ನ್ಯೂಸ್

ಮೀಸಲಾತಿ ಅಧಿಸೂಚನೆ ರದ್ದು ಆದೇಶಕ್ಕೆ ತಡೆಯಾಜ್ಞೆ

ಬೆಂಗಳೂರು: ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದಪಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ.

ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆ ರದ್ದುಪಡಿಸಿ ನ.19ರಂದು ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಈ ಮಧ್ಯಂತರ ಆದೇಶ ನೀಡಿತು.

ಕೆಲ ಸಮಯ ಸರ್ಕಾರದ ವಾದ ಆಲಿಸಿದ ಪೀಠ, ಮೇಲ್ಮನವಿಯಲ್ಲಿನ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿತು. ಬಳಿಕ, ಅರ್ಜಿಯಲ್ಲಿನ ಕೆಲ ತಾಂತ್ರಿಕ ಲೋಪಗಳನ್ನು (ಆಫೀಸ್ ಆಬ್ಜೆಕ್ಷನ್) ಸರಿಪಡಿಸಲು 2 ವಾರ ಕಾಲಾವಕಾಶ ನೀಡುವಂತೆ ಸರ್ಕಾರದ ಪರ ವಕೀಲರು ಮಾಡಿದ ಮನವಿ ಪರಿಗಣಿಸಿ ಅರ್ಜಿ ವಿಚಾರಣೆ ಮುಂದೂಡಿತು.

ಹಾಸನ, ಆರಸಿಕೇರೆ, ಹರಿಹರ, ಕೊಪ್ಪಳ ಹಾಗೂ ಶಿಡ್ಲಘಟ್ಟ ನಗರಸಭೆಗಳು ಮತ್ತು ಚನ್ನಗಿರಿ, ಕೆ.ಆರ್. ಪೇಟೆ ಪುರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಬೇಕು ಆದರೆ, ಚುನಾವಣಾ ಫಲಿತಾಂಶ ಘೋಷಿಸಬಾರದು ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಮುಂದುವರಿಯಲಿದೆ ಎಂದು ಇದೇ ವೇಳೆ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸರ್ಕಾರದ ವಾದವೇನು?:
ಇದಕ್ಕೂ ಮುನ್ನ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಏಕಸದಸ್ಯ ನ್ಯಾಯಪೀಠದ ಆದೇಶ ಓದುತ್ತಾ, ಹೊಸ ಅಧಿಸೂಚನೆಯಲ್ಲಿ ಶೇ.50 ಮೀಸಲಾತಿ ಪುನರಾವರ್ತನೆಯಾದರೆ ಚುನಾವಣೆ ನಡೆಸುವ ಸಂಬಂಧ ಸರ್ಕಾರ ಹೈಕೋರ್ಟ್‌ಗೆ ಮೊರೆ ಹೋಗಬಹುದು ಎಂದು ಏಕಸದಸ್ಯ ಪೀಠ ಹೇಳಿದೆ. ಆಗ ಸರ್ಕಾರ ತನ್ನ ವಿರುದ್ಧವೇ ತಾನೇ ಅರ್ಜಿ ಹಾಕಿಕೊಳ್ಳಬೇಕಾಗುತ್ತದೆ. ಇದು ಹೇಗೆ ಸಾಧ್ಯ ಎಂದರು.

ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎರಡು ವರ್ಷಗಳಾಗುತ್ತ ಬಂದಿದ್ದರೂ, ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದಂತಾಗಿದೆ. ಈಗಾಗಲೇ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗಳು ನಡೆದು ಆಯ್ಕೆಯಾದವರು ಅಧಿಕಾರವಹಿಸಿಕೊಂಡಿದ್ದಾರೆ. 276 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಐದಾರು ಸಂಸ್ಥೆಗಳಷ್ಟೇ ಮೀಸಲಾತಿ ಪ್ರಶ್ನೆ ಮಾಡಿವೆ. ಕೆಲವೇ ಕೆಲವು ಸಂಸ್ಥೆಗಳ ಸಲುವಾಗಿ ಪೂರ್ತಿ 276 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಅಧಿಸೂಚನೆ ರದ್ದುಪಡಿಸುವುದು ಸರಿಯಲ್ಲ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.