ದೇಶದ ಮೇಲೆ 21 ತಿಂಗಳುಗಳ ಕಾಲ ತುರ್ತು ಪರಿಸ್ಥಿತಿ ಹೇರಿದ್ದ ಕರಾಳ ಅಧ್ಯಾಯಕ್ಕೆ ಇಂದಿಗೆ 50 ವರ್ಷ. ಆ ನೆನಪುಗಳು ತಾಜಾ ಆದಾಗ ಹಲವು ರಾಜಕೀಯ ನಾಯಕರ ಎದೆಯಲ್ಲಿ ಇಂದಿಗೂ ವಿಷಾದ ಭಾವ, ಆಗ ಅನುಭವಿಸಿದ್ದ ಪರಮಕಷ್ಟಗಳ ಬಗೆಗಿನ ಆಕ್ರೋಶ ವ್ಯಕ್ತವಾಗುತ್ತದೆ. ಜನಪ್ರಿಯತೆಯ ಉತ್ತುಂಗಕ್ಕೆ ತಲುಪಿದ್ದ ಇಂದಿರಾ ಗಾಂಧಿ ಕೈಗೊಂಡ ಈ ನಿರ್ಣಯದಿಂದ ಮುಂದೆ ಭಾರತದ ರಾಜಕೀಯ ಚಿತ್ರಣವೇ ಬದಲಾಯಿತು ಎಂಬುದು ಇತಿಹಾಸ. ಆದರೆ, ನಿಜಕ್ಕೂ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವಂಥ ಸನ್ನಿವೇಶ ಸೃಷ್ಟಿಯಾಗಿತ್ತೆ ಎಂಬ ಪ್ರಶ್ನೆ ಇಂದಿಗೂ ಕಾಡುತ್ತಿದೆ.
ಇಂದಿರಾ ಗಾಂಧಿ ಭಾರತದ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಯ ಜತೆ ಆಡಳಿತದಲ್ಲಿ ಕೆಲ ಮಹತ್ವದ ಹಾಗೂ ದಿಟ್ಟ ನಿರ್ಧಾರಗಳನ್ನು ತಳೆದವರು. ಬಾಂಗ್ಲಾ ವಿಮೋಚನೆಗಾಗಿ ನಡೆಸಿದ ಹೋರಾಟವನ್ನು ಆಗಿನ ಪ್ರತಿಪಕ್ಷಗಳೂ ಸ್ವಾಗತಿಸಿದ್ದವು. ಇಂಥ ಇಂದಿರಾ ಕೂಡ ಲೋಕನಾಯಕ ಜಯಪ್ರಕಾಶ್ ನಾರಾಯಣರ ಆಂದೋಲನ, ಪುತ್ರ ಸಂಜಯ್ ಗಾಂಧಿ ಮೇಲೆ ಬಂದ ಆರೋಪ ಹಾಗೂ ದೇಶದಲ್ಲಿನ ಕೆಲ ಕ್ಷಿಪ್ರ ಬೆಳವಣಿಗೆಗಳಿಂದ ಅಧೀರರಾಗಿದ್ದು ಸುಳ್ಳಲ್ಲ. ಚುನಾವಣೆಯಲ್ಲಿ ಇಂದಿರಾ ಆಯ್ಕೆಯನ್ನೇ ಅಲಹಾಬಾದ್ ನ್ಯಾಯಾಲಯವು ಅಕ್ರಮ ಎಂದು ಹೇಳಿ ಅದನ್ನು ರದ್ದು ಮಾಡಿದಾಗ ಅವರಲ್ಲಿ ಜಾಗೃತವಾಗಿದ್ದು ಸರ್ವಾಧಿಕಾರದ ಭಾವ. ಇದಕ್ಕಾಗಿ ದೇಶ ಎಷ್ಟು ದೊಡ್ಡ ಬೆಲೆ ತೆರಬೇಕಾಯಿತಲ್ಲವೇ? ಇದ್ದಕ್ಕಿದ್ದ ಹಾಗೆ ತುರ್ತಸ್ಥಿತಿ ಘೊಷಣೆಯಾದಾಗ ಇಡೀ ದೇಶ ಬೆಚ್ಚಿಬಿತ್ತು.
ಪ್ರತಿಪಕ್ಷಗಳ ನಾಯಕರು, ಇತರ ರಾಜಕೀಯ ಮುಖಂಡರು ಜೈಲುವಾಸ ಕಾಣುವಂತಾದರೆ ಮಾಧ್ಯಮಗಳ ದನಿಯನ್ನೂ ಅದುಮಲಾಯಿತು. ಇದೆಲ್ಲ ಜನಮಾನಸದಲ್ಲಿ ಯಾವ ಪರಿ ಆಕ್ರೋಶ ಸೃಷ್ಟಿಸಿತೆಂದರೆ ‘ಇಂದಿರಾ ಈಸ್ ಇಂಡಿಯಾ ಇಂಡಿಯಾ ಈಸ್ ಇಂದಿರಾ’ ಎಂಬೆಲ್ಲ ಹೆಗ್ಗಳಿಕೆ ತುರ್ತಸ್ಥಿತಿ ಬಳಿಕದ ಚುನಾವಣೆಯಲ್ಲಿ ಕೊಚ್ಚಿಕೊಂಡು ಹೋಗಿ ಜನತಾ ಪಕ್ಷದ ಮೂಲಕ ಹೊಸ ರಾಜಕೀಯ ಪರಂಪರೆಯೊಂದು ಹುಟ್ಟಿಕೊಂಡಿತು. ಕಳೆದ 50 ವರ್ಷಗಳಲ್ಲಿ ಸ್ಥಿತಿ ಸಾಕಷ್ಟು ಬದಲಾಗಿದೆ. ವ್ಯವಸ್ಥೆ ಜಾಗೃತವಾಗಿದೆ. ತುರ್ತಸ್ಥಿತಿಯ ದಿನಗಳು ಮರುಕಳಿಸುವ ಸಾಧ್ಯತೆಗಳು, ಆತಂಕಗಳು ಗೋಚರಿಸುತ್ತಿಲ್ಲ.
ಜನಭಾವನೆಗೆ ವಿರುದ್ಧವಾದ ಆಡಳಿತ/ಸರ್ಕಾರಗಳನ್ನು ಮತದಾನವೆಂಬ ಅಸ್ತ್ರದ ಮೂಲಕ ಜನತಾ ಜನಾರ್ದನ ಕಿತ್ತೆಸೆಯುತ್ತಾನೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ವ್ಯವಸ್ಥೆಯ ಸುಧಾರಣೆಗೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಅದಕ್ಕಾಗಿ ದಕ್ಷ ಆಡಳಿತವೂ ಬೇಕಾಗುತ್ತದೆ. ಇದನ್ನು ಸರ್ವಾಧಿಕಾರಿ ಮನೋಭಾವಕ್ಕೆ ಹೋಲಿಸಲಾಗದು. ಆದರೆ ನಮ್ಮ ರಾಜಕೀಯ ವ್ಯವಸ್ಥೆ ಈಗಲೂ ಹಲವು ಅಪಸವ್ಯಗಳನ್ನು ಒಳಗೊಂಡಿದೆ ಎಂಬುದು ವಾಸ್ತವ. ರಾಜಕೀಯದಲ್ಲಿ ನೈತಿಕತೆ ಮರೆಯಾಗುತ್ತಿರುವುದು ವರ್ತಮಾನದ ದೊಡ್ಡ ತಲ್ಲಣವಾಗಿದೆ. ಒಟ್ಟಾರೆ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಅವಲೋಕನ ನಡೆಸಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವತ್ತ ಚಿಂತನೆ ನಡೆಸಲು ಇದು ಸಕಾಲ.