ನ್ಯೂಸ್

2 ಗ್ಯಾರಂಟಿ ಬೇಷರತ್ ಜಾರಿ; ಎಲ್ರಿಗೂ 200 ಯುನಿಟ್ ಕರೆಂಟ್, ಸ್ತ್ರೀಯರಿಗೆ ಉಚಿತ ಬಸ್ ಟಿಕೆಟ್

Webdesk - Ravikanth

ಅನ್ನಭಾಗ್ಯ ಅಕ್ಕಿ, ಗೃಹ ಲಕ್ಷ್ಮಿ ಯೋಜನೆಗೆ ಮಾತ್ರ ಬಿಪಿಎಲ್ ನಿಬಂಧನೆ

| ರುದ್ರಣ್ಣ ಹರ್ತಿಕೋಟೆ, ಬೆಂಗಳೂರು

ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಐದು ಭರವಸೆಗಳ ಜಾರಿಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು, ಹೆಚ್ಚಿನ ಷರತ್ತುಗಳಿಲ್ಲದೇ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.

ಸಿಎಂ ಸಿದ್ದರಾಮಯ್ಯ ಹಣಕಾಸು ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳ ಜತೆ ಸತತವಾಗಿ ನಡೆಸಿರುವ ಸಭೆಗಳಲ್ಲಿ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಬೇಕಾಗಿರುವ ಹಣಕಾಸಿನ ಹೊಂದಾಣಿಕೆಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ.

ಬುಧವಾರ ಸಚಿವರು ಹಾಗೂ ಅಧಿಕಾರಿಗಳ ಜತೆ ಸಿದ್ದರಾಮಯ್ಯ ಸಭೆ ನಡೆಸುವರು, ಆ ಸಭೆಯಲ್ಲಿ ಸರ್ಕಾರ ಯಾವ ರೀತಿ ಗ್ಯಾರಂಟಿಗಳನ್ನು ಜಾರಿಗೊಳಿಸಲಿದೆ ಎಂಬುದನ್ನು ವಿವರಿಸುವರು. ಅಧಿಕಾರಿಗಳಿಗೆ ಕೆಲವು ಜವಾಬ್ದಾರಿಗಳನ್ನು ನಿಗದಿ ಮಾಡುವರು. ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿಗಳಿಗೆ ಒಪ್ಪಿಗೆ ನೀಡುವ ಮೂಲಕ ಅನುಷ್ಠಾನ ಮಾಡಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

ಷರತ್ತುಗಳೇನು?: ಐದು ಭರವಸೆಗಳ ಜಾರಿಗೆ ಹೆಚ್ಚಿನ ಷರತ್ತುಗಳು ಇರುವುದಿಲ್ಲ. ಸಣ್ಣಪುಟ್ಟ ನಿಬಂಧನೆಗಳನ್ನು ಮಾತ್ರ ಹಾಕಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ. ಸಾರಿಗೆ ಬಸ್​ಗಳಲ್ಲಿ ನಿತ್ಯ ಸಂಚರಿಸುವವರ ಪೈಕಿ ಶೇ.50 ರಷ್ಟು ಮಹಿಳೆಯರಿರುತ್ತಾರೆ ಎಂದು ಸಾರಿಗೆ ನಿಗಮಗಳು ಮಾಹಿತಿ ನೀಡಿದ್ದವು. ಆದರೆ, ಮರುಪರಿಶೀಲನೆ ಮಾಡಿದಾಗ ಅಂದಾಜು 50 ಸಾವಿರ ಮಹಿಳೆಯರು ದಿನಂಪ್ರತಿ ಸಂಚರಿಸಬಹುದೆಂದು ಹೇಳಲಾಗುತ್ತಿದೆ. ಉಚಿತ ವಿದ್ಯುತ್ ವಿಚಾರದಲ್ಲಿಯೂ ಹೆಚ್ಚಿನ ಗೊಂದಲಗಳಿಗೆ ಅವಕಾಶವಿಲ್ಲವೆಂದು ಹೇಳಲಾಗುತ್ತಿದೆ.

ಸಂಪನ್ಮೂಲ ಎಲ್ಲಿಂದ?

ಯೋಜನೆಗಳ ಜಾರಿಗೆ ಸಂಪನ್ಮೂಲ ಕ್ರೋಡೀಕರಣ ಎಲ್ಲಿಂದ ಎಂಬುದು ಅಂತಿಮವಾಗಿದೆ. ಇಂಧನ ಇಲಾಖೆಯಲ್ಲಿಯೇ ಅಂದಾಜು 5 ಸಾವಿರ ಕೋಟಿ ರೂ.ಗಳು ಲಭ್ಯವಾಗುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ಹಿಂದಿನ ಸರ್ಕಾರದಲ್ಲಿ ಬಳಕೆಯಾಗದೆ ಉಳಿದಿರುವ 10 ಸಾವಿರ ಕೋಟಿ ರೂ.ಗಳಷ್ಟು ಹಣ ಲಭ್ಯವಿದೆ. ಬಜೆಟ್​ನಲ್ಲಿ ಹೇಳಿರುವುದರಲ್ಲಿಯೇ ಸುಮಾರು 9 ಸಾವಿರ ಕೋಟಿ ರೂ.ಗಳ ಸಾಲ ಮಾಡಲು ಅವಕಾಶ ಇದೆ. ಈ ಯೋಜನೆಗಳ ಲಾಭ ಪರಿಶಿಷ್ಟರಿಗೆ ನೀಡಲು ಎಸ್​ಸಿಪಿ-ಟಿಎಸ್​ಪಿಯಲ್ಲಿ 10 ಸಾವಿರ ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ರೀತಿಯಲ್ಲಿ 35 ಸಾವಿರ ಕೋಟಿ ರೂ.ಗಳ ತನಕ ಸುಲಭವಾಗಿ ಹೊಂದಾಣಿಕೆಯಾಗುತ್ತದೆ. ಉಳಿದ ಮೊತ್ತವನ್ನು ಬೇರೆಬೇರೆ ಮೂಲಗಳಿಂದ ಕ್ರೋಡೀಕರಿಸಬಹುದು. ಅದಕ್ಕೆ ಸಾಕಷ್ಟು ಸಮಯ ಇರುತ್ತದೆ ಎಂದು ಮೂಲಗಳು ಹೇಳುತ್ತವೆ.

ಸೋರಿಕೆ ತಡೆ: ದೆಹಲಿ, ತಮಿಳುನಾಡುಗಳಲ್ಲಿ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ, ಆ ರಾಜ್ಯಗಳ ಆರ್ಥಿಕ ಪರಿಸ್ಥಿತಿಯೇನು ಹದಗೆಟ್ಟಿಲ್ಲ. ಆದ್ದರಿಂದ ರಾಜ್ಯದಲ್ಲಿಯೂ ತೆರಿಗೆ ಹೆಚ್ಚಳದ ಯಾವುದೇ ಪ್ರಸ್ತಾಪ ಇಲ್ಲದಂತೆ ಜಾರಿಗೆ ತರಲಾಗುತ್ತದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ. ತೆರಿಗೆ ಸಂಗ್ರಹಣೆಯಲ್ಲಿ ಸೋರಿಕೆ ತಪ್ಪಿಸಿದರೆ ಹೆಚ್ಚುವರಿಯಾಗಿ 15 ರಿಂದ 20 ಸಾವಿರ ಕೋಟಿ ರೂ.ಗಳ ತನಕ ಸಂಗ್ರಹಣೆಗೆ ಅವಕಾಶ ಇದೆ. ಆ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ಮಾಡುವಂತೆ ಸಿದ್ದರಾಮಯ್ಯ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೃಹತ್ ಸಮಾವೇಶ: ಸಚಿವ ಸಂಪುಟದಲ್ಲಿ ಭರವಸೆಗಳಿಗೆ ಒಪ್ಪಿಗೆ ನೀಡುವ ಮೂಲಕ ಜಾರಿಗೆ ಕೊಡಲಾಗುತ್ತದೆ. ಆದರೆ, ದೊಡ್ಡ ಸಮಾವೇಶವೊಂದರ ಮೂಲಕ ಇಡೀ ದೇಶಕ್ಕೆ ಗ್ಯಾರಂಟಿಗಳ ಬಗ್ಗೆ ಸಂದೇಶವೊಂದನ್ನು ರವಾನಿಸಲು ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆ ನಡೆದಿದೆ. ಮುಂದೆ ಚುನಾವಣೆ ನಡೆಯುವ ಬೇರೆ ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್ ಈ ಭರವಸೆಗಳನ್ನು ನೀಡಿರುವುದರಿಂದ ಅಲ್ಲಿನ ಜನರಲ್ಲಿ ಪಕ್ಷದ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸುವುದರ ಜತೆಗೆ ಲೋಕಸಭಾ ಚುನಾವಣೆಗೂ ಸಜ್ಜಾಗುವುದು ಸಮಾವೇಶದ ಹಿಂದಿನ ಉದ್ದೇಶವಾಗಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವಿವಿಧ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ನುಡಿದಂತೆ ನಡೆದಿದ್ದೇವೆ ಎಂಬ ಸಂದೇಶ ನೀಡಲಾಗುತ್ತದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸೌಲಭ್ಯಗಳಿಗೆ ನಿಯಮಗಳೇನು?

  • ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಹಾಗೂ ಕುಟುಂಬದ ಮಹಿಳೆಗೆ ಮಾಸಿಕ ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಮಾತ್ರ ಬಿಪಿಎಲ್ ಕಾರ್ಡ್ ನಿಗದಿ ಮಾಡಲಾಗುತ್ತದೆ.
  • ಸಾರಿಗೆ ಸಂಸ್ಥೆಯ ಕರ್ನಾಟಕ ಸಾರಿಗೆ ಬಸ್​ನಲ್ಲಿ ಎಲ್ಲ ಮಹಿಳೆಯರಿಗೂ ರಾಜ್ಯದಲ್ಲಿ ಓಡಾಟಕ್ಕೆ ಅವಕಾಶವಿರುತ್ತದೆ. ಆದರೆ, ಎಸಿ ಮತ್ತು ಸ್ಲೀಪರ್ ಬಸ್​ಗಳಿಗೆ ಇದು ಅನ್ವಯಿಸುವುದಿಲ್ಲ.
  • ಸಾರಿಗೆ ಬಸ್​ನಲ್ಲಿ ಓಡಾಡುವ ಮಹಿಳೆಯರಿಗೆ ಸ್ಮಾರ್ಟ್​ಕಾರ್ಡ್ ಅಥವಾ ರೂಪೇ ಕಾರ್ಡ್ ನೀಡುವ ಬಗ್ಗೆಯೂ ಪರಿಶೀಲನೆ. ಸಂಪುಟದಲ್ಲಿ ನಿರ್ಧಾರ.
  • ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತ ಇರುತ್ತದೆ. ಇಲ್ಲಿ ಎಪಿಎಲ್, ಬಿಪಿಎಲ್ ಇರುವುದಿಲ್ಲ. ಆದರೆ, ಬಳಕೆ 200 ಯೂನಿಟ್​ಗಿಂತ ಹೆಚ್ಚಾದರೆ ದೆಹಲಿ ಮತ್ತು ತಮಿಳುನಾಡು ಮಾದರಿಯಲ್ಲಿ ಬಳಕೆಯ ಎಲ್ಲ ಪೂರ್ಣ ಯೂನಿಟ್​ಗಳಿಗೂ ಬಿಲ್ ಮಾಡಬೇಕೆ ಅಥವಾ ಬೇಡವೇ ಎಂಬುದು ನಿರ್ಧಾರವಾಗಬೇಕಿದೆ.
  • ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಈ ವರ್ಷದ ಫಲಿತಾಂಶ ಬಂದ ನಂತರ ಮೂರು ತಿಂಗಳು ಕಾದು, ಕೆಲಸ ಸಿಗದವರಿಗೆ ಭತ್ಯೆ ನೀಡಲಾಗುತ್ತದೆ. ಒಂದು ವೇಳೆ ಕ್ಯಾಂಪಸ್ ಸೆಲೆಕ್ಷನ್ ಆಗಿದ್ದರೆ ನೀಡುವುದಿಲ್ಲ.

ಎಷ್ಟು ಹಣ ಬೇಕಾಗುತ್ತದೆ?

  • 5 ಯೋಜನೆಗಳ ಜಾರಿಗೆ 50 ಸಾವಿರ ಕೋಟಿ ಅಗತ್ಯ ಎಂದು ಅಂದಾಜಿಸಲಾಗಿತ್ತು. ಆದರೆ, ಮರುಪರಿಶೀಲನೆ ಮಾಡಿದಾಗ 48 ಸಾವಿರ ಕೋಟಿ ರೂ. ಬೇಕಾಗಬಹುದೆಂದು ಹೇಳಲಾಗುತ್ತಿದೆ.
  • ಗೃಹ ಜ್ಯೋತಿಯನ್ನು 2.14 ಕೋಟಿ ಕುಟುಂಬಗಳಿಗೆ ಜಾರಿ ಮಾಡು ವುದರಿಂದ ಅಂದಾಜು -ಠಿ;10 ಸಾವಿರ ಕೋಟಿ ವೆಚ್ಚ ಆಗುತ್ತದೆ.
  • ಗೃಹ ಲಕ್ಷ್ಮಿ ಯೋಜನೆಯನ್ನು 1.14 ಕೋಟಿ ಮಹಿಳೆಯರಿಗೆ ಜಾರಿ ಮಾಡುವುದರಿಂದ ಅಂದಾಜು 24 ಸಾವಿರ ಕೋಟಿ ರೂ.ಗಳಷ್ಟು ಮೊತ್ತ ಆಗುತ್ತದೆ.
  • 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯ ಜಾರಿಗೆ 9,500 ಕೋಟಿ ರೂಪಾಯಿಗಳ ಅಗತ್ಯವಿದೆ.
  • ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ 3 ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂಬ ಅಂದಾಜಿದೆ.
  • ನಿರುದ್ಯೋಗ ಭತ್ಯೆ ನೀಡುವ ಯುವನಿಧಿಗೆ ಸುಮಾರು 2 ಸಾವಿರ ಕೋಟಿ ರೂ. ಬೇಕೆಂಬ ಲೆಕ್ಕಾಚಾರ.