ನ್ಯೂಸ್

ಬ್ರಿಟನ್ ಪ್ರಧಾನಿ ಆರೋಗ್ಯ ಗಂಭೀರ: ತೀವ್ರ ನಿಗಾ ಘಟಕದಲ್ಲಿ ಬೋರಿಸ್ ಜಾನ್ಸನ್

ಕರೊನಾ ಸೋಂಕಿನಿಂದ ಬಳಲುತ್ತಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆರೋಗ್ಯ ಬಿಗಡಾಯಿಸಿದೆ. ಉಸಿರಾಟದ ಸಮಸ್ಯೆ ಇದ್ದ ಕಾರಣ ಅವರಿಗೆ ಸೋಮವಾರ ರಾತ್ರಿ ತೀವ್ರ ನಿಗಾ ಘಟಕದಲ್ಲಿ ಆಮ್ಲಜನಕ ನೀಡಲಾಗಿತ್ತು. ಆದರೆ, ವೆಂಟಿಲೇಟರ್ (ಕೃತಕ ಉಸಿರಾಟ ಸಾಧನ) ಅಳವಡಿಸಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ವೆಂಟಿಲೇಟರ್ ಈಗಾಗಲೇ ಮೀಸಲು ಇರಿಸಲಾಗಿದ್ದು, ಅವಶ್ಯಕತೆ ಇದ್ದರೆ ಕೂಡಲೇ ಅದನ್ನು ಅಳವಡಿಸಲಾಗುತ್ತದೆ ಎಂದು ಬ್ರಿಟನ್ ಸಂಪುಟ ಸಚಿವ ಮೈಕಲ್ ಗೋವ್ ತಿಳಿಸಿದ್ದಾರೆ. ಕ್ವಾರಂಟೈನ್​ನಲ್ಲಿದ್ದ ಪ್ರಧಾನಿ ಜಾನ್ಸನ್ ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ಆಡಳಿತದ ಕಾರ್ಯಭಾರವನ್ನು ವಿದೇಶಾಂಗ ಸಚಿವ ಡೊಮಿನಿಕ್ ರಾಬ್​ಗೆ ವಹಿಸಿದ್ದಾರೆ. ಆದರೆ, ಬ್ರಿಟನ್​ನಲ್ಲಿ ಉಪಪ್ರಧಾನಿ ಹುದ್ದೆ ಇಲ್ಲ. ಹೀಗಾಗಿ ರಾಬ್ ಮಹತ್ವದ ತೀರ್ಮಾನ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂಬ ಜಿಜ್ಞಾಸೆ ಎದುರಾಗಿದೆ. 55 ವರ್ಷದ ಜಾನ್ಸ್​ನ್​ಗೆ ಸೋಂಕಿನ ಲಕ್ಷಣ 10 ದಿನಗಳ ಹಿಂದೆಯೇ ಪತ್ತೆಯಾಗಿತ್ತು. ಪಾಸಿಟಿವ್ ವರದಿ ಬಂದ ಕೂಡಲೇ ಸ್ವಯಂ ಪ್ರೇರಣೆಯಿಂದ ಪ್ರತ್ಯೇಕವಾಸದಲ್ಲಿದ್ದ ಜಾನ್ಸನ್, ಆಡಳಿತಾತ್ಮಕ ಕಾರ್ಯವನ್ನು ನಿರ್ವಹಿಸುತ್ತಿದ್ದರು.

ಈ ಮಧ್ಯೆ, ಅವರ ಗೆಳತಿಯಲ್ಲೂ ಪಾಸಿಟಿವ್ ಕಾಣಿಸಿಕೊಂಡ ಕಾರಣ ಅವರನ್ನು ಐಸೋಲೇಷನ್​ಗೆ ಕಳುಹಿಸಲಾಗಿದೆ. ಬ್ರಿಟನ್​ಲ್ಲಿ ಕರೊನಾ ಸೋಂಕಿಗೆ 5 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ತಮ್ಮ ನೆಚ್ಚಿನ ಪ್ರಧಾನಿ ಗುಣಮುಖರಾಗಲೆಂದು ದೇಶಾದ್ಯಂತ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕುತ್ತಿದ್ದಾರೆ.