ನ್ಯೂಸ್

ಯುಕೆಪಿ ಅಚ್ಚುಕಟ್ಟು ಪ್ರದೇಶಕ್ಕೆ ಡಿ.10ರವರೆಗೆ ನೀರು

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶಗಳಿಗೆ ಡಿಸೆಂಬರ್ 10ರವರೆಗೆ ನೀರು ಪೂರೈಸಲು ಯುಕೆಪಿ ಉನ್ನತ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿದೆ ಎಂದು ಸಮಿತಿ ಅಧ್ಯಕ್ಷರೂ ಆದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದ್ದಾರೆ.

ಇದರಿಂದಾಗಿ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಆರು ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಲಿದೆ.

ಆಲ್ಮಟ್ಟಿ ಜಲಾಶಯಕ್ಕೆ ಒಳಹರಿವು ಬಂದಿರುವ ಕಾರಣ ಕಟ್ಟು ಪದ್ಧತಿ (ಚಾಲು-ಬಂದ್)ಯನ್ನು ಪರಿಷ್ಕರಿಸಲಾಗಿದೆ. 14 ದಿನಗಳಿಂದ 10 ದಿನಕ್ಕೆ ಇಳಿಸಲಾಗಿತ್ತು. ಇದೀಗ ಎಂಟು ದಿನಗಳಿಗೆ ಇಳಿಸಲಾಗಿದೆ. ಅಂದರೆ ಅಚ್ಚುಕಟ್ಟು ಪ್ರದೇಶಕ್ಕೆ ಎಂಟು ದಿನ ನೀರು ಪೂರೈಕೆ ಬಂದ್ ಆಗಲಿದೆ.

ಅಲ್ಲದೆ, ಅಕ್ಟೋಬರ್ 17ರ ಬದಲಿಗೆ 14ರಿಂದ ನೀರು ಪೂರೈಕೆ ಶುರುವಾಗಲಿದೆ. ಮುಂಗಾರು ಹಂಗಾಮಿಗೆ ನ.23ರವರೆಗೆ ನೀರು ಪೂರೈಸಲು ಕೈಗೊಂಡಿದ್ದ ನಿರ್ಣಯದ ಬದಲಾಗಿ ಡಿ.10ರವರೆಗೆ ಪೂರೈಸಲು ನಿರ್ಧರಿಸಲಾಗಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಪೂರೈಕೆ ಅವಧಿಯನ್ನು ಅಂತಿಮಗೊಳಿಸಿ, ರೈತರ ಹಿತರಕ್ಷಿಸಲಾಗಿದೆ ಎಂದು ಆರ್.ಬಿ.ತಿಮ್ಮಾಪೂರ ಹೇಳಿದ್ದಾರೆ.