ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಪರಿಸರಕ್ಕೆ ಮಾರಕವಾದ ಯೋಜನೆ. ಯೋಜನೆ ಅನುಷ್ಠಾನದಿಂದ ಅಪಾರ ಪ್ರಮಾಣದ ಪರಿಸರ ನಾಶವಾಗುತ್ತದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಸಾಗರ ಉಪವಿಭಾಗಾಧಿಕಾರಿ ಕಚೇರಿ ಎದುರು ಜಿಲ್ಲಾ ರೈತ ಸಂಘದಿಂದ ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಭಟನೆ ತೀವ್ರವಾದ ನಂತರ ಅಧಿಕಾರಿಗಳು ವಿದ್ಯುತ್ ತಂತಿಗಳನ್ನು ನೆಲದೊಳಗಿನಿಂದ ಒಯ್ಯುತ್ತೇವೆ ಎಂದು ಸ್ಟಪನೆ ನೀಡುತ್ತಿದ್ದಾರೆ. ನೂರಾರು ಕಿ.ಮೀ. ಭೂಮಿಯೊಳಗಿನಿಂದ ವಿದ್ಯುತ್ ತಂತಿ ಒಯ್ಯುವುದು ಅಸಾಧ್ಯವಾದ ಸಂಗತಿ. ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಇಂತಹ ಪ್ರಯೋಗ ನಡೆದಿಲ್ಲ. ಜನರು, ರೈತರ ದಿಕ್ಕು ತಪ್ಪಿಸಲು ಅಧಿಕಾರಿಗಳು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
ಎರಡು ಸಾವಿರ ಮೆಗಾವಾಟ್ ವಿದ್ಯುತ್ ಒಯ್ಯಲು ಅಪಾರ ಪ್ರಮಾಣದ ಅರಣ್ಯ, ಕೃಷಿ ಭೂಮಿ, ಜನವಸತಿ ಪ್ರದೇಶ ಭೂಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಯೋಜನೆ ಕೈಬಿಡುವವರೆಗೂ ಹೋರಾಟ ನಿಲ್ಲಿಸಬಾರದು. ಅಗತ್ಯ ಕಾನೂನು ಹೋರಾಟ ರೂಪಿಸಬೇಕಾಗಿದೆ. ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡುವ ಜತೆಗೆ ಪಕ್ಷದ ವೇದಿಕೆಯಲ್ಲಿ ಈ ಕುರಿತು ಚರ್ಚೆ ಮಾಡಲಾಗುವುದು. ಯಾವ ಕಾರಣಕ್ಕೂ ಪರಿಸರ ವಿರೋಧಿ ಯೋಜನೆ ಅನುಷ್ಠಾನಗೊಳಿಸಬಾರದು. ಎಲ್ಲರೂ ಪರಿಸರ ಪರವಾದ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಪಶ್ಚಿಮಘಟ್ಟದ ಈ ಪ್ರದೇಶವನ್ನು ಯಾವ ಕಾರಣಕ್ಕೂ ನಾಶಮಾಡಲು ಬಿಡುವುದಿಲ್ಲ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ವಿರೂಪಾಕ್ಷ, ಕೊಟ್ರಪ್ಪ ನೇದರವಳ್ಳಿ, ದೇವೇಂದ್ರಪ್ಪ ಇತರರಿದ್ದರು.