಳಗಾಗಿರುವ ಆಟೋ ಚಾಲಕರಿಗೆ ಮಾಸಿಕ ಧನಸಹಾಯ ನೀಡುವುದು ಸೇರಿದಂತೆ ಪ್ರಮುಖ ಐದು ಬೇಡಿಕೆಗಳನ್ನು ಈಡೇರಿಸಲು ಆ.30ರವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದು, ತಪ್ಪಿದ್ದಲ್ಲಿ ಸೆ.1ರಿಂದ ಬೆಂಗಳೂರು ಬಂದ್ ಆಚರಿಲು ಕರ್ನಾಟಕ ರಾಜ್ಯ ಖಾಸಗಿ ವಾಹನಗಳ ಸಂಘಗಳ ಒಕ್ಕೂಟ ನಿರ್ಧರಿಸಿದೆ.

ಈ ಸಂಬಂಧ ಗುರುವಾರ ಒಕ್ಕೂಟದ ಅಡಿ ಬರುವ 32 ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಇಂಥದ್ದೊಂದು ತೀರ್ಮಾನವನ್ನು ಕೈಗೊಳ್ಳಲಾಗಿದೆ. ಬೇಡಿಕೆ ಈಡೇರಿಸುವಂತೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿಲ್ಲ. ಹೀಗಾಗಿ ಬೀದಿಗಿಳಿಯುವುದು ಅನಿವಾರ್ಯವಾಗಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.

ಬೇಡಿಕೆಗಳನ್ನು ಆಲಿಸಿದ್ದ ಸಾರಿಗೆ ಸಚಿವರು ಕಾಲಾವಕಾಶ ಕೋರಿದ್ದರು. ನಂತರ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಪರಿಹಾರ ಒದಗಿಸುವ ಅಭಯ ನೀಡಿದ್ದರು. ಆದರೆ, ಈವರೆಗೂ ಯಾವುದೇ ಮಾರುತ್ತರ ಬಂದಿಲ್ಲ. ಕೊಟ್ಟ ಭಾಷೆಯನ್ನು ನಿರ್ಲಕ್ಷಿಸಿ ನಮ್ಮನ್ನು ನಡುನೀರಿನಲ್ಲಿ ಕೈಬಿಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎಸ್.ನಟರಾಜಶರ್ಮ ತಿಳಿಸಿದ್ದಾರೆ.

ಶಕ್ತಿ ಯೋಜನೆಗೆ ಖಾಸಗಿ ಬಸ್‌ಗಳನ್ನೂ ಪರಿಗಣಿಸುವುದು, ಆಟೋ ಚಾಲಕರಿಗೆ ಮಾಸಿಕ ಧನಸಹಾಯ, ಬೈಕ್ ಟ್ಯಾಕ್ಸಿಗೆ ನಿರ್ಬಂಧ, ಅಂತಾರಾಜ್ಯ ಟೂರಿಸ್ಟ್ ವಾಹನಗಳಿಗೆ ಅವಕಾಶ ಹಾಗೂ 60:40 ಅನುಪಾತದಲ್ಲಿ ಸರ್ಕಾರಿ-ಖಾಸಗಿ ಬಸ್ ಓಡಾಟಕ್ಕೆ ಪರ್ಮಿಟ್ ನೀಡುವ 5 ಪ್ರಮುಖ ಬೇಡಿಕೆಗಳನ್ನ ಈಡೇರಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಭರವಸೆ ಈಡೇರದಿದ್ದಲ್ಲಿ ಹಂತ-ಹಂತವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.