ನ್ಯೂಸ್

ಊಳಿಗಮಾನ್ಯ ನೀತಿಗಳಿಂದಾಗಿ ರಾಜ್ಯದ ಪ್ರಗತಿಗೆ ಧಕ್ಕೆ: ಸಿಎಂ ಭಗವಂತ್ ಸಿಂಗ್ ಮಾನ್

Bengaluru - Political - Shivananda Tagadur

ಪಂಜಾಬ್:
ಹಿಂದಿನಿಂದಲೂ ರಾಜವಂಶಗಳ ಪ್ರತಿಗಾಮಿ ಮತ್ತು ಊಳಿಗಮಾನ್ಯ ನೀತಿಗಳಿಂದಾಗಿ ರಾಜ್ಯದ ಪ್ರಗತಿ ಮತ್ತು ಗಡಿ ಪ್ರದೇಶವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಬೇಸರ ವ್ಯಕ್ತಪಡಿಸಿದ್ದಾರೆ.
ದೀನಾನಗರ (ಗುರುದಾಸಪುರ)ದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ರಾಜ್ಯದ ಗಡಿ ಜಿಲ್ಲೆಗಳ ನಿವಾಸಿಗಳು ದೇಶದ ಏಕತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುತ್ತಿರುವ ವೀರರು. ಮಹಾನ್ ಗುರುಗಳ ಆರ್ಶಿವಾದ ಪಡೆದ ಈ ಭೂಮಿ ವೀರರು, ಶ್ರಮಜೀವಿಗಳ ನೆಲೆಬೀಡು. ಈ ಭಾಗದ ಹಿಂದಿನಿಂದಲೂ ಆಯ್ಕೆಯಾದ ನಾಯಕರು ಹಾಗೂ ಪ್ರಸ್ತುತ ಪ್ರಮುಖ ಸ್ಥಾನಗಳಲ್ಲಿ ಇರುವವರು ಸಹ ಎಂದಿಗೂ ಈ ಪ್ರದೇಶದ ಅಭಿವೃದ್ಧಿ ಹಾಗೂ ಜನರ ಕಲ್ಯಾಣದ ಬಗ್ಗೆ ಯೋಚಿಸಲೇ ಇಲ್ಲ ಎಂದು ದೂರಿದರು.
ಮಹಾನ್ ದೇಶಪ್ರೇಮಿಗಳನ್ನು ಮತ್ತು ರಾಷ್ಟ್ರವಾದಿಗಳನ್ನು ಹುಟ್ಟುಹಾಕಿದ ಈ ಪ್ರದೇಶವು ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲ. ಇಲ್ಲಿನ ನಾಯಕರು ನಾಡಿನ ಹಾಗೂ ಜನರ ಏಳಿಗೆಗಿಂತ ತಮ್ಮ ಬೆಳವಣಿಗೆ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಿರುವುದು ದುರದೃಷ್ಟಕರ ಎಂದ ಅವರು, ಯಾವುದೇ ಸಿದ್ಧಾಂತವಿಲ್ಲದ ಈ ಅವಕಾಶವಾದಿ ನಾಯಕರಿಗೆ ಕೇವಲ ಅಧಿಕಾರವಷ್ಟೇ ಬೇಕು. ಅದಕ್ಕಾಗಿ ಅವರು ಆಗಾಗ್ಗೆ ತಮ್ಮ ನಿಷ್ಠೆಯನ್ನು ಬದಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರು ತಮ್ಮ ಕಷ್ಟಗಳಿಗೆ ಮಿಡಿಯುವ ನಾಯಕರನ್ನು ಆಯ್ಕೆ ಮಾಡಬೇಕೇ ಹೊರತು ತಮ್ಮ ಬೇಲೆ ದಬ್ಬಾಳಿಕೆ ಮಾಡುವವರನ್ನಲ್ಲ. ಆದರೆ ತಮ್ಮ ಸರ್ಕಾರ ಪಂಜಾಬ್‌ನ ಹಿತಾಸಕ್ತಿ ಕಾಪಾಡಲು ಸದಾ ಬದ್ಧವಾಗಿದೆ. ಹಿಂದಿನ ಸರ್ಕಾರ ಏನನ್ನೂ ಮಾಡಲಿಲ್ಲ. ನಮ್ಮ ಸರ್ಕಾರ ನಾಡಿನ ಹಾಗೂ ಜನರ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿದೆ. ಶೇ. 90 ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. 43 ಸಾವಿರಕ್ಕೂ ಹೆಚ್ಚು ಯುವಕರು ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಜನರಿಗೆ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಒದಗಿಸಲಾಗುತ್ತಿದೆ. ಈ ಎಲ್ಲವೂ ಜನರಸಾಮಾನ್ಯರ ಹಿತದೃಷ್ಟಿಯಿಂದ ಕೂಡಿದ್ದಾಗಿದೆ ಎಂದರು.
ರಾಜ್ಯದಲ್ಲಿ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಮಾಳವ ಕಾಲುವೆ ನಿರ್ಮಾಣಕ್ಕೆ ಚಾಲನೆ ನೀಡಿದ ಸರ್ಕಾರ ನಮ್ಮದು. ಸುಮಾರು 150 ಕಿ.ಮೀ. ಉದ್ದದ ಈ ಹೊಸ ಕಾಲುವೆಯಿಂದ ರಾಜ್ಯದಲ್ಲಿ ವಿಶೇಷವಾಗಿ ಮಾಲ್ವಾ ಪ್ರದೇಶದಲ್ಲಿ ಅಭೂತಪೂರ್ವ ಪ್ರಗತಿ ಮತ್ತು ಸಮೃದ್ಧಿಯ ಯುವ ಆರಂಭವಾಗಿದೆ. ಇದರಿಂದ ಸುಮಾರು 2 ಲಕ್ಷ ಎಕರೆ ಲವತ್ತಾದ ಭೂಮಿಗೆ ನೀರು ಪೂರೈಕೆಯಾಗಲಿದೆ. ಇದಕ್ಕಾಗಿ ಸರ್ಕಾರ 2,300 ಕೋಟಿ ರೂ. ಖರ್ಚು ಮಾಡಲಿದೆ ಎಂದು ಹೇಳಿದರು.
ಈ ಪ್ರದೇಶವು ದೇಶಕ್ಕಾಗಿ ಗರಿಷ್ಠ ಸೈನಿಕರನ್ನು ಉತ್ಪಾದಿಸುತ್ತದೆ ಮತ್ತು ಅವರ ಅತ್ಯುನ್ನತ ತ್ಯಾಗವನ್ನು ಗುರುತಿಸಲು ರಾಜ್ಯ ಸರ್ಕಾರ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧನ ಕುಟುಂಬಕ್ಕೆ 1 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಿದೆ. ಜಮೀನು ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ.