ನ್ಯೂಸ್

ಕರೊನಾ ದೂರವಾದ್ರು ಕೆಲವರು ಈಗಲೂ ಮಾಸ್ಕ್​ ಧರಿಸುತ್ತಿರುವುದಕ್ಕೆ ಇದೇ ಕಾರಣವಂತೆ! ಅಧ್ಯಯನದಲ್ಲಿ ಬಹಿರಂಗ

ನವದೆಹಲಿ: ಇಡೀ ಜಗತ್ತನ್ನು ಕಾಡಿದ ಮಹಾಮಾರಿ ಕರೊನಾ ವೈರಸ್​ ಸಂಪೂರ್ಣವಾಗಿ ನಿವಾರಣೆಯಾಗಿಲ್ಲದಿದ್ದರೂ ಅದರ ಪ್ರಭಾವ ಮಾತ್ರ ಕಡಿಮೆ ಇದೆ. ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ಮಾಸ್ಕ್​ ಎಲ್ಲರ ರಕ್ಷಾ ಕವಚವಾಗಿತ್ತು. ಎಲ್ಲಿಗೆ ಹೋಗಬೇಕಾದರೂ ಮಾಸ್ಕ್​ ಪ್ರಮುಖವಾಗಿ ಬೇಕಾಗಿತ್ತು. ಮಾಸ್ಕ್​ ಇಲ್ಲದೇ ಯಾರನ್ನು ಎಲ್ಲಿಗೂ ಪ್ರವೇಶ ನೀಡುತ್ತಿರಲಿಲ್ಲ. ಆರಂಭದಲ್ಲಿ ಒಂದು ರೀತಿಯಲ್ಲಿ ಕಿರಿಕಿರಿ ಆದರೂ ಜನ ಮಾಸ್ಕ್​ಗೆ ಒಗ್ಗಿಬಿಟ್ಟಿದ್ದರು. ಇದೀಗ ಕರೊನಾ ದೂರವಾಗಿರುವ ಹಿನ್ನೆಲೆಯಲ್ಲಿ ಮಾಸ್ಕ್​ಗೆ ಮುಕ್ತಿ ಸಿಕ್ಕಿದೆ. ಆದರೂ ಅಲ್ಲೊಬ್ಬರು, ಇಲ್ಲೊಬ್ಬರು ಮಾಸ್ಕ್​ ಧರಿಸುತ್ತಲೇ ಇದ್ದಾರೆ. ಇದೀಗ ಮಾಸ್ಕ್​ ಕುರಿತು ನಡೆದ ಅಧ್ಯಯನದ ಅಚ್ಚರಿಯ ಫಲಿತಾಂಶ ಬಹಿರಂಗವಾಗಿದೆ.

ತಮ್ಮನ್ನು ತಾವು ಆಕರ್ಷಣೀಯವಲ್ಲ ಎಂದು ಭಾವಿಸುವ ಹಾಗೂ ನೋಡಲು ನಾನು ಚೆನ್ನಾಗಿಲ್ಲ ಅಂತಾ ಅಂದುಕೊಳ್ಳುವ, ಸೌಂದರ್ಯದಲ್ಲಿ ಕೀಳರಿಮೆ ಹೊಂದಿರುವ ಜನರು ಕೋವಿಡ್​ ನಂತರವು ಮಾಸ್ಕ್​ಗೆ ಅಂಟಿಕೊಂಡಿದ್ದು, ಮುಖವನ್ನು ಮಾಸ್ಕ್​ನಿಂದ ಮರೆಮಾಚುವುದನ್ನು ಮುಂದುವರಿಸಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಅಧ್ಯಯನದ ವೇಳೆ ಸಂಶೋಧಕರು ಮೂರು ಪ್ರಶ್ನಾವಳಿಗಳನ್ನು ತಯಾರು ಮಾಡಿ ಅದನ್ನು ವಿವಿಧ ಸನ್ನಿವೇಶಗಳಲ್ಲಿ ಸ್ವಯಂ-ಗ್ರಹಿಕೆಯ ಆಕರ್ಷಣೆ ಮತ್ತು ಮಾಸ್ಕ್​ ಧರಿಸುವ ಉದ್ದೇಶಗಳ ಬಗ್ಗೆ ಜನರನ್ನು ಕೇಳಿದ್ದಾರೆ. ಅಧ್ಯಯನದ ಅಂತಿಮ ತೀರ್ಮಾನದ ಪ್ರಕಾರ, ತಮ್ಮನ್ನು ತಾವು ಆಕರ್ಷಣೀಯ ಎಂದು ಭಾವಿಸುವ ಯುವ ಮತ್ತು ಮಧ್ಯ ವಯಸ್ಸಿನ ಅಮೆರಿಕನ್ನರು ಮುಖಕ್ಕೆ ಮಾಸ್ಕ್​ ಧರಿಸುವುದರಿಂದ ಇತರರ ಕಡೆಗೆ ಪ್ರಭಾವ ಬೀರಲು ಅಥವಾ ಇತರರನ್ನು ತಮ್ಮತ್ತ ಸೆಳೆಯಲು ಅಡ್ಡಿಯಾಗುತ್ತದೆ ಎಂದು ನಂಬಿದ್ದಾರೆ.

ಇನ್ನೊಂದೆಡೆ ತಮ್ಮನ್ನು ತಾವು ಆಕರ್ಷಣೀಯ ಎಂದು ಭಾವಿಸದ ಅಥವಾ ತಾವು ಚೆನ್ನಾಗಿಲ್ಲ ಅಂತಾ ನಂಬಿರುವವರು ಮಾಸ್ಕ್​ನ ಹಿಂದೆ ಬಿದ್ದಿದ್ದು, ಮುಖವನ್ನು ಮರೆಮಾಚುವುದು ವಾಸ್ತವವಾಗಿ ತಮ್ಮ ನೋಟವನ್ನು ಹೆಚ್ಚಿಸುತ್ತದೆ ಎಂದು ಭಾವಿಸಿದ್ದಾರೆ.

ಅಂದಹಾಗೆ ಅಮೆರಿಕದಲ್ಲಿ ಆರಂಭದಲ್ಲಿ ಆಂಟಿವೈರಲ್ ರಕ್ಷಣೆಗಾಗಿ ಮಾಸ್ಕ್​ ಅನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ, ಅಮೆರಿಕದಲ್ಲಿ ಮಾಸ್ಕ್​ ಅನ್ನು ಉಗ್ರ ಸಂಸ್ಕೃತಿಯ ಯುದ್ಧದ ಸಂಕೇತಗಳಲ್ಲಿ ಒಂದು ಎಂದು ಭಾವಿಸಲಾಗಿದೆ. ಅಲ್ಲದೆ, ದೊಡ್ಡ ಪ್ರಮಾಣದಲ್ಲಿ ಸೋಂಕನ್ನು ತಡೆಗಟ್ಟುವಲ್ಲಿ ಮಾಸ್ಕ್​ ಪರಿಣಾಮಕಾರಿ ಎಂದು ತೋರಿಸುವ ಯಾವೊಂದು ಉತ್ತಮ ಪುರಾವೆಗಳು ನಮ್ಮ ನಡುವೆ ಕಂಡುಬಂದಿಲ್ಲ. ಆದರೂ ಅದನ್ನು ಎಲ್ಲೆಡೆ ಕಡ್ಡಾಯ ಮಾಡಲಾಗಿತ್ತು.

ದಕ್ಷಿಣ ಕೊರಿಯಾದ ಸಿಯೋಲ್ ನ್ಯಾಷನಲ್ ಯೂನಿವರ್ಸಿಟಿಯ ಸಂಶೋಧಕರು ಸ್ವಯಂ-ಗ್ರಹಿಕೆಯ ಆಕರ್ಷಣೆಯು ಜನರ ಮಾಸ್ಕ್​ ಧರಿಸುವ ಉದ್ದೇಶಗಳಲ್ಲಿ ಪಾತ್ರವನ್ನು ವಹಿಸುತ್ತದೆಯೇ ಎಂದು ನೋಡಲು ಬಯಸಿದ್ದರು. ಹೀಗಾಗಿ ಬಿಸಿನೆಸ್​ಗಾಗಿ ಇರುವ ಅಮೆಜಾನ್ ಮೆಕ್ಯಾನಿಕಲ್ ಟರ್ಕ್ ಹೆಸರಿನ ಕ್ರೌಡ್‌ಸೋರ್ಸಿಂಗ್ ವೆಬ್‌ಸೈಟ್‌ನಿಂದ ನೇಮಕಗೊಂಡ ಅಮೆರಿಕನ್ನರ ಮೇಲೆ ಮೂರು ಪ್ರಯೋಗಗಳನ್ನು ನಡೆಸಿದರು. ಅಧ್ಯಯನದ ವರದಿಯನ್ನು ಫ್ರಾಂಟಿಯರ್ಸ್ ಇನ್ ಸೈಕಾಲಜಿ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. (ಏಜೆನ್ಸೀಸ್​)