ಬೆಂಗಳೂರು: ರೈಲು ಬೋಗಿ ಸ್ವಚ್ಛತೆ ನೆಪದಲ್ಲಿ ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಹೊರಗುತ್ತಿಗೆ ನೌಕರರನ್ನು ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಹಾಗೂ ರೈಲ್ವೆ ರಕ್ಷಣಾ ದಳ ಅಧಿಕಾರಿಗಳು ಬಂಧಿಸಿದ್ದಾರೆ.
ಮೈಸೂರು ಮೂಲದ ಸೈಯದ್ ಜಬಿ (45) ಮತ್ತು ಬಿಹಾರ ಮೂಲದ ವಿಜಯ್‌ಕುಮಾರ್ (27) ಬಂಧಿತರು. ಇವರಿಂದ 21.68 ಲಕ್ಷ ರೂ. ಮೌಲ್ಯದ 49 ಮೊಬೈಲ್, 3 ಟ್ಯಾಬ್, 153 ಗ್ರಾಂ ಚಿನ್ನಾಭರಣ, 825 ಗ್ರಾಂ ಬೆಳ್ಳಿ, 1.50 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳ ಗುತ್ತಿಗೆ ಆಧಾರದ ಮೇಲೆ ರೈಲು ಬೋಗಿಗಳ ಕ್ಲೀನಿಂಗ್ ಕೆಲಸಕ್ಕೆ ಸೇರಿದ್ದು, ಯಶವಂತಪುರದ ಬಿ.ಕೆ. ನಗರದಲ್ಲಿ ನೆಲೆಸಿದ್ದರು. ಸೈಯದ್ ಜಬಿ ಬೋಗಿ ಸ್ವಚ್ಛ ಮಾಡಿದರೆ, ವಿಜಯ್ ಕುಮಾರ್ ಬೋಗಿಗಳಿಗೆ ನೀರು ತುಂಬುವ ಕೆಲಸ ಮಾಡುತ್ತಿದ್ದ.
ನಿಲ್ದಾಣಕ್ಕೆ ತಡರಾತ್ರಿ ಆಗಮಿಸುತ್ತಿದ್ದ ರೈಲುಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಯಶವಂತಪುರ ನಿಲ್ದಾಣದಲ್ಲಿ ರೈಲು ನಿಲುಗಡೆ ಬಳಿಕ ಇಳಿಯದೆ ನಿದ್ರೆ ಮಾಡುತ್ತಿದ್ದ ಪ್ರಯಾಣಿಕರ ಬ್ಯಾಗ್, ರೈಲು ಇಳಿಯುವ ಅವಸರದಲ್ಲಿ ಮರೆತುಹೋಗಿದ್ದ ಬ್ಯಾಗ್‌ಗಳಲ್ಲಿ ಆಭರಣ, ಹಣ ಮತ್ತು ರೈಲುಗಳಲ್ಲಿ ಚಾರ್ಜಿಂಗ್ ಹಾಕಿ ಮರೆತುಹೋಗಿದ್ದ ಮೊಬೈಲ್‌ಗಳನ್ನು ಸೈಯದ್ ಮತ್ತು ವಿಜಯ್ ದೋಚುತ್ತಿದ್ದರು.
2-3 ವರ್ಷಗಳಿಂದ ಕೃತ್ಯ ಎಸಗಿದ್ದರು. ಕಳ್ಳತನ ಮಾಡಲು ಅನುಕೂಲ ಆಗುವಂತೆ ರೈಲುಗಳ ಸ್ವಚ್ಛತೆಗೆ ರಾತ್ರಿಪಾಳಿ ಹಾಕಿಸಿಕೊಳ್ಳುತ್ತಿದ್ದರು. ಕೆಲ ದಿನಗಳ ಹಿಂದೆ ಪ್ರಯಾಣಿಕರೊಬ್ಬರ ಬ್ಯಾಗ್‌ನ್ನು ಆರೋಪಿಗಳು ತೆಗೆದುಕೊಂಡು ಹೋಗುತ್ತಿದ್ದರು. ಅನುಮಾನದ ಮೇಲೆ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಕೃತ್ಯಗಳು ಬಯಲಾಗಿವೆ. ಕಳವು ಮಾಡಿದ್ದ ಮೊಬೈಲ್,ಚಿನ್ನ, ಬೆಳ್ಳಿ ವಸ್ತುಗಳನ್ನು ಮಾರಾಟ ಮಾಡದೆ ತಮ್ಮ ಮನೆಯಲ್ಲೇ ಸಂಗ್ರಹಿಸಿಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.