ನ್ಯೂಸ್

ವರ್ಕ್ ​ಫ್ರಂ ಹೋಮ್​ನಲ್ಲಿದ್ದ ಸೀನಿಯರ್ಸ್​ಗೆ ಶಾಕ್​- ಮತ್ತೆ ಕಚೇರಿ ನೋಡುವ ಭಾಗ್ಯ ತಪ್ಪಿ ಹೋಯ್ತು!

ನವದೆಹಲಿ: ಕರೊನಾ ವಿರುದ್ಧ ಸಮರಕ್ಕೆ ಕೈಜೋಡಿಸುವಂತೆ ಕರೆ ನೀಡುತ್ತಿರುವ ಕೇಂದ್ರ ಹಾಗೂ ಸರ್ಕಾರಗಳು ಯಾಕೋ ನಿವೃತ್ತಿಯಾಗುವವರ ವಿಚಾರವಾಗಿ ಮೃದು ಧೋರಣೆ ತಳೆದಂತಿಲ್ಲ. ಅಗತ್ಯ ಸರ್ಕಾರಿ ಸೇವೆಗಳನ್ನು ಹೊರತುಪಡಿಸಿದರೆ ಇನ್ನುಳಿದವರಿಗೆ ಮನೆಯಲ್ಲಿಯೇ ಇರುವಂತೆ ಹೇಳಿವೆ. ಅಧಿಕೃತವಾಗಿ ರಜೆಯನ್ನೂ ಘೋಷಣೆ ಮಾಡಿವೆ. ಈ ಅವಧಿಯಲ್ಲಿ ನಿವೃತ್ತರಾಗಲಿರುವ ಕೇಂದ್ರ ಸರ್ಕಾರಿ ನೌಕರರು ಕಾಯಂ ಆಗಿ ಮನೆಯಲ್ಲಿಯೇ ಉಳಿಯುವಂತಾಗಿದೆ.

ಏಪ್ರಿಲ್​ 14ರವರೆಗೆ ದೇಶಾದ್ಯಂತ ಲಾಕ್​ಡೌನ್​ ಘೋಷಣೆಯಾಗಿರುವ ಕಾರಣ ಈ ಅವಧಿಯಲ್ಲಿ ಕೊನೆಯ ದಿನಾಂಕವಿರುವ, ಮಾನ್ಯತೆ ಅವಧಿ ಪೂರ್ಣಗೊಂಡಿರುವ ದಾಖಲೆಗಳು, ಅರ್ಜಿ ಸಲ್ಲಿಕೆ, ವಿವಿಧ ಪರೀಕ್ಷೆ ಮೊದಲಾದವುಗಳ ಅವಧಿಯನ್ನು ವಿಸ್ತರಿಸಲಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಸೇವಾವಧಿ ಪೂಣರ್ಗೊಳ್ಳುವ ಕೇಂದ್ರ ಸರ್ಕಾರಿ ನೌಕರರಿಗೆ ಯಾವುದೇ ವಿಸ್ತರಣೆ ಇರುವುದಿಲ್ಲಎಂದು ಸ್ಪಷ್ಟಪಡಿಸಲಾಗಿದೆ.

2020ರ ಮಾರ್ಚ್​ 31ರೊಳಗೆ ವಯೋನಿವೃತ್ತಿ ಹೊಂದಿದವರ ಸೇವಾವಧಿಯನ್ನುವಿಸ್ತರಿಸಲಾಗುತ್ತಿಲ್ಲ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಸ್ಪಷ್ಟಪಡಿಸಿದೆ. ಪ್ರಸ್ತುತ ಅವರು ರಜೆಯ ಮೇಲಿರಲಿ ಅಥವಾ ಮನೆಯಿಂದಲೇ ಕೆಲಸ ಮಾಡುತ್ತಿರಲಿ ಲಾಕ್​ಡೌನ್​ ಅಥವಾ ಇನ್ನಾವುದೇ ಕಾರಣಕ್ಕೂ ಕರ್ತವ್ಯದ ಅವಧಿಯನ್ನು ಮುಂದುವರಿಸಲಾಗದು ಎಂದು ಹೇಳಿದೆ.

ಪ್ರಸ್ತುತ ಏಪ್ರಿಲ್​ 14ರವರೆಗೂ ಲಾಕ್​ಡೌನ್​ ಇರಲಿದೆ. ಈ ಅವಧಿಯಲ್ಲಿ ನಿವೃತ್ತಿಯಾಗುವವರಿಗೆ ಮೇಲಿನ ಆದೇಶವೇ ಅನ್ವಯವಾಗುತ್ತಾ ಅಥವಾ ಅಗತ್ಯ ಸೇವೆಯಲ್ಲಿರುವವರನ್ನು ಕರ್ತವ್ಯ ಮುಂದುವರಿಸಲು ಸೂಚಿಸಲಾಗುತ್ತದೇಯೇ ಎಂಬುದು ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ನಿವೃತ್ತಿ ಅಂಚಿನಲ್ಲಿದ್ದು, ಮನೆಯಲ್ಲಿದ್ದವರು ಮತ್ತೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಭಾಗ್ಯವೇ ಇಲ್ಲವಾಗಿ ಕಾಯಂ ಆಗಿ ಮನೆಯಲ್ಲಿಯೇ ಮುಂದುವರಿಯುವಂತಾಗಿದೆ.