IB Officer Death: ಸೋಮವಾರ (ಮಾ.24) ಶವವಾಗಿ ಪತ್ತೆಯಾದ ಕೇರಳದ ಗುಪ್ತಚರ ಬ್ಯೂರೋ (ಐಬಿ) ಅಧಿಕಾರಿ ಮೇಘಾ ಮಧುಸೂದನನ್ (24), ರೈಲ್ವೆ ಹಳಿ ಪಕ್ಕ ಮೃತಪಟ್ಟ ಸುದ್ದಿ ಸಂಬಂಧಿಕರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಮಗಳ ಸಾವಿನ ಹಿಂದಿರುವ ಸಹೋದ್ಯೋಗಿಯ ಕೈವಾಡವನ್ನು ತನಿಖೆ ಮೂಲಕ ಬಯಲಿಗೆಳೆಯಬೇಕು ಮತ್ತು ಸಾವಿನ ಸುತ್ತಲಿನ ಸಂದರ್ಭಗಳನ್ನು ಬಹಿರಂಗಪಡಿಸಲು ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಪ್ರಕರಣದ ಬಗ್ಗೆ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದಾರೆ.
“ಸಾಯುವ ಮುನ್ನ ಆಕೆಯ ಬ್ಯಾಂಕ್ ಖಾತೆಯಲ್ಲಿ ಕೇವಲ 80 ರೂ. ಮಾತ್ರ ಉಳಿದಿತ್ತು. ಇನ್ನುಳಿದ ಸಂಬಳದ ಹಣವನ್ನೆಲ್ಲ ಆಕೆಯ ಪ್ರಿಯಕರನಿಗೆ ಕಳಿಸಿ, ತಾನು ಉಪವಾಸ ಇರುತ್ತಿದ್ದಳು. ಈ ಮಾತನ್ನು ಆಕೆಯ ಸ್ನೇಹಿತರೇ ನನಗೆ ತಿಳಿಸಿದ್ದಾರೆ. ಇದು ಅತ್ಯಂತ ದುಃಖಕರ ಸಂಗತಿ” ಎಂದು ಮೇಘಾ ತಂದೆ ಅಳಲು ತೋಡಿಕೊಂಡಿದ್ದಾರೆ. ಕಳೆದ ವರ್ಷ ರಾಜಸ್ಥಾನದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮೇಘಾ ಮತ್ತು ಆಕೆಯ ಸಹೋದ್ಯೋಗಿ ನಡುವೆ ಪ್ರೇಮಾಂಕುರವಾಗಿದೆ. ಆಕೆಯ ದುರಂತ ಅಂತ್ಯದ ನಂತರ ಕುಟುಂಬಸ್ಥರು, ಮೇಘಾ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಮೃತ ದುರ್ದೈವಿ ತನ್ನ ಸಂಪೂರ್ಣ ಸಂಬಳವನ್ನು ಆತನ ಖಾತೆಗೆ ವರ್ಗಾಯಿಸಿರುವುದು ಸ್ಪಷ್ಟವಾಗಿದೆ.
ಮಗಳ ದುರಂತ ಅಂತ್ಯಕ್ಕೆ ಸಹೋದ್ಯೋಗಿ ಸುಕಂತ್ ಸುರೇಶ್ ಇಷ್ಟಕ್ಕೆಲ್ಲ ಕಾರಣ. ಆತ ನಮ್ಮ ಪುತ್ರಿಗೆ ಆರ್ಥಿಕ ಒತ್ತಡ ಹೇರಿದ್ದಾನೆ. ಇವಳು ಸಹ ಪ್ರತಿ ತಿಂಗಳು ತನ್ನ ಸಂಪೂರ್ಣ ಸಂಬಳವನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾಳೆ. ಇದಕ್ಕೆ ಪೂರಕವಾದ ದಾಖಲೆಗಳಿವೆ. ಮೇಘಾ ಸಾವಿಗೆ ಕಾರಣನಾದ ಸಹೋದ್ಯೋಗಿ ಸುರೇಶ್ ಬಗ್ಗೆ ವಿಚಾರಣೆ ನಡೆಯಬೇಕು, ಆತನ ಕೈವಾಡ ಹೊರಬರಬೇಕು ಎಂದು ಮೃತ ಐಬಿ ಅಧಿಕಾರಿಯ ಪೋಷಕರು ಪೊಲೀಸರಲ್ಲಿ ಆರೋಪಿಸಿದ್ದಾರೆ.
ಇನ್ನು ಮೇಘಾ ಕುಟುಂಬಸ್ಥರನ್ನು ಭೇಟಿಯಾದ ಕೇಂದ್ರ ಸಚಿವ ಸುರೇಶ್ ಗೋಪಿ, "ಮೇಘಾ ಸಾವಿನ ಬಗ್ಗೆ ಕುಟುಂಬದವರು ಮಾಡಿರುವ ಆರೋಪಗಳನ್ನು ಸರಿಯಾಗಿ ಪರಿಶೀಲಿಸಲಾಗುವುದು. ತನಿಖೆಯನ್ನು ತ್ವರಿತಗೊಳಿಸಲು ಪ್ರಯತ್ನಿಸಲಾಗುವುದು. ಮತ್ತು ಇದರಲ್ಲಿ ಯಾವುದೇ ರಾಜಿಯಾಗುವ ಮಾತೇ ಇಲ್ಲ. ಸಮಗ್ರ ತನಿಖೆ ನಡೆಸಲು ಮುಂಚಿತವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಸಚಿವರು ಭರವಸೆ ನೀಡಿದ್ದಾರೆ,(ಏಜೆನ್ಸೀಸ್).