ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್‌ನವರು ಹೇಳಿದರೆಂದು ಹಿಂದುಳಿದ ವರ್ಗಗಳ ಆಯೋಗದ ಈಗಿನ ಜಾತಿ ಜನಗಣತಿ ವರದಿ ಜಾರಿಗೆ ಮುಂದಾದರೆ ರಾಜ್ಯದಲ್ಲಿ ಕೋಮುದಳ್ಳುರಿಯಾಗಲಿದೆ. ಸಿದ್ದರಾಮಯ್ಯ ಪಾಲಿಗೆ ಇದು ರಾಜಕೀಯವಾಗಿ ಮರಣ ಶಾಸನವಾಗಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ ಸರ್ಕಾರಕ್ಕೆ ಹೊರೆಯಾದರೂ ಪರವಾಯಿಲ್ಲ ಮತ್ತೊಂದು ಸಮಿತಿ ರಚಿಸಿ, ಒಂದು ವರ್ಷದೊಳಗೆ ವೈಜ್ಞಾನಿಕ ಸಮೀಕ್ಷೆ ಮಾಡಿಸಿ ವರದಿ ತರಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಹಿಂದುಳಿದ ವರ್ಗಗಳ ಆಯೋಗದ ವರದಿ ಕಾಂಗ್ರೆಸ್‌ನಲ್ಲೇ ಅರ್ಧಕ್ಕೂ ಹೆಚ್ಚು ಜನರ ವಿರೋಧವಿದ್ದು, 10 ವರ್ಷಗಳ ಹಿಂದಿನ ಅಂಕಿ-ಅಂಶಗಳು ಈಗ ಪ್ರಯೋಜನಕ್ಕೆ ಬರುವುದಿಲ್ಲ. ಅಲ್ಲದೆ, ಆಯೋಗ ನಡೆಸಿದ ಸಮೀಕ್ಷೆಯೇ ಅವೈಜ್ಞಾನಿಕ, ಅಪೂರ್ಣವೆಂಬ ದೂರುಗಳನ್ನು ಸಿಎಂ ಗಂಭೀರವಾಗಿ ಪರಿಗಣಿಸಬೇಕು ಎಂದು ವಿ.ಸೋಮಣ್ಣ ಸಲಹೆ ನೀಡಿದರು.
ತುಮಕೂರು ರೈಲ್ವೆ ನಿಲ್ದಾಣವನ್ನು ‘ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ರೈಲ್ವೆ ನಿಲ್ದಾಣ’ ಎಂದು ಮರು ನಾಮಕರಣ ಮಾಡುವುದಕ್ಕೆ ಕೇಂದ್ರ ಸರ್ಕಾರ ಶೀಘ್ರವೇ ಒಪ್ಪಿಗೆ ನೀಡಲಿದೆ ಎಂಬ ಮಾಹಿತಿ ನೀಡಿದರು.
ತುಮಕೂರು ರೈಲ್ವೆ ನಿಲ್ದಾಣಕ್ಕೆ ಸ್ವಾಮೀಜಿಗಳ ಹೆಸರಿಡಲು ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಪ್ರತಿಯಾಗಿ ಕೇಂದ್ರದಿಂದ ಮಾಹಿತಿ ಕೋರಿ ರಾಜ್ಯಕ್ಕೆ ಪತ್ರ ರವಾನೆಯಾಗಿತ್ತು ಎಂದು ತಿಳಿಸಿದರು.
ಎಂಟು ತಿಂಗಳು ವಿಳಂಬವಾಗಿಯಾದರೂ ರಾಜ್ಯ ಸರ್ಕಾರ ಶಿಾರಸು ಮಾಡಿ ಪ್ರಸ್ತಾವನೆ ಸಲ್ಲಿಸಿರುವುದು ಸಂತೋಷದ ಸಂಗತಿ. ಕೇಂದ್ರ ಸರ್ಕಾರದಿಂದ ಸಾಧ್ಯವಾದಷ್ಟು ಬೇಗ ಒಪ್ಪಿಗೆ ಲಭಿಸಲಿದೆ ಎಂದು ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.