ನ್ಯೂಸ್

ಅಪರಾಜಿತ ಮಸೂದೆ ಅಂಗೀಕಾರ: ಅತ್ಯಾಚಾರಿಗಳಿಗೆ ಮರಣದಂಡನೆ ಉದ್ದೇಶ

ನವದೆಹಲಿ: ಕೋಲ್ಕತದ ಆರ್​ಜಿ ಕರ್ ವೈದ್ಯಕೀಯ ಕಾಲೇಜು-ಆಸ್ಪತ್ರೆಯಲ್ಲಿ 31 ವರ್ಷದ ಟ್ರೖೆನಿ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಮಧ್ಯೆ ಪಶ್ಚಿಮ ಬಂಗಾಳ ವಿಧಾನಸಭೆಯು ಅಪರಾಧ ಸಂಹಿತೆ, ಭಾರತೀಯ ನ್ಯಾಯ ಸಂಹಿತೆಯ ಕೆಲ ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಅಪರಾಜಿತ ಮಸೂದೆಗೆ (ಅತ್ಯಾಚಾರ ತಡೆ ಮಸೂದೆ) ಅನುಮೋದನೆ ನೀಡಿದೆ. ಈ ತಿದ್ದುಪಡಿಗಳು ಅತ್ಯಾಚಾರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಠಿಣ ಶಿಕ್ಷೆಯನ್ನು ಖಚಿತಪಡಿಸುತ್ತವೆ.

ಬಂಗಾಳ ಸರ್ಕಾರ ಮಂಡಿಸಿದ ಮಸೂದೆ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿದೆ. ಆದರೆ, ಅದು ಜಾರಿಗೆ ಬರುವ ಮೊದಲು ರಾಷ್ಟ್ರಪತಿ ದ್ರೌಪದಿ ಮುಮು ಒಪ್ಪಿಗೆಯ ಅಗತ್ಯವಿದೆ. ರಾಜ್ಯ ವಿಧಾನಸಭೆ ಅಂಗೀಕರಿಸಿದ ಕಾನೂನು ಸಂಸತ್ತು ಅಂಗೀಕರಿಸಿದ ಕಾನೂನಿಗೆ ವ್ಯತಿರಿಕ್ತವಾಗಿದ್ದರೂ, ಅದನ್ನು ಕಾರ್ಯಗತಗೊಳಿಸಬಹುದು. ಆದರೆ, ಅದಕ್ಕೆ ರಾಷ್ಟ್ರಪತಿ ಒಪ್ಪಿಗೆ ಅನಿವಾರ್ಯ. ಈ ಮಸೂದೆ ಕಾಯ್ದೆ ಆಗಬೇಕೇ ಬೇಡವೇ ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ತೃಣಮೂಲ ಪ್ರಮುಖ ಪ್ರತಿಸ್ಪರ್ಧಿ ಆಗಿರುವುದರಿಂದ ಅಪರಾಜಿತ ಮಸೂದೆಗೆ ಹಸಿರು ನಿಶಾನೆ ಸಿಗುವ ಬಗ್ಗೆ ಅನುಮಾನಗಳಿವೆ.

ಈ ಹಿಂದೆ, ಆಂಧ್ರಪ್ರದೇಶ ವಿಧಾನಸಭೆ, ಮಹಾರಾಷ್ಟ್ರ ವಿಧಾನಸಭೆಗಳು ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಮರಣದಂಡನೆ ಕಡ್ಡಾಯಗೊಳಿಸುವ ಮಸೂದೆಗಳನ್ನು ಅಂಗೀಕರಿಸಿದ್ದವು. ಆದರೆ, ಅವ್ಯಾವುದಕ್ಕೂ ರಾಷ್ಟ್ರಪತಿಗಳ ಸಮ್ಮತಿ ಇನ್ನೂ ಸಿಕ್ಕಿಲ್ಲ.

ಪ್ರಧಾನಿ ರಾಜೀನಾಮೆಗೆ ಸಿಎಂ ಮಮತಾ ಆಗ್ರಹ

ಮಹಿಳೆಯರ ರಕ್ಷಣೆಗೆ ಪರಿಣಾಮಕಾರಿ ಕಾನೂನು ಜಾರಿಗೆ ತರಲು ಸಾಧ್ಯವಾಗದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಈ ದಿಕ್ಕಿನಲ್ಲಿ ವಿಫಲಗೊಂಡಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ. ಅಪರಾಜಿತ ಮಹಿಳೆ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳದ ಅಪರಾಧ ಕಾನೂನುಗಳು ಮತ್ತು ತಿದ್ದುಪಡಿ) ಮಸೂದೆ 2024 ಮಂಡಿಸಿದ ನಂತರ ವಿಧಾನಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ, ಪ್ರಸ್ತಾವಿತ ಮಸೂದೆ ತ್ವರಿತ ತನಿಖೆ, ತ್ವರಿತ ನ್ಯಾಯ ವಿತರಣೆ ಮತ್ತು ತಪ್ಪಿತಸ್ಥರಿಗೆ ಹೆಚ್ಚಿನ ಶಿಕ್ಷೆ ನೀಡುವ ಗುರಿ ಹೊಂದಿದೆ ಎಂದರು. ಕೋಲ್ಕತ ವೈದ್ಯೆಯ ಅತ್ಯಾಚಾರ-ಕೊಲೆ ಘಟನೆಗೆ ಸಂಬಂಧಿಸಿ ಸಿಎಂ ರಾಜೀನಾಮೆಗೆ ಬಿಜೆಪಿ ಶಾಸಕರು ಘೊಷಣೆ ಕೂಗಿದಾಗ ಸದನ ಭಾರಿ ಕೋಲಾಹಲಕ್ಕೆ ಸಾಕ್ಷಿಯಾಯಿತು.

ಏನಿದು ಅಪರಾಜಿತ ಮಸೂದೆ?: ದೇಶಾದ್ಯಂತ ಹೊಸದಾಗಿ ಜಾರಿ ಮಾಡಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿನ ಹಲವು ವಿಭಾಗಗಳಿಗೆ ತಿದ್ದುಪಡಿಯನ್ನು ಅಪರಾಜಿತ ಮಸೂದೆಯಲ್ಲಿ ಅಳವಡಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64 ಪ್ರಕಾರ ಅತ್ಯಾಚಾರದ ಅಪರಾಧಿಗೆ 10 ವರ್ಷಗಳಿಗಿಂತ ಕಡಿಮೆ ಅಲ್ಲದ ಕಠಿಣ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಇದು ಜೀವಾವಧಿಯವರೆಗೆ ವಿಸ್ತರಿಸಬಹುದು ಎಂದೂ ಹೇಳುತ್ತದೆ. ಬಂಗಾಳದ ಹೊಸ ತಿದ್ದುಪಡಿ ಮಸೂದೆ ಜೈಲು ಶಿಕ್ಷೆಯನ್ನು ಜೀವಿತಾವಧಿಗೆ ಅಥವಾ ದಂಡ ಅಥವಾ ಮರಣದಂಡನೆಗೂ ವಿಸ್ತರಿಸುತ್ತದೆ. ಈ ದಂಡದ ಹಣ ಸಂತ್ರಸ್ತೆಯ ವೈದ್ಯಕೀಯ ವೆಚ್ಚ ಮತ್ತು ಪುನರುಜ್ಜೀವನಕ್ಕೆ ಬಳಸಿಕೊಳ್ಳಬಹುದು. ಒಂದುವೇಳೆ ಸಂತ್ರಸ್ತೆ ಸಾವಿಗೀಡಾದರೆ ಅಥವಾ ಮೆದುಳಿನ ದೈಹಿಕ ನಿಷ್ಕ್ರಿಯತೆ ಒಳಗಾದರೆ ಬಂಗಾಳದ ಕಾಯ್ದೆಯು ಅತ್ಯಾಚಾರಿಗೆ ಭಾರಿ ದಂಡ ವಿಧಿಸುತ್ತದೆ. ಕೇಂದ್ರದ ಶಾಸನ 20 ವರ್ಷಗಳ ಜೈಲು ಶಿಕ್ಷೆ, ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ವಿಧಿಸುತ್ತದೆ. ಆದರೆ, ಬಂಗಾಳದ ಕಾನೂನು ನೇರ ಮರಣದಂಡನೆ ಎಂದು ಸ್ಪಷ್ಟವಾಗಿ ತಿಳಿಸುತ್ತದೆ. ಹೀಗೆ, ಹಲವು ಬದಲಾವಣೆಗಳನ್ನು ಬಂಗಾಳದ ಹೊಸ ಮಂಡಿತ ಮಸೂದೆಯಲ್ಲಿ ಮಾಡಲಾಗಿದೆ.

ಸುಪ್ರೀಂ ಮೊರೆಹೋದ ಕೇಂದ್ರ

ನವದೆಹಲಿ: ಆರ್​ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭದ್ರತೆ ನೀಡುವ ಹೊಣೆ ಹೊತ್ತಿರುವ ಸಿಐಎಸ್​ಎಫ್​ಗೆ ಕೋಲ್ಕತ ಸರ್ಕಾರ ಅಸಹಕಾರ ತೋರುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಟಿಎಂಸಿ ಸರ್ಕಾರದ ಅಸಹಕಾರವನ್ನು ವ್ಯವಸ್ಥಿತ ಅಸ್ವಸ್ಥತೆಯ ಲಕ್ಷಣ ಎಂದು ಪರಿಗಣಿಸಿ ಸಿಐಎಸ್​ಎಫ್​ಗೆ ಪೂರ್ಣ ಸಹಕಾರ ನೀಡುವಂತೆ ಪಶ್ಚಿಮ ಬಂಗಾಳದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಕೋರಿದೆ. ಪಾಲಿಸದಿದ್ದಲ್ಲಿ ಬಂಗಾಳ ಸರ್ಕಾರದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಜರುಗಿಸಬೇಕು ಎಂದು ಸಚಿವಾಲಯ ಮನವಿ ಮಾಡಿಕೊಂಡಿದೆ. ಟ್ರೖೆನಿ ವೈದ್ಯೆ ಅತ್ಯಾಚಾರ-ಕೊಲೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದ್ದ ರಿಂದ ಆ.20ರಂದು ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಭದ್ರತೆ ನೀಡಲು ಸುಪ್ರೀಂಕೋರ್ಟ್ ನಿರ್ದೇಶಿ ಸಿತ್ತು. ಅದಾಗ್ಯೂ ಕೋಲ್ಕತ ಪೊಲೀಸರು ಭದ್ರತೆ ನೀಡದ್ದರಿಂದ ಸಿಐಎಸ್​ಎಫ್ ಪಡೆ ನಿಯೋಜಿಸಲು ಸೂಚಿಸಿತ್ತು.

ಮಾಜಿ ಪ್ರಾಂಶುಪಾಲರ ಬಂಧನ

ಕೋಲ್ಕತ: ಆರ್​ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಮತ್ತು ಇತರ ಮೂವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ಬಂಧಿಸಿದೆ. ಇಲ್ಲಿನ ಅತ್ಯಾಚಾರ-ಕೊಲೆ ಪ್ರಕರಣದ ಬೆನ್ನಿಗೇ ಬೆಳಕಿಗೆ ಬಂದಿದ್ದ ಹಣಕಾಸು ಅಕ್ರಮದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ. ಘೋಷ್ ಅವರ ಭದ್ರತಾ ಸಿಬ್ಬಂದಿ ಮತ್ತು ಆಸ್ಪತ್ರೆಗೆ ವಸ್ತುಗಳನ್ನು ಪೂರೈಸುತ್ತಿದ್ದ ಇಬ್ಬರು ವಿತರಕರು ಬಂಧಿತರಲ್ಲಿದ್ದಾರೆ.