ಚಿಕ್ಕಬಳ್ಳಾಪುರ: ಹಕ್ಕುಗಳ ಉಲ್ಲಂಘನೆ ಪ್ರಕರಣದಲ್ಲಿ ನೊಂದವರಿಗೆ ತ್ವರಿತವಾಗಿ ಪರಿಹಾರ ಸಿಗಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್ ಭಟ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಮೊದಲು ಹೆಚ್ಚಾಗಿ ಪೊಲೀಸ್ ಇಲಾಖೆಯಲ್ಲಿ, ಬಳಿಕ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಲ್ಲಿ ವರದಿಯಾಗುತ್ತಿವೆ. ಅರ್ಜಿದಾರರು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬಂದು ದೂರು ನೀಡಿ, ಇತ್ಯರ್ಥಪಡಿಸಿಕೊಳ್ಳಲು ಕಷ್ಟಪಡುತ್ತಿರುವುದನ್ನು ಅರಿತು, ಜಿಲ್ಲಾ ಪ್ರವಾಸ ಕೈಗೊಂಡು, ಅಲ್ಲಿಯೇ ಇತ್ಯರ್ಥಪಡಿಸಲಾಗುತ್ತಿದೆ. ಕಳೆದ ಎಂಟು ತಿಂಗಳಿನಿಂದ 14 ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ. ಇದೇ ವೇಳೆ ಹೊಸ ದೂರು ಮತ್ತು ಅಹವಾಲುಗಳನ್ನು ಆಲಿಸಲಾಗಿದೆ ಎಂದರು.
ಸಾಮಾಜಿಕ ಬಹಿಷ್ಕಾರ, ಭ್ರೂಣ ಹತ್ಯೆ ಸೇರಿದಂತೆ ಇತರ ವಿಷಯಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಸಿಕ್ಕಿದ ತಕ್ಷಣ ಆಯೋಗವು ಪ್ರಕರಣಗಳನ್ನು ಸ್ವಯಂ ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಇದರ ನಡುವೆ ಜನರು ನೇರವಾಗಿ ಇಲ್ಲವೇ ಆನ್ ಲೈನ್ ಮೂಲಕ ದೂರು ಸಲ್ಲಿಸಬಹುದು ಎಂದರು. ಈ ಸಂದರ್ಭದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ, ಅಪರ ಜಿಲ್ಲಾಧಿಕಾರಿ ಎನ್. ಭಾಸ್ಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ ಖಾಸಿಂ, ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ, ಸಮಾಜ ಕಲ್ಯಾಣ ಇಲಾಖೆಯ ತೇಜಾನಂದ ರೆಡ್ಡಿ, ನಿವಾಸಿ ವೈದ್ಯ ರಮೇಶ್ ಮತ್ತಿತರರು ಇದ್ದರು.
*ಪ್ರಕರಣಗಳ ತ್ವರಿತ ಇತ್ಯರ್ಥ*
ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಕಳೆದ ಸಾಲಿನ ನವೆಂಬರ್ ನಲ್ಲಿ 8054 ಪ್ರಕರಣಗಳು ಬಾಕಿ ಇದ್ದು ಇವುಗಳ ಪೈಕಿ ಇಲ್ಲಿಯವರೆಗೂ 5,456 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ, ಪ್ರಸ್ತುತ 2,598 ಪ್ರಕರಣಗಳನ್ನು ವಿಲೇವಾರಿಗೊಳಿಸಬೇಕಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
*ಅಳಲು ತೋಡಿಕೊಂಡ ಜನ*
ಸಾರಿಗೆ ಬಸ್ ನಿಲ್ದಾಣದ ಬೇಕರಿಯಲ್ಲಿ ಅವಧಿ ಮೀರಿದ ತಿಂಡಿ ತಿನಿಸು, ಪಾನೀಯಾಗಳ ಮಾರಾಟ, ಬಸ್ಸಿಗಾಗಿ ಪ್ರಯಾಣಿಕರ ಪರದಾಟ, ಆಸ್ಪತ್ರೆಯ ಆವರಣದ ನೆಲದಲ್ಲಿ ಕುಳಿತು ಅಳಲು ತೋಡಿಕೊಂಡ ರೋಗಿಗಳು,
ಇವು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು. ಮೊದಲೇ ತಂಡದ ಆಗಮನ ಬಗ್ಗೆ ತಿಳಿದುಕೊಂಡಿದ್ದ ಅಧಿಕಾರಿಗಳು ರೆಡಿಮೇಡ್ ಉತ್ತರ ಮತ್ತು ಜನರ ಮಾತುಗಳ ಮೂಲಕ ನಿಭಾಯಿಸಲು ಯತ್ನಿಸಿದರು. ಹಲವು ಕಡೆ ಲೋಪಗಳು ಕಂಡು ಬಂದರೂ ಸಾವಧಾನವಾಗಿ ಮಾಹಿತಿ ಸಂಗ್ರಹಿಸಲಾಯಿತು. ರ್ನಿಲಕ್ಷ$್ಯ ತೋರಿದವರನ್ನು ತರಾಟೆಗೆ ತೆಗೆದುಕೊಳ್ಳುವ ಕೆಲಸವಾಗಲಿಲ್ಲ. ಇನ್ನೂ ಜಿಲ್ಲಾ ಮಟ್ಟದ ಅಧಿಕಾರಿಗಳು ಗಂಭೀರ ಸಮಸ್ಯೆಗಳು ಮತ್ತು ಅಧೀನ ಸಿಬ್ಬಂದಿಯ ನಿಗಾ ವೈಖರಿಯ ಬಗ್ಗೆ ಪರಸ್ಪರ ನಗುತ್ತ ಮಾತನಾಡಿಕೊಂಡರು. ಅಧ್ಯಕ್ಷರ ಸಲಹೆಗೆ ತಲೆಯಾಡಿಸಿದರು.
*ಅವಧಿ ಮೀರಿದ ಪಾನೀಯಾ*
ಬಸ್ ನಿಲ್ದಾಣದಲ್ಲಿ ಒಂದು ವರ್ಷಕ್ಕೂ ಅವಧಿ ಮೀರಿದ ಪಾನೀಯಾ, ತಿಂಡಿ ತಿನಿಸುಗಳನ್ನು ನಿರ್ಭಯವಾಗಿ ಮಾರಲಾಗುತ್ತಿತ್ತು. ಇದಕ್ಕೂ ದುಬಾರಿ ದರ ನಿಗದಿಯ ಆರೋಪಗಳು ಕೇಳಿ ಬಂದವು. ಮೊದಲಿಗೆ ಅಧ್ಯಕ್ಷರ ತಂಡವು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ, ಅಲ್ಲಿನ ಮೂಲ ಸೌಕರ್ಯಗಳು ಹಾಗೂ ಅಲ್ಲಿನ ಸ್ವಚ್ಚತೆ ಬಗ್ಗೆ ವೀಸಿತು. ಸಿ.ಸಿ ಕ್ಯಾಮರಾ ಗಳನ್ನು ಅಳವಡಿಸಲು ಸೂಚಿಸಿತು. ಬಳಿಕ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದಾಗ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮನವಿ ಕೇಳಿ ಬಂತು.