ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ರೇಣುಕಸ್ವಾಮಿ ಎನ್ನುವ ವ್ಯಕ್ತಿಯೊರ್ವ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂದು ಹತ್ಯೆ ಮಾಡಿದ ಆರೋಪ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಮೇಲಿದೆ. ಸದ್ಯ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಹಾಗೂ ಅವರ ಸಹಚರರು ಇದ್ದಾರೆ. ಈ ಸುದ್ದಿ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಒಂದು ಲೈನ್ ಸಖತ್ ಸುದ್ದಿಯಾಗುತ್ತಿದೆ.
ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ದರ್ಶನ್ ಈ ಬಗ್ಗೆ ಮಾತನಾಡಿ ʻʻತಗಡೇ, ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಉಮಾಪತಿಗೆ ಪ್ರಶ್ನೆ ಮಾಡಿದ್ದರು. ʻಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಎಂದು ಹೇಳಿಕೊಂಡು ಬಂದಿದ್ದೆಯಲ್ವಾ?ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು. ಅಯ್ಯೋ ತಗಡೇ… ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು.
ನಟ ದರ್ಶನ್ ಬಳಸಿದ ಪದ ಬಳಕೆ ಬಗ್ಗೆ ಬಳಿಕ ಉಮಾಪತಿ ಮಾತನಾಡಿ ʻʻಅದು ತಪ್ಪು ಸರ್, ಸಮಸ್ಯೆಗಳು ಎಲ್ಲ ಕಡೆ ಬರುತ್ತದೆ. ಆದರೆ ಅದನ್ನು ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ದೇಹ ತೂಕ ವಿದ್ದರೆ ಸಾಲದು ಮಾತು ತೂಕವಿರಬೇಕು. ನಾನು ತಪ್ಪು ಮಾಡಿದರೂ ತಪ್ಪೆ. ಬೇರೆ ಯಾರಾದರೂ ತಪ್ಪು ಮಾಡಿದರೆ ತಪ್ಪೇ. ನಾವೆಲ್ಲ ಸಿನಿಮಾ ಮುಖಾಂತರ ಮೆಸೆಜ್ ಕೊಡಬೇಕು. ಈ ವಿವಾದಿಂದ ಸಂದೇಶ ಕೊಡುವಂತದ್ದು ಏನಿಲ್ಲʼʼಎಂದಿದ್ದರು.
ರಾಬರ್ಟ್ ಸಿನಿಮಾ ಬಳಿಕ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ ಘರ್ಷಣೆ ಉಂಟಾಗಿತ್ತು. ದರ್ಶನ್ ಮಾಧ್ಯಮ ಮುಂದೆ ಪ್ರತಿಕ್ರಿಯಿಸುವಾಗ ಉಮಾಪತಿ ಗೌಡಗೆ ತಗಡು ಎಂದು ಹೇಳಿದ್ದರು. ಅದಕ್ಕೆ ಉಮಾಪತಿ ಗೌಡ ಇಂದು ತಗಡಾಗಿರುವವನು ಮುಂದೊಂದು ದಿನ ಚಿನ್ನದ ತಗಡಾಗಬಹುದು ಎಂದು ಪ್ರತ್ಯುತ್ತರ ನೀಡಿದ್ದರು. ಇದೀಗ ರೇಣುಕಸ್ವಾಮಿ ಪ್ರಕರಣದ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಗೌಡರವರು ದರ್ಶನ್ಗೆ ಟಾಂಗ್ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಉಮಾಪತಿ ಗೌಡ “ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಅವರ ಹಳೆಯ ಹೇಳಿಕೆಗಳು, ಡೈಲಾಗ್ಗಳು ಟ್ರೋಲ್ ಆಗುತ್ತಿದೆ. ಜೊತೆಗೆ ಉಮಾಪತಿ ಪರವಾಗಿ ಹಲವು ಮೀಮ್ಸ್ ವೈರಲ್ ಆಗಿವೆ. ಸದ್ಯ ಮೀಮ್ಸ್ ಗಳನ್ನು ಉಮಾಪತಿ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಗಡು ಯಾರು ಗೊತೈತಾ, ಎಂದು ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ?: ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ.
ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಾ ಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ.
ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.