ನ್ಯೂಸ್

ರವಿ ಪೂಜಾರಿ ಸಿಸಿಬಿ ವಶಕ್ಕೆ: ಪಾತಕಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಿದ ಪೊಲೀಸರು

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ಮಾ.7ರ ವರೆಗೆ ಪೊಲೀಸ್ ವಶಕ್ಕೆ ನೀಡಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಸೋಮವಾರ ಬೆಳಗ್ಗೆ 11.50ಕ್ಕೆ ಅವರನ್ನು ನ್ಯಾಯಾಲಯಕ್ಕೆ ಕರೆ ತಂದ ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಮಾ.7ರ ವರೆಗೆ ವಶಕ್ಕೆ ಪಡೆದ ಬಳಿಕ ಬಿಗಿ ಭದ್ರತೆಯಲ್ಲಿ ಮತ್ತೆ ಇಂಟರಾಗೇಶನ್ ಸೆಂಟರ್​ಗೆ ಕರೆದುಕೊಂಡು ಹೋಗಲಾಗಿದ್ದು, ಸದ್ಯ ಅಲ್ಲೇ ವಿಚಾರಣೆ ನಡೆಸಲಾಗುತ್ತಿದೆ.

ಕೊಲೆ ಪ್ರಕರಣದಲ್ಲಿ ವಶಕ್ಕೆ: 2007ರಲ್ಲಿ ನಡೆದ ಶಬ್​ನಮ್ ಡೆವಲಪರ್ಸ್​ನ ಸಿಬ್ಬಂದಿ ಕೊಲೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ನಗರ ಶಬ್​ನಮ್ ಡೆವಲಪರ್ಸ್ ಮಾಲೀಕರಾದ ಸಮೀವುಲ್ಲಾ ಎಂಬುವವರ ಬಳಿ ಪೂಜಾರಿ ಹಪ್ತಾ ವಸೂಲಿ ಮಾಡಲು ತನ್ನ ಸಹಚರರೊಂದಿಗೆ ಒಳಸಂಚು ರೂಪಿಸಿದ್ದ. 2007 ಫೆ.15ರಂದು ಮಧ್ಯಾಹ್ನ 2.45ರಲ್ಲಿ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರ 9ನೇ ಬ್ಲಾಕ್​ನ ಈಸ್ಟ್ ಎಂಡ್ ಡಿ ಕ್ರಾಸ್​ನಲ್ಲಿರುವ ಶಬ್​ನಮ್ ಡೆವಲಪರ್ಸ್ ಕಚೇರಿಗೆ ಹೋಗಿದ್ದ ರವಿ ಪೂಜಾರಿ ತಂಡ, ಅಲ್ಲಿ ಕೆಲಸ ಮಾಡುತ್ತಿದ್ದ ರವಿ ಮತ್ತು ಶೈಲಜಾ ಮೇಲೆ ಅಕ್ರಮವಾಗಿ ಹೊಂದಿದ್ದ ಪಿಸ್ತೂಲ್​ನಿಂದ ಗುಂಡು ಹಾರಿಸಿದ್ದರು. ರವಿ ಸ್ಥಳದಲ್ಲೇ ಮೃತಪಟ್ಟರೆ, ಶೈಲಜಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕೃತ್ಯ ನಡೆಯುವ ವೇಳೆ ಕಚೇರಿಯಲ್ಲಿದ್ದ ಅಕ್ರಂಪಾಷಾ ಎಂಬುವವರು ನೀಡಿದ ದೂರಿನ ಮೇಲೆ ತಿಲಕ್​ನಗರ ಪೊಲೀಸರು 2007ರಲ್ಲಿ ರವಿ ಪೂಜಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಮೊದಲನೇ ಆರೋಪಿಯಾಗಿದ್ದ ರವಿ ಪೂಜಾರಿ, ಎರಡನೇ ಆರೋಪಿ ಸುರೇಶ್ ಪೂಜಾರಿ ತಲೆ ಮರೆಸಿಕೊಂಡಿದ್ದರು. ಪ್ರಕರಣದಲ್ಲಿ 17 ಜನರ ಬಂಧನವಾಗಿದ್ದರೂ ರವಿ ಪೂಜಾರಿ ಮಾತ್ರ ಪತ್ತೆಯಾಗಿರಲಿಲ್ಲ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ರೆಡ್​ಕಾರ್ನರ್ ನೋಟಿಸ್ (ಆರ್​ಸಿಎನ್) ಹೊರಡಿಸಲಾಗಿತ್ತು.

ಮಾಧ್ಯಮದ ಕಣ್ತಪ್ಪಿಸಲು ಯತ್ನ: ರವಿ ಪೂಜಾರಿಯನ್ನು ಮಡಿವಾಳದ ಇಂಟರಾಗೇಶನ್ ಸೆಂಟರ್​ನಿಂದ ನ್ಯಾಯಾಲಯಕ್ಕೆ ಕರೆ ತರುವ ವೇಳೆ ನಾಲ್ಕು ಪೊಲೀಸ್ ಜೀಪು ಹಾಗೂ ಒಂದು ಬಸ್​ಇತ್ತು. ಮಾಧ್ಯಮದವರು ಈ ವಾಹನಗಳನ್ನು ಹಿಂಬಾಲಿಸಿ ಕೊಂಡು ಬರುತ್ತಿದ್ದರು. ಇವರ ಕಣ್ತಪ್ಪಿಸಲು ಡೈರಿ ವೃತ್ತದ ಬಳಿ ಒಂದು

ಪೊಲೀಸ್ ಜೀಪು ಬೇರೆ ರಸ್ತೆಯಲ್ಲಿ ಹೋಯಿತು. ಆ ಜೀಪಿನೊಳಗೆ ತಲೆ ತಗ್ಗಿಸಿದ ವ್ಯಕ್ತಿ ಇರುವುದನ್ನು ಗಮನಿಸಿದ ಮಾಧ್ಯಮದವರು ಆ ವಾಹನ ಹಿಂಬಾಲಿಸಿಕೊಂಡು ಹೋಗಿದ್ದರು. ಆದರೆ, ಪೊಲೀಸರು ಬಸ್​ನಲ್ಲಿ ರವಿ ಪೂಜಾರಿಯನ್ನು ನ್ಯಾಯಾಲಯಕ್ಕೆ ಕರೆ ತಂದಿದ್ದರು. ನ್ಯಾಯಾಲಯಕ್ಕೆ ಕರೆ ತರುವ ವೇಳೆ ಸಾರ್ವಜನಿಕರಿಂದ ನೂಕು ನುಗ್ಗಲು ಉಂಟಾಗುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಮಾಧ್ಯಮ ಗಳ ಕಣ್ತಪ್ಪಿಸಲು ಈ ರೀತಿ ಮಾಡಲಾಯಿತು ಎನ್ನಲಾಗಿದೆ.

ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವಿವರ

ನ್ಯಾ: ನಿನ್ನ ಹೆಸರೇನು ?

ರವಿ: ರವಿ ಸೂರ್ಯ ಪೂಜಾರಿ

ನ್ಯಾ: ತಂದೆ ಹೆಸರೇನು ?

ರವಿ: ಸೂರ್ಯ ಪೂಜಾರಿ

ನ್ಯಾ:ನಿನ್ನ ವಯಸ್ಸು ಎಷ್ಟು ?

ರವಿ:ನನ್ನ ವಯಸ್ಸು 52

ನ್ಯಾ:ಪೊಲೀಸರು ಏನಾದರೂ ತೊಂದರೆ ಕೊಟ್ಟರೆ ?

ರವಿ: ಇಲ್ಲ

ನ್ಯಾ: ಕನ್ನಡ ಬರುತ್ತಾ ?

ರವಿ: ಅರ್ಥ ಆಗುತ್ತದೆ. ಆದರೆ, ಮಾತನಾಡುವುದು ಕಷ್ಟ.

ವಕೀಲರಿಗೆ ಎರಡು ನಿಮಿಷ ಅವಕಾಶ

ಈ ನಡುವೆ ರವಿ ಪೂಜಾರಿ ಪರ ವಕೀಲರು ಆತನ ಜತೆ ಮಾತನಾಡಲು 2 ನಿಮಿಷ ಕಾಲಾವಕಾಶ ಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ನ್ಯಾಯಾಲಯದ ಒಳಗೆ ಆರೋಪಿ ಜತೆ ಮಾತನಾಡಲು ವಕೀಲರಿಗೆ ನ್ಯಾಯಾಲಯ ಅವಕಾಶ ಕಲ್ಪಿಸಿತು. ನ್ಯಾಯಾಧೀಶರ ಎದುರೇ ತನ್ನ ವಕಾಲತ್​ಗೆ ರವಿ ಪೂಜಾರಿ ಸಹಿ ಮಾಡಿದ್ದು, ವಿಚಾರಣೆ ಸಂದರ್ಭದಲ್ಲಿ ಪೂಜಾರಿ ಪರ ವಕೀಲರು ಹಾಜರಾತಿಗೆ ಅವಕಾಶ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ತನಗೆ ಹೃದಯ ಸಂಬಂಧ ಸಮಸ್ಯೆಯಿದೆ ಎಂದು ರವಿ ಪೂಜಾರಿ ಹೇಳಿದಾಗ, ಈತನಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದರು. 15 ದಿನ ತಮ್ಮ ವಶಕ್ಕೆ ನೀಡುವಂತೆ ಸಿಸಿಬಿ ಅಧಿಕಾರಿಗಳ ತಂಡ ನ್ಯಾಯಾಲಯಕ್ಕೆ ಮನವಿ ಮಾಡಿತು. 15 ದಿನ ಏಕೆ ಬೇಕು ? ಎಂದು ನ್ಯಾಯಾದೀಶರು ಪ್ರಶ್ನಿಸಿದರು. ಇದಾದ ಬಳಿಕ ನ್ಯಾಯಾಲಯ ರವಿ ಪೂಜಾರಿಯನ್ನು ಮಾ.7ರ ವರೆಗೆ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ಆದೇಶಿಸಿತು. ನಂತರ ವಿಚಾರಣೆ ವೇಳೆ ವಿಡಿಯೋ ಮಾಡುವಂತೆ ಸೂಚನೆ ನೀಡಲಾಯಿತು.