ನ್ಯೂಸ್

ಕರೊನಾದಿಂದ ಮತ್ತಷ್ಟು ಬಿಗಡಾಯಿಸಿದ ಬ್ರಿಟಿಷ್​ ಪ್ರಧಾನಿ ಬೋರಿಸ್​ ಜಾನ್ಸನ್​ ಆರೋಗ್ಯ; ಐಸಿಯುಗೆ ಸ್ಥಳಾಂತರ

ಲಂಡನ್​: ಕರೊನಾ ವೈರಸ್​ ಸೋಂಕಿಗೆ ತುತ್ತಾಗಿರುವ ಬ್ರಿಟನ್​​ ಪ್ರಧಾನಿ ಬೋರಿಸ್​ ಜಾನ್ಸನ್​ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು ಅವರನ್ನು ಐಸಿಯುಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಅವರಲ್ಲಿ ಒಂದು ವಾರದ ಹಿಂದೆ ಕರೊನಾ ಲಕ್ಷಣ ಕಾಣಿಸಿಕೊಂಡಿತ್ತು. ಮನೆಯಲ್ಲೇ ಕ್ವಾರಂಟೈನ್​​ನಲ್ಲಿ ಇದ್ದರು. ಭಾನುವಾರ ಕರೊನಾ ಲಕ್ಷಣ ಸ್ವಲ್ಪ ಹೆಚ್ಚಾಗಿಯೇ ಕಂಡುಬಂದಿದ್ದರಿಂದ ಲಂಡನ್​​ನ ಸೇಂಟ್​ ಥಾಮಸ್​ ಆಸ್ಪತ್ರೆಗೆ ದಾಖಲಾಗಿದ್ದರು.

ಬೋರಿಸ್​ ಜಾನ್ಸನ್​ ಐಸಿಯುಗೆ ಸ್ಥಳಾಂತರಗೊಂಡ ಬಗ್ಗೆ ಅವರ ಕಚೇರಿಯಿಂದ ಸೋಮವಾರ ಅಧಿಕೃತ ಮಾಹಿತಿ ಬಿಡುಗಡೆ ಆಗಿದೆ.

ಕರೊನಾ ವೈರಸ್​ಗೆ ತುತ್ತಾಗಿರುವ ಪ್ರಧಾನಿ ಬೋರಿಸ್​ ಜಾನ್ಸನ್​ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿದೆ. ವೈದ್ಯಕೀಯ ತಂಡದ ಸಲಹೆಯಂತೆ ಅವರನ್ನು ಐಸಿಯುಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಐಸಿಯುಗೆ ದಾಖಲಾಗುವ ಕೆಲವೇ ಕ್ಷಣದ ಮೊದಲು ಟ್ವೀಟ್ ಮಾಡಿರುವ ಬೋರಿಸ್​ ಜಾನ್ಸನ್​, ಒಂದು ದಿನ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ಕರೊನಾ ವಿರುದ್ಧ ಹೋರಾಡುತ್ತೇನೆ. ಉತ್ಸಾಹದಲ್ಲಿಯೇ ಇದ್ದೇನೆ. ಹಾಗೇ ನಾನು ನನ್ನ ಅಧಿಕಾರಿಗಳ ತಂಡದೊಂದಿಗೆ ಸಂಪರ್ಕದಲ್ಲಿದ್ದೇನೆ. ಇಡೀ ದೇಶದ ಜನರನ್ನು ರಕ್ಷಣೆ ಮಾಡಲು ನಾವೆಲ್ಲ ಬದ್ಧರಾಗಿದ್ದೇವೆ ಎಂದು ಹೇಳಿದ್ದರು.

ಬೋರಿಸ್​ ಜಾನ್ಸನ್​ ಅವರಿಗೆ ಕರೊನಾ ವೈರಸ್​ ಇರುವುದು ಮಾ.26ರಂದು ದೃಢಪಟ್ಟಿತ್ತು. ಅಂದಿನಿಂದಲೂ ತಮ್ಮ ಡಾನಿಂಗ್​ ಸ್ಟ್ರೀಟ್​ನ ನಿವಾಸದಲ್ಲಿ ಕ್ವಾರಂಟೈನ್​ನಲ್ಲಿ ಇದ್ದರು. ಅಷ್ಟಾದರೂ ವಿಡಿಯೋ ಕಾನ್ಫರೆನ್ಸ್​ ಮೂಲಕ ಎಲ್ಲ ಸಭೆ ನಡೆಸುತ್ತಿದ್ದರು. ದೇಶದ ಆಡಳಿತ ಮಾಡುತ್ತಿದ್ದರು. (ಏಜೆನ್ಸೀಸ್​)