ನ್ಯೂಸ್

ವಾರಾಣಸಿಯಲ್ಲಿ ಕಡಿಮೆಯಾಗದ ಮೋದಿ ಅಲೆ

Webdesk - Mallikarjun K R

| ರಾಘವ ಶರ್ಮ ನಿಡ್ಲೆ, ನವದೆಹಲಿ

ಲೋಕಸಭೆ ಚುನಾವಣೆಯ 7ನೇ ಮತ್ತು ಅಂತಿಮ ಹಂತಕ್ಕೆ ರಾಜಕೀಯ ಪಕ್ಷಗಳು ಸಜ್ಜಾಗಿದ್ದು, ಇಡೀ ದೇಶದ ಗಮನವೀಗ ಉತ್ತರ ಪ್ರದೇಶದ ವಾರಾಣಸಿ ಲೋಕಸಭೆ ಕಡೆ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಗೆಲುವಿನ ಹ್ಯಾಟ್ರಿಕ್ ಸಾಧನೆ ಮಾಡುವುದು ಬಹುತೇಕ ನಿಶ್ಚಿತ. ಪ್ರಧಾನಿ ಮೋದಿಗೆ ಸವಾಲೊಡ್ಡಲು ಕಾಂಗ್ರೆಸ್​ನಿಂದ ರಾಜ್ಯ ಘಟಕದ ಅಧ್ಯಕ್ಷ ಅಜಯ್ ರಾಯ್ ಮತ್ತು ಬಹುಜನ ಸಮಾಜ ಪಕ್ಷದಿಂದ ಅಥರ್ ಜಮಾಲ್ ಲರಿ ಕಣದಲ್ಲಿದ್ದರೂ, ಮೋದಿ ತಮ್ಮ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತಾರಾ ಎನ್ನುವುದೇ ಎಲ್ಲೆಡೆ ಚರ್ಚೆಯಾಗುತ್ತಿದೆ.

2014ರಲ್ಲಿ ಮೋದಿ ಮೊದಲ ಬಾರಿಗೆ ಇಲ್ಲಿಂದ ಸ್ಪರ್ಧಿಸಿದ್ದಾಗ ದಿಲ್ಲಿಯಲ್ಲಿ ಹವಾ ಎಬ್ಬಿಸಿದ್ದ ಆಮ್ ಆದ್ಮಿ ಪಾರ್ಟಿ ನಾಯಕ ಅರವಿಂದ ಕೇಜ್ರಿವಾಲ್ ವಾರಾಣಸಿಯಲ್ಲಿ ಸ್ಪರ್ಧೆಗಿಳಿದಿದ್ದರು. ಆದರೆ, 2 ಲಕ್ಷ ಮತಗಳಿಸುವಲ್ಲಿ ಶಕ್ತರಾದ ಕೇಜ್ರಿವಾಲ್ ಸೋಲು ಅನುಭವಿಸಿದರು. 2019ರಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾರಾಣಸಿಯಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆ, ನಿರೀಕ್ಷೆಗಳು ಜೋರಾದರೂ, ಅಂತಿಮ ಕ್ಷಣದಲ್ಲಿ ರಾಜ್ಯ ಕಾರ್ಯಕರ್ತರು ಮತ್ತು ಮುಖಂಡರನ್ನು ನಿರಾಸೆಗೊಳಿಸಿದ್ದ ಅವರು, ವಾರಾಣಸಿಯಿಂದ ಸ್ಪರ್ಧಿಸೋಲ್ಲ ಎಂದು ಪ್ರಕಟಿಸಿದರು. 2024ರಲ್ಲೂ ವಿಪಕ್ಷಗಳು ಜನಪ್ರಿಯ ಅಥವಾ ಪ್ರಬಲ ಅಭ್ಯರ್ಥಿಯನ್ನು ವಾರಾಣಸಿಯಿಂದ ಕಣಕ್ಕಿಳಿಸಿಲ್ಲ. 2009ರಿಂದ ವಾರಾಣಸಿಯಲ್ಲಿ ಸ್ಪರ್ಧಿಸಿ ಸೋಲುತ್ತಿರುವ ಅಜಯ್ ರಾಯ್ರನ್ನೇ ಇಂಡಿ ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಪ್ರಬಲ ಸಂದೇಶ ರವಾನೆ: ವಾರಾಣಸಿ ಹಿಂದುಗಳ ಶ್ರದ್ಧಾಕೇಂದ್ರ. ಹಿಂದುತ್ವದ ಪ್ರಬಲ ಪ್ರತಿಪಾದಕ, ಭಾರತೀಯ ಸಂಸ್ಕೃತಿ, ಪರಂಪರೆಗಳನ್ನು ತಮ್ಮ ಜೀವನದಲ್ಲೂ ಮೈಗೂಡಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಈ ಧಾರ್ವಿುಕ ನಗರಿಯಿಂದ ಸ್ಪರ್ಧಿಸುವುದೇ ಪಕ್ಷದ ಕಾರ್ಯಕರ್ತ ವರ್ಗ, ಬೆಂಬಲಿಗ ಸಮೂಹಕ್ಕೆ ಪ್ರಬಲ ಸಂದೇಶ ರವಾನೆಯಾಗುತ್ತದೆ.

2014ರಲ್ಲಿ ವಾರಾಣಸಿಯನ್ನು ಆಯ್ಕೆ ಮಾಡಿಕೊಂಡಿದ್ದು ಈ ದೃಷ್ಟಿಕೋನದಿಂದಲೇ. ವಾರಾಣಸಿ ಪೂರ್ವ ಉತ್ತರ ಪ್ರದೇಶದ ಭಾಗವಾಗಿರುವುದರಿಂದ ಮೋದಿಯವರು ಇಲ್ಲಿಂದ ಸ್ಪರ್ಧೆ ಮಾಡಿದ ಪರಿಣಾಮ ಪೂರ್ವ ಉತ್ತರ ಪ್ರದೇಶದ ಹಲವು ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಬಿಜೆಪಿಗೆ ಅನುಕೂಲವಾಯಿತು. ಮೋದಿ ಹವಾ ಮತ್ತು ಜನಪ್ರಿಯತೆ ಇತರ ಅಭ್ಯರ್ಥಿಗಳನ್ನು ಗೆಲುವಿನ ದಡ ಸೇರಿಸಿತು. ಈ ಬಾರಿ ಕೂಡ ಬಿಜೆಪಿ ಪೂರ್ವಾಂಚಲದ ಹಲವು ಸೀಟುಗಳನ್ನು ಬಾಚಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ವಿಶ್ವನಾಥನ ನಗರಿಗೆ ಕಾರಿಡಾರ್ ಕಿರೀಟ: ಕಾಶಿಗೆ ಭೇಟಿ ನೀಡುವ ಯಾವುದೇ ಯಾತ್ರಿಕರನ್ನು ಬೇಕಾದರೂ ಮಾತನಾಡಿಸಿ. 20 ವರ್ಷಗಳ ಹಿಂದೆ ಕಾಶಿ ದೇಗುಲ ಮತ್ತು ಸುತ್ತಮುತ್ತಲಿನ ಪರಿಸರ ಹೇಗಿತ್ತು ಮತ್ತು ಈಗ ಹೇಗೆ ಪರಿವರ್ತನೆಯಾಗಿದೆ ಎಂಬುದನ್ನು ಅವರೇ ವಿವರಿಸಿ ಹೇಳುತ್ತಾರೆ. ಹತ್ತಾರು ಗಲ್ಲಿಗಳು, ಅತಿಕ್ರಮದಿಂದ ನಿರ್ವಣಗೊಂಡ ನೂರಾರು ಕಟ್ಟಡಗಳು, ಅಂಗಡಿ-ಮುಂಗಟ್ಟುಗಳು...ಹೀಗೆ ಇವೆಲ್ಲವನ್ನು ಸೀಳಿಕೊಂಡು ಕಾಶಿ ವಿಶ್ವನಾಥನ ದೇಗುಲವನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿಯಿತ್ತು. ಅವುಗಳ ಮಧ್ಯೆ ಅಸಹನೀಯ ಅಸ್ವಚ್ಛ ವಾತಾವರಣವಂತೂ ಯಾಕಾದರೂ ಇಲ್ಲಿಗೆ ಬಂದೆ ಎಂಬ ಭಾವನೆ ಮೂಡಿಸುತ್ತಿತ್ತು. ಆದರೆ, ಕಾಶಿ ಕಾರಿಡಾರ್ ನಿರ್ಮಾಣ ಮಾಡುವ ಮೂಲಕ ಇಡೀ ದೇಗುಲ ಪರಿಸರವನ್ನು ಅತ್ಯಾಕರ್ಷಕತೆಯಿಂದ ವಿನ್ಯಾಸಗೊಳಿಸಲಾಗಿದೆ. ದೇವಸ್ಥಾನ ಎಂದರೆ ಹೀಗಿರಬೇಕು ಎಂದು ಜನರೇ ಈಗ ಮಾತನಾಡಿಕೊಳ್ಳುತ್ತಿದ್ದಾರೆ. ಗಂಗಾನದಿ ಘಾಟ್​ನಿಂದ ಕಾಶಿ ವಿಶ್ವನಾಥನ ಮಂದಿರಕ್ಕೆ ನೇರ ಸಂಪರ್ಕವಿರುವ ಕಾರಿಡಾರ್​ನ್ನು ನಿರ್ವಣಗೊಳಿಸಲಾಗಿದೆ.

ಪ್ರಧಾನಿ ಮೋದಿ ವಿವಿಧೆಡೆ ಪ್ರಚಾರ ಸಭೆಗಳನ್ನು ನಡೆಸುತ್ತಿರುವುದರಿಂದ ಕಾಶಿಯಲ್ಲಿ ಉತ್ತರ ಪ್ರದೇಶದ ವಿವಿಧ ಮುಖಂಡರು, ಸಚಿವರು ಪ್ರಚಾರ ಉಸ್ತುವಾರಿ ನಿಭಾಯಿಸುತ್ತಿದ್ದಾರೆ. ವಿವಿಧ ಜಾತಿ, ಪಂಗಡ, ಸಮುದಾಯಗಳನ್ನು ಈ ಮುಖಂಡರು ಭೇಟಿಯಾಗುತ್ತಿದ್ದು, ಮೋದಿ ಗೆಲುವಿನ ಅಂತರ ಮತ್ತಷ್ಟು ಹೆಚ್ಚಿಸಲು ಶ್ರಮಿಸು ತ್ತಿದ್ದಾರೆ. 2014ರಲ್ಲಿ 3.8 ಲಕ್ಷ ಮತಗಳಿಂದ ಗೆದ್ದಿದ್ದ ಮೋದಿ, 2019ರಲ್ಲಿ 4.8 ಲಕ್ಷ ಮತಗಳಿಂದ ಎದುರಾಳಿಯನ್ನು ಸೋಲಿಸಿದ್ದರು. ಜೂನ್ 1ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಮೋದಿಯವರು ಮೇ 29ರ ರಾತ್ರಿಯಂದು ವಾರಾಣಸಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಬಿಜೆಪಿಯಲ್ಲಿದ್ದ ಅಜಯ್ ರಾಯ್: ಅಜಯ್ ರಾಯ್ ತಮ್ಮ ರಾಜಕೀಯ ಬದುಕನ್ನು ಆರಂಭಿಸಿದ್ದು ಬಿಜೆಪಿಯಿಂದಲೇ. ಆರಂಭದಲ್ಲಿ ಎಬಿವಿಪಿ, ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ... ಹೀಗೆ ಎಲ್ಲರೊಂದಿಗೂ ಸಂಪರ್ಕ ಸಾಧಿಸಿದ್ದರು. 90ರ ದಶಕದಲ್ಲಿ ರಾಮಮಂದಿರ ಚಳವಳಿಯ ಭಾಗವಾಗಿದ್ದ ಅವರು, ಅಯೋಧ್ಯೆಯಲ್ಲಿ ಮಂದಿರ ನಿರ್ವಣವಾಗಲೇ ಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದರು. ಬಿಜೆಪಿಯಲ್ಲಿದ್ದಾಗ ಅಜಯ್ ರಾಯ್ ಮೂರು ಬಾರಿ ಶಾಸಕರಾಗಿದ್ದರು. 2009ರಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಾರ್ಟಿ ಸೇರಿ, ನಂತರ 2012ರಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾದರು.

ಎಸ್​ಪಿ ಮತ್ತು ಕಾಂಗ್ರೆಸ್​ನಲ್ಲಿದ್ದಾಗ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಈ ಬಾರಿ ಕೂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. 2009ರಿಂದ ನಿರಂತರವಾಗಿ ವಾರಾಣಸಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಅಜಯ್ ರಾಯ್ರನ್ನು ಈವರೆಗೆ ಇಲ್ಲಿನ ಮತದಾರರು ತಮ್ಮ ಸಂಸದರಾಗಿ ಆಯ್ಕೆ ಮಾಡಿಲ್ಲ. ಗೆಲ್ಲುವುದು ಬಿಡಿ, ಅವರಿಗೆ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಬರಲೂ ಸಾಧ್ಯವಾಗಿಲ್ಲ. ಅಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ವರಿಷ್ಠರು ಗೈರಾಗುವ ತೀರ್ಮಾನ ಮಾಡಿದ್ದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅಜಯ್ ರಾಯ್ ಮತ್ತು ಬೆಂಬಲಿಗರಿಗೆ ಸರಿ ಎನಿಸಿರಲಿಲ್ಲ. ಹೈಕಮಾಂಡ್ ತೀರ್ವನವನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದ್ದರು.

ಬದಲಾದ ಚಿತ್ರಣ: 2014ರಲ್ಲಿ ಮೋದಿ ವಾರಾಣಸಿ ಗೆದ್ದ ಬಳಿಕ, ಧಾರ್ವಿುಕ ನಗರಿಯ ಪೂರ್ಣ ಚಹರೆ ಬದಲಾಗಿದೆ. ನಿರೀಕ್ಷೆಗೂ ಮೀರಿ ಕಾಶಿಯನ್ನು ಬದಲಾಯಿಸಿದ್ದು, ಇಡೀ ಹಿಂದು ಸಮೂಹದ ಮೆಚ್ಚುಗೆಗೆ ಪಾತ್ರವಾಗಿದೆ. ಚರಂಡಿ ನೀರು, ಕೆಸರು ಮಣ್ಣುಗಳಿಂದ ತುಂಬಿದ್ದ ಗಂಗಾ ನದಿ ಘಾಟ್​ಗಳೀಗ ಅಭಿವೃದ್ಧಿಯಿಂದ ನಳನಳಿಸುತ್ತಿವೆ. ಶವಗಳು ತೇಲುತ್ತಿದ್ದ ಗಂಗಾ ನದಿಯಲ್ಲೀಗ ಬೋಟು ಯಾನ ಯಾತ್ರಿಕರನ್ನು ಮಂತ್ರಮುಗ್ಧಗೊಳಿಸುತ್ತಿದೆ. ಹಡಗು ಮಾದರಿಯ ಕ್ರೂಸರ್​ಗಳು ಪ್ರವಾಸಿಗರನ್ನು ಗಂಗಾ ಘಾಟ್​ನ ಸುಂದರ ಪರಿಸರದ ಪರಿಚಯ ನೀಡುತ್ತಿವೆ. ಅಸ್ಸೀ ಘಾಟ್ ಸೇರಿ ಹಲವು ಘಾಟ್​ಗಳಲ್ಲಿ ನಿತ್ಯವೂ ಸಾಂಸ್ಕೃತಿಯ ಕಾರ್ಯಕ್ರಮ, ಮುಂಜಾನೆ ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳ ಕೇಂದ್ರವಾಗಿರುವುದರಿಂದ ಅದು ಸ್ಥಳೀಯರು ಮತ್ತು ಪ್ರವಾಸಿಗರನ್ನು ಮತ್ತೆ ಮತ್ತೆ ಕೈಬೀಸಿ ಕರೆಯುತ್ತಿವೆ. ರಾಜಕೀಯ ಇಚ್ಛಾಶಕ್ತಿಯಿದ್ದರೆ ಧಾರ್ವಿುಕ-ಸಾಂಸ್ಕೃತಿಕ ನಗರಿಯನ್ನು ಹೇಗೆ ಬದಲಾಯಿಸಬಹುದು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಮಾಡಿ ತೋರಿಸಿದ್ದಾರೆ.