ನ್ಯೂಸ್

'ಭಾಭ್​ ಜಿ'ಹಪ್ಪಳ ಕರೊನಾ ವಿರುದ್ಧ ಹೋರಾಡುತ್ತದೆ ಎಂದಿದ್ದ ಕೇಂದ್ರ ಸಚಿವರಿಗೂ ಸೋಂಕು; ಏಮ್ಸ್​ಗೆ ದಾಖಲು

ಕೇಂದ್ರ ಸಚಿವರಿಗೆ ಕರೊನಾ ಕಂಟಕವಾಗಿ ಕಾಡುತ್ತಿದೆ. ಮೊದಲು ಕೊವಿಡ್​-19 ಸೋಂಕು ಕಾಣಿಸಿಕೊಂಡಿದ್ದು ಗೃಹ ಸಚಿವ ಅಮಿತ್​ ಷಾ ಅವರಲ್ಲಿ. ನಂತರ ಧರ್ಮೇಂದ್ರ ಪ್ರಧಾನ್​ ಅವರಲ್ಲೂ ಸೋಂಕು ದೃಢಪಟ್ಟಿದೆ.

ಹಾಗೇ ಇಂದು ಇಬ್ಬರು ಕೇಂದ್ರ ಸಚಿವರಲ್ಲಿ ಕರೊನಾ ಇರುವುದು ಪತ್ತೆಯಾಗಿದ್ದು, ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ.ಇಂದು ಮಧ್ಯಾಹ್ಯ ಕೇಂದ್ರ ಕೃಷಿ ಸಚಿವಾಲಯದ ರಾಜ್ಯ ಸಚಿವ ಕೈಲಾಶ್ ಚೌಧರಿಯವರು ತಮಗೆ ಕೊವಿಡ್​-19 ತಗುಲಿದ್ದಾಗಿ ಟ್ವೀಟ್​ ಮಾಡಿದ್ದರು. ಹಾಗೇ ಅವರು ಜೋಧ್​ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೀಗ ಕೇಂದ್ರ ಜಲಸಂಪನ್ಮೂಲ ಖಾತೆ ರಾಜ್ಯ ಸಚಿವ ಅರ್ಜುನ್​ ರಾಮ್​ ಮೇಘ್ವಾಲ್​ ಅವರಲ್ಲಿ ಸೋಂಕು ದೃಢಪಟ್ಟಿದ್ದು, ದೆಹಲಿಯ ಏಮ್ಸ್​ಗೆ ದಾಖಲಾಗಿದೆ. ಇದನ್ನೂ ಓದಿ: ಬಾಲಿವುಡ್​ ನಟ ಸಂಜಯ್​ ದತ್​​ಗೆ ಅನಾರೋಗ್ಯ; ಐಸಿಯುನಲ್ಲಿ ಚಿಕಿತ್ಸೆ

ನನಗೆ ಕರೊನಾದ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡಿವೆ. ಮೊದಲೊಂದು ಬಾರಿ ತಪಾಸಣೆ ಮಾಡಿಸಿದಾಗ ವರದಿ ನೆಗೆಟಿವ್​ ಎಂದು ಬಂದಿತ್ತು. ಹಾಗೇ ಎರಡನೇ ಬಾರಿ ಟೆಸ್ಟ್​​ನಲ್ಲಿ ಪಾಸಿಟಿವ್​ ಬಂದಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಅರ್ಜುನ್​ ಮೇಘ್ವಾಲ್ ಅವರು ಹೊಸಬಗೆಯ ಹಪ್ಪಳ ಭಾಭಿ ಜಿ ಪಾಪಡ್​​ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಇದನ್ನು ತಿಂದರೆ ದೇಹದಲ್ಲಿ ಪ್ರತಿಕಾಯಗಳು ಹೆಚ್ಚಿ, ಕರೊನಾ ವಿರುದ್ಧ ಹೋರಾಟ ಮಾಡುತ್ತವೆ ಎಂದೂ ಹೇಳಿ, ಸುದ್ದಿಯಾಗಿದ್ದರು. (ಏಜೆನ್ಸೀಸ್​)