ಬೀರೂರಿನ ಪತ್ರೆ ಸುವರ್ಣಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಸುಣ್ಣಬಣ್ಣ ಕಾಣದೆ ಸೊರಗುತ್ತಿರುವ ಕಟ್ಟಡ.  
ನ್ಯೂಸ್

ಸ್ವಾತಂತ್ರ ಪೂರ್ವದ ಶಾಲೆ ಅಳವಿನಂಚಿನಲ್ಲಿ

ಶಿವಕುಮಾರ ಎಸ್.ಪಿ.

ಬೀರೂರು: ಬಿ.ಎಚ್.ರಸ್ತೆಯಲ್ಲಿನ ಶ್ರೀಮತಿ ಸುವರ್ಣಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಗೆ 86 ವರ್ಷಗಳ ಇತಿಹಾಸವಿದೆ. ಆದರೆ ದುರಸ್ತಿ ಭಾಗ್ಯವಿಲ್ಲದೆ ಶಿಥಿಲಾವಸ್ಥೆಯಲ್ಲಿದೆ. ಮಕ್ಕಳಿಗೆ ಆಟವಾಡಲು ಕೂಡ ಸುಸಜ್ಜಿತ ಮೈದಾನವಿಲ್ಲ. ಖಾಸಗಿ ಶಾಲೆಗಳೆಡಗಿನ ಪಾಲಕರ ಆಕರ್ಷಣೆ ಸರ್ಕಾರಿ ಶಾಲೆಗಳ ಉಳಿವಿಗೆ ಬಹುದೊಡ್ಡ ಸವಾಲಾಗಿದೆ.

1937ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ಇಂದು 5 ರಿಂದ 7ನೇ ತರಗತಿಯಲ್ಲಿ ಕೇವಲ 24 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರು ಹಾಗೂ ಒಬ್ಬರು ಬಿಸಿಯೂಟ ಕಾರ್ಯಕರ್ತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಗುಣಮಟ್ಟದ ಕಪ್ಪುಹಲಗೆ ಕೂಡ ಈ ಶಾಲೆಯಲ್ಲಿಲ್ಲ. ಮಳೆ ನೀರು ಮೇಲ್ಭಾಗದಲ್ಲಿ ನಿಂತು ಮೇಲ್ಛಾವಣಿ ಹಾಳಾಗಿದೆ. ಗೋಡೆಗಳು ಸುಣ್ಣಬಣ್ಣ ಕಾಣದೆ ಅದೆಷ್ಟೋ ವರ್ಷಗಳಾಗಿವೆ. ಈ ಹಿಂದೆ 1ರಿಂದ 7ನೇ ತರಗತಿವರೆಗೆ ಮಕ್ಕಳು ದಾಖಲಾಗುತ್ತಿದ್ದರು. ಆದರೆ ಸೌಲಭ್ಯದ ಕೊರತೆಯಿಂದ ಇದೀಗ ಕೇವಲ 5ರಿಂದ 7ನೇ ತರಗತಿವರೆಗೆ ಮಾತ್ರ ನಡೆಸಲಾಗುತ್ತಿದೆ.
ಬೀರೂರು ಶೈಕ್ಷಣಿಕ ವಲಯದಲ್ಲಿ 100 ಸರ್ಕಾರಿ ಕಿರಿಯ ಪ್ರಾಥಮಿಕ, 73 ಹಿರಿಯ ಪ್ರಾಥಮಿಕ ಹಾಗೂ 16 ಪ್ರೌಢಶಾಲೆಗಳಿವೆ. ಅನುದಾನಿತ 2 ಹಿರಿಯ ಪ್ರಾಥಮಿಕ ಶಾಲೆ, 14 ಪ್ರೌಢಶಾಲೆಗಳಿವೆ. ಅನುದಾನರಹಿತ 2 ಕಿರಿಯ ಹಾಗೂ 12 ಹಿರಿಯ ಪ್ರಾಥಮಿಕ ಶಾಲೆ ಮತ್ತು 3 ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
4 ಮುರಾರ್ಜಿ ಶಾಲೆಗಳು ಸೇರಿ 223 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿದ್ದು 12,231 ಮಕ್ಕಳಿದ್ದು, 507 ಶಿಕ್ಷಕರು ಇದ್ದಾರೆ. ಬೀರೂರು ವಲಯದಲ್ಲಿ ಪ್ರಸಕ್ತ ಸಾಲಿನಲ್ಲಿ 9 ಶಿಕ್ಷಕರು ಹೊರವಲಯಕ್ಕೆ ವರ್ಗಾವಣೆಯಾಗಿದ್ದರೆ, ಉಳಿದಂತೆ ಶಿಕ್ಷಕರು ಮರುಹೊಂದಾಣಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 223 ಶಾಲೆಗಳ ಪೈಕಿ 25 ಶಾಲೆಗಳಲ್ಲಿ ದುರಸ್ತಿಯಾಗಬೇಕು. ಅಲ್ಲದೆ ವಿವಿಧ ಶಾಲೆಗಳಲ್ಲಿ ಬಳಕೆಗೆ ಯೋಗ್ಯವಲ್ಲದ ಕೊಠಡಿಗಳನ್ನು ತೆರವು ಮಾಡುವಂತೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ದಾಖಲಾತಿ ಮತ್ತು ಗ್ರಾಮಸ್ಥರ ಹಿತಾಸಕ್ತಿಯಿಂದ ಅಗ್ರಹಾರ ಮತ್ತು ಬೊಮ್ಮೇನಹಳ್ಳಿ ಶಾಲೆಗಳನ್ನು ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಕುಮಾರ್ ಪುನರಾರಂಭಿಸಿದ್ದರು. ಆದರೆ ಇಂದಿನ ಶಿಕ್ಷಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ. ಸುಸಜ್ಜಿತ ಕಟ್ಟಡ, ಶಾಲಾ ಪರಿಕರಗಳು, ಕಂಪ್ಯೂಟರ್, ಲ್ಯಾಬ್ ಮತ್ತಿತರ ಸೌಲಭ್ಯ ಒದಗಿಸಬೇಕಿದೆ.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖ ಆಗುತ್ತಿರುವುದರಿಂದ ಚೆನ್ನಾಪುರ, ಹರಳಘಟ್ಟ ಮತ್ತು ಊಡಿಗರಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ.
ಶಾಲೆಗಳಿಗೆ ಅನುದಾನವಿಲ್ಲ: ಬೀರೂರು ವಲಯದ ಶಾಲೆಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನವಿಲ್ಲದೆ ಕಂಗಾಲಾಗಿವೆ. ಜಿಪಂ ಅನುದಾನದಲ್ಲಿ ಬಳ್ಳಿಗನೂರಿನ ಪ್ರೌಢಶಾಲೆಗೆ ಒಂದು ಕೊಠಡಿ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಹಾಗೆಯೇ ಕಳೆದ ವರ್ಷದ ವಿವೇಕ ಯೋಜನೆ ಅಡಿ 20 ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿದೆ. ಸಮಗ್ರ ಶಿಕ್ಷಣ ಯೋಜನೆ ಅಡಿಯಲ್ಲಿ 10 ಶಾಲೆಗಳಿಗೆ ದೊಡ್ಡ ಪ್ರಮಾಣದ ದುರಸ್ತಿ ಭಾಗ್ಯ ದೊರೆತಿದೆ. ಮಕ್ಕಳ ಶೈಕ್ಷಣಿಕ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲು ಇಲಾಖೆಯೊಂದಿಗೆ ಮಾತನಾಡಿದ್ದೇನೆ ಎಂದು ಬಿಇಒ ಎಚ್.ಗಂಗಾಧರಪ್ಪ ಮಾಹಿತಿ ನೀಡಿದರು.