ನವದೆಹಲಿ: ದೇಶ ವಿರೋಧಿ ಘೋಷಣೆ ಕೂಗುವ ವಿದ್ಯಾರ್ಥಿಗಳನ್ನು ಕಂಬಿ ಹಿಂದೆ ಹಾಕಬೇಕೋ, ಬೇಡವೋ..? ಆದರೆ ಇದಕ್ಕೆ ದೆಹಲಿ ಮುಖ್ಯಮಂತ್ರಿ ಅನುಮತಿ ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಆರೋಪಿಸಿದ್ದಾರೆ.
ದೆಹಲಿ ಚುನಾವಣೆ ಘೋಷಣೆ ಆಗುವ ಮುಂಚೆ ಆರೋಪ ಮಾಡಿರುವ ಅಮಿತ್ ಷಾ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದರು. ಅವರು ತುಕ್ಡೆ ತುಕ್ಡೆ ಗ್ಯಾಂಗ್ನ್ನು ಬೆಂಬಲಿಸುತ್ತಿದ್ದಾರೆ ಎಂದರು.
ತನ್ನ ರಾಜಕೀಯ ಒತ್ತಾಸೆಗಾಗಿ ಆಯುಷ್ಮಾನ್ ಭವ ಯೋಜನೆಯನ್ನು ಜಾರಿಗೊಳಿಸದ ಕೇಜ್ರಿವಾಲ್, ಆ ಮೂಲಕ ಬಡವರಿಗೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಷಾ, ಜನರು ಇದನ್ನು ಗಮನಿಸುತ್ತಿದ್ದಾರೆ, ಕೇಜ್ರಿವಾಲ್ ಅವರೇ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಮನೆಗೆ ಕಳುಹಿಸಲಿದ್ದಾರೆ ಎಂದರು.
ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿದ ಗೃಹ ಸಚಿವ, ದೇಶದ ಅಲ್ಪ ಸಂಖ್ಯಾತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಗಲಭೆಗಳಿಗೆ ನೀವೇ ಜವಾಬ್ದಾರರು ಎಂದು ಆಕ್ರೋಷ ವ್ಯಕ್ತಪಡಿಸಿದರು.
ಆಪ್, ಕಾಂಗ್ರೆಸ್ ಅದರಲ್ಲೂ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅಲ್ಪ ಸಂಖ್ಯಾತರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಾಯ್ದೆ ಅನ್ವಯ ಯಾರ ಪೌರತ್ವವೂ ರದ್ದಾಗುವುದಿಲ್ಲ. ಬದಲಿಗೆ ಈ ಕಾಯ್ದೆಯಿಂದ ಪೌರತ್ವ ಸಿಗಲಿದೆ. ಈ ಪಕ್ಷಗಳೇ ದೇಶದಲ್ಲಿನ ಗಲಭೆಗಳಿಗೆ ಕಾರಣ ಎಂದು ಪುನರುಚ್ಚರಿಸಿದರು. (ಏಜೆನ್ಸೀಸ್)