ನ್ಯೂಯಾರ್ಕ್: ವಿಶ್ವ ಮಾನವ ಹಕ್ಕುಗಳ ಮಂಡಳಿಯು, ಮ್ಯಾನ್ಮಾರ್ ಸೇನೆಯು ಬಂಧಿಸಿರುವ ಚುನಾಯಿತ ನಾಯಕಿ ಔಂಗ್ ಸನ್ ಸೂ ಕ್ಯೀ, ಅಧ್ಯಕ್ಷ ವಿನ್ ಮಿಯಿಂಟ್ ಮತ್ತು ಇತರ ನಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕಾಗಿ ಆಗ್ರಹಿಸಿದೆ. ಒಂದು ವರ್ಷದ ತುರ್ತು ಪರಿಸ್ಥಿತಿಯನ್ನು ಘೋಷಿಸಿರುವ ಮ್ಯಾನ್ಮಾರ್ ಸೇನೆಯ ಕ್ರಮವನ್ನು ಖಂಡಿಸಿರುವ ಮಂಡಳಿ, ಚುನಾಯಿತ ನಾಯಕರ ನೇತೃತ್ವದಲ್ಲಿ ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ಹೇಳಿದೆ.
ಈ ಬಗ್ಗೆ ಶುಕ್ರವಾರ (ಫೆಬ್ರವರಿ 13) ರಂದು ನಿರ್ಣಯ ಅಂಗೀಕರಿಸಿದ ಮಂಡಳಿ, ಹಿಂಸೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಎಡೆ ಮಾಡಬಾರದು. ಮೂಲಭೂತ ಸ್ವಾತಂತ್ರ್ಯ ಮತ್ತು ಕಾನೂನಿನ ಪರಮಾಧಿಪತ್ಯವನ್ನು ಗೌರವಿಸಬೇಕು ಎಂದಿದೆ. ಕರಡು ನಿರ್ಣಯವನ್ನು ಯುರೋಪಿಯನ್ ಯೂನಿಯನ್ ಪರವಾಗಿ ಇಂಗ್ಲೆಂಡ್ ಮತ್ತು ಆಸ್ಟ್ರಿಯಾ ಚರ್ಚೆಗೆ ತಂದಿದ್ದವು. ಚೀನಾ, ರಷಿಯನ್ ಫೆಡರೇಶನ್, ವೆನೆಜುಯೆಲಾ, ಫಿಲಿಫಿನ್ಸ್ ಮತ್ತು ಬೊಲಿವಿಯಾ ದೇಶಗಳು ಈ ನಿರ್ಣಯದ ಪರವಾಗಿ ಮಾತನಾಡಿದ್ದವು.
2020 ರ ನವೆಂಬರ್ 8 ರಂದು ನಡೆದ ಚುನಾವಣೆಯಲ್ಲಿ ನ್ಯಾಷನಲ್ ಲೀಗ್ ಫಾರ್ ಡೆಮೊಕ್ರೆಸಿ ಪಕ್ಷವು ಭಾರೀ ಬಹುಮತದಿಂದ ಗೆದ್ದಿತ್ತು. ಪಕ್ಷದ ನಾಯಕಿ ಸೂ ಕ್ಯೀ ಸರ್ಕಾರವು ಈ ಫೆಬ್ರವರಿ 1 ರಂದು ತನ್ನ ಮೊದಲನೇ ಸಂಸತ್ ಅಧಿವೇಶನ ನಡೆಸಬೇಕಿದ್ದ ದಿನ, ಮ್ಯಾನ್ಮಾರ್ ಸೇನೆಯು ದಿಢೀರನೇ ತುರ್ತು ಪರಿಸ್ಥಿತಿ ಘೋಷಿಸಿತು. ಸ್ಟೇಟ್ ಕೌನ್ಸೆಲರ್ ಸೂ ಕೀ, ಅಧ್ಯಕ್ಷ ವಿನ್ ಮಿಯಿಂಟ್ ಮತ್ತು ಇತರ ನಾಯಕರನ್ನು ಬಂಧನಕ್ಕೊಳಪಡಿಸಿತ್ತು. ಸೇನೆಯ ಈ ಕ್ರಮವನ್ನು ವಿರೋಧಿಸಿ ಹಲವು ಪ್ರತಿಭಟನೆಗಳು ಮ್ಯಾನ್ಮಾರ್ನಲ್ಲಿ ನಡೆದಿವೆ.(ಏಜೆನ್ಸೀಸ್)