ನ್ಯೂಸ್

ಅನಧಿಕೃತ ಗಣಿ ಪತ್ತೆಗೆ ಡ್ರೋನ್! ಉನ್ನತ ಮಟ್ಟದ ಸಮಿತಿ ರಚನೆ

Webdesk - Manjunatha B

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ರಾಜ್ಯದಲ್ಲಿನ ಕಟ್ಟಡ ಕಲ್ಲು ಸೇರಿದಂತೆ ಎಲ್ಲಾ ಉಪ ಖನಿಜಗಳ ಅನಧಿಕೃತ ಗಣಿಗಾರಿಕೆ ನಿಯಂತ್ರಿಸುವ ಜತೆಯಲ್ಲೇ ಸಂಪೂರ್ಣ ಖನಿಜ ಬಳಕೆ ಪ್ರಮಾಣವನ್ನು ಡ್ರೋನ್ ಸರ್ವೆ ಮೂಲಕ ವೈಜ್ಞಾನಿಕವಾಗಿ ಅಂದಾಜಿಸುವ ವ್ಯವಸ್ಥೆ ಅನುಷ್ಠಾನಕ್ಕೆ ರಾಜ್ಯ ಸಜ್ಜಾಗಿದೆ. ಈ ಬಗ್ಗೆ ಬಜೆಟ್​ನಲ್ಲಿ ಹೊರಡಿಸಲಾಗಿದ್ದ ಘೋಷಣೆ ಜಾರಿಗೆ ಸರ್ಕಾರ ಹೆಜ್ಜೆ ಇರಿಸಿದೆ. ಮುಖ್ಯವಾಗಿ ಸರ್ಕಾರದ ಬೊಕ್ಕಸ ಭರ್ತಿ ಮಾಡಲು ರಾಜಸ್ವ ಸಂಗ್ರಹಣೆ ಹೆಚ್ಚಿಸುವ ಇರಾದೆ ಜತೆಗೆ ಉದ್ಯಮಸ್ನೇಹಿ, ಸರಳ ಮತ್ತು ಉತ್ತರದಾಯಿತ್ವ ಹೊಂದಿರುವ ವ್ಯವಸ್ಥೆ ಕಲ್ಪಿಸುವುದಾಗಿ ಸರ್ಕಾರ ಹೇಳಿಕೊಂಡಿತ್ತು.

ಇದೀಗ ಉನ್ನತಾಧಿಕಾರಿಗಳ ಸಮಿತಿ ರಚಿಸಿ, ಗಣಿ ಇಲಾಖೆಗೆ 2024-25ನೇ ಸಾಲಿಗೆ ನಿಗದಿಪಡಿಸಿರುವ ತೆರಿಗೆಯೇತರ ರಾಜಸ್ವ ಸಂಗ್ರಹಣೆ ಗುರಿಯನ್ನು ಸಾಧಿಸಲು ಆದ್ಯತೆ ಮೇರೆಗೆ ಕ್ರಮವಹಿಸುವಂತೆ ತಿಳಿಸಲಾಗಿದೆ.

ಹೇಗಿರಲಿದೆ ಸರ್ವೆ?: ಗಣಿ ಗುತ್ತಿಗೆ ಪ್ರದೇಶದಿಂದ ಉಪ ಖನಿಜ ತೆಗೆದಿರುವ ಪ್ರಮಾಣವನ್ನು ವ್ಯವಸ್ಥಿತ, ವೈಜ್ಞಾನಿಕವಾಗಿ ನಿರ್ಧರಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ಉಪ ಖನಿಜಗಳ ಗಣಿ ಗುತ್ತಿಗೆ ಪ್ರದೇಶಗಳನ್ನು (ಸರ್ಕಾರಿ ಜಮೀನು ಮತ್ತು ಪಟ್ಟಾ/ ಖಾಸಗಿ ಜಮೀನು) ಪ್ರತಿ ವರ್ಷ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ (ಕೆಎಸ್​ಆರ್​ಎಸ್​ಎಸಿ)ದವರಿಂದ ಅಥವಾ ನೋಂದಾಯಿತ ಏಜೆನ್ಸಿಯಿಂದ ಡಿಜಿಪಿಎಸ್ (ಡಿಫರೆನ್ಷಿಯಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಮತ್ತು ಡ್ರೋನ್ ಅಥವಾ ಟೋಟಲ್ ಸ್ಟೇಷನ್ ಸರ್ವೆ ನಡೆಸಿ, ಗುತ್ತಿಗೆ ಪ್ರದೇಶದ ಸವಕಳಿ ಅಥವಾ ಕಡಿಮೆಯಾದ ಪ್ರಮಾಣ ದಾಖಲಿಸಿದ ವರದಿಯನ್ನು ಜಿಲ್ಲೆಗಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರು, ಹಿರಿಯ ಭೂ ವಿಜ್ಞಾನಿಗಳು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ.

ಡಿಜಿಪಿಎಸ್ ಮತ್ತು ಡ್ರೋನ್ ಸರ್ವೆ ದತ್ತಾಂಶ ಮತ್ತು ಅವಶ್ಯಕ ತಂತ್ರಾಂಶವನ್ನು ಸಂಗ್ರಹಣೆ ಮತ್ತು ನಿರ್ವಹಣೆ ಮಾಡಲು ಮಾನಿಟರಿಂಗ್ ಸೆಲ್ ಸ್ಥಾಪಿಸುವುದು. ಬಳಿಕ ಆ ಕೋಶದಲ್ಲಿ ಜಿಲ್ಲಾವಾರು ಅವಲೋಕನ ನಡೆಸಿ ವರದಿ ಸಿದ್ಧಪಡಿಸಲಾಗುತ್ತದೆ.

ಉನ್ನತ ಸಮಿತಿ ಸನ್ನದ್ಧ: ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರಿಗಳ ಸಮಿತಿ ರಚಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು, ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕರು, ಆರ್ಥಿಕ ಇಲಾಖೆ ಜಂಟಿ ಕಾರ್ಯದರ್ಶಿ, ಇ- ಆಡಳಿತ ಇಲಾಖೆ ಜಂಟಿ ಕಾರ್ಯದರ್ಶಿ ಸದಸ್ಯರಾಗಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ತಂತ್ರಾಂಶ ಅಭಿವೃದ್ಧಿ: ಮುಖ್ಯ ಖನಿಜ ಗುತ್ತಿಗೆ ಪ್ರದೇಶಗಳನ್ನು ಒತ್ತುವರಿ ಮಾಡಿ ನಡೆಸುವ ಅನಧಿಕೃತ ಗಣಿಗಾರಿಕೆಯನ್ನು ಗುರುತಿಸಲು ಕೇಂದ್ರ ಸರ್ಕಾರದ ಐಬಿಎಂ (ಇಂಡಿಯನ್ ಬ್ಯೂರೋ ಆಫ್ ಮೈನ್ಸ್) ಅಭಿವೃದ್ಧಿಪಡಿಸಿರುವ ತಂತ್ರಾಂಶದಂತೆ ಉಪಖನಿಜ ಗಣಿ ಗುತ್ತಿಗೆ ಪ್ರದೇಶಗಳಲ್ಲಿಯೂ ಅಕ್ರಮ ಕ್ವಾರಿ ಸರ್ವಲೆನ್ಸ್ ಸಿಸ್ಟಂ ಅಳವಡಿಸಿಕೊಳ್ಳಲು ಟ್ರಿಗರ್ ಅಲರ್ಟ್ ತಂತ್ರಾಂಶ ಅಭಿವೃದ್ಧಿಪಡಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಕೆಎಸ್​ಆರ್​ಎಸ್​ಎಸಿ ಸಂಸ್ಥೆಗೆ ಒದಗಿಸಲು ತಿಳಿಸಲಾಗಿದೆ. ಅಲ್ಲದೆ 2024-25ನೇ ಸಾಲಿಗೆ 2.21 ಕೋಟಿ ರೂ. ಅನುದಾನವನ್ನು ಸರ್ವೆ ಕಾರ್ಯದ ಸೇವೆ ಬಳಸಲು ಅವಕಾಶ ಮಾಡಲಾಗಿದೆ.

ಹೊಣೆಗಾರಿಕೆ ಏನು?: ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರದಿಂದ ಅಥವಾ ನೋಂದಾಯಿತ ಏಜೆನ್ಸಿಯಿಂದ ಡಿಜಿಪಿಎಸ್ ಮತ್ತು ಡ್ರೋನ್ ಅಥವಾ ಟೋಟಲ್ ಸ್ಟೇಷನ್ ಸರ್ವೆ ನಡೆಸಿ, ಗುತ್ತಿಗೆ ಪ್ರದೇಶದ ಕಡಿತ ಪ್ರಮಾಣ ದಾಖಲಿಸಿದ ವರದಿಯನ್ನು ಸಂಬಂಧಪಟ್ಟ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನಿಗೆ ಸಲ್ಲಿಸಿರುವುದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಬಳಿಕ ವಾರ್ಷಿಕ ಲೆಕ್ಕ ತಪಾಸಣಾ ವರದಿ ಸಲ್ಲಿಸುವುದು, ವಿಶ್ಲೇಷಣಾ ವರದಿಯ ಮೇಲೆ ನಿರ್ದೇಶಕರು ಪರಿಶೀಲನೆ ನಡೆಸಿ ಅಗತ್ಯವಿದ್ದಲ್ಲಿ ನಿಯಮಾನುಸಾರ ಕ್ರಮವಹಿಸಲು ಅವಕಾಶ ಇರಲಿದೆ.

ಏನೆಲ್ಲ ಸಿದ್ಧತೆ ಆಗಿವೆ?: ಡಿಜಿಪಿಎಸ್ ಮತ್ತು ಡ್ರೋನ್ ಸರ್ವೆ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲು ಎಂಪ್ಯಾಲನ್ ಏಜೆನ್ಸಿಗಳನ್ನು ನೋಂದಾಯಿಸಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಹಾಗೆಯೇ, ಮುಖ್ಯ ಖನಿಜ ಗುತ್ತಿಗೆ ಪ್ರದೇಶಗಳಲ್ಲಿ ಈಗಾಗಲೇ ಅನಧಿಕೃತ ಗಣಿಗಾರಿಕೆ ಬಗ್ಗೆ ಟ್ರಿಗರ್ ಅಲರ್ಟ್ (ತಕ್ಷಣ ಮಾಹಿತಿ ರವಾನಿಸುವ ವ್ಯವಸ್ಥೆ) ಅಳವಡಿಸಿಕೊಂಡಿರುವಂತೆ ಉಪ ಖನಿಜ ಗಣಿ ಗುತ್ತಿಗೆ ಪ್ರದೇಶಗಳಲ್ಲಿಯೂ ಅಕ್ರಮ ಕ್ವಾರಿ ಸರ್ವಲೆನ್ಸ್ ವ್ಯವಸ್ಥೆ ಅಳವಡಿಸಿಕೊಳ್ಳುವುದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಕಾರ್ಯನಿರ್ವಹಣೆ ಹೇಗೆ?

  • ಉಪಗ್ರಹ-ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆ
  • ಮಾನವ ಹಸ್ತಕ್ಷೇಪಕ್ಕೆ ಅವಕಾಶ ಕಡಿಮೆ
  • ತಂತ್ರಾಂಶ ಆಧಾರಿತ ವ್ಯವಸ್ಥೆ ಅಡಿ ಸರ್ವೆ
  • ಐಡಿ ಪಾಸ್​ವರ್ಡ್ ಮೂಲಕ ತಂತ್ರಾಂಶ ನಿರ್ವಹಣೆ
  • 500 ಮೀ.ವರೆಗಿನ ಭೂಮಿಯಲ್ಲಿ ಉಪಗ್ರಹ ಸಮೀಕ್ಷೆ
  • ಭೂ ಬಳಕೆಯ ಬದಲಾವಣೆ ಸೆರೆಹಿಡಿಯುವ ಕಾರ್ಯ
  • ಉನ್ನತ ಅಧಿಕಾರಿಗಳಿಗೆ ಸರ್ವೆ ನಡೆಸುವ ಸೂಚನೆ