ನ್ಯೂಸ್

ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟ ವ್ಯಕ್ತಿಯೀಗ ಭಾರತದಲ್ಲೇ ಇಂಗ್ಲೆಂಡ್​ ಹೈಕಮೀಷನರ್​

ನವದೆಹಲಿ: ಆ ದಂಪತಿಗೆ ಭಾರತದ ಮೇಲೆ ಅದೆಷ್ಟರ ಮಟ್ಟಿಗೆ ಪ್ರೀತಿ ಎಂದರೆ ಮಗಳಿಗೆ ಅವರು ಇಂಡಿಯಾ ಎಂದು ಹೆಸರಿಟ್ಟಿದ್ದಾರೆ. ಎಂಥ ಸುಯೋಗವೆಂದರೆ ಅವರಿಗೆ ಮತ್ತೆ ಭಾರತದಲ್ಲಿಯೇ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ.

ರಾಷ್ಟ್ರಪತಿ ಭವನದಲ್ಲಿ ನಡೆದ ವರ್ಚುವಲ್​ ಸಮಾರಂಭದಲ್ಲಿ ವಿವಿಧ ದೇಶಗಳ ರಾಜತಾಂತ್ರಿಕರು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ತಮ್ಮ ಪ್ರಮಾಣ ಪತ್ರಗಳನ್ನು ಸಲ್ಲಿಸಿದರು. ನ್ಯೂಜಿಲೆಂಡ್​, ಉಜ್ಬೆಕಿಸ್ತಾನ್​ ಹಾಗೂ ಭಾರತಕ್ಕೆ ಇಂಗ್ಲೆಂಡ್​ನ ಹೈಕಮೀಷನರ್​ ಆಗಿ ನೇಮಿಸಲ್ಪಟ್ಟ ಸರ್​ ಫಿಲಿಫ್​ ಬಾರ್ಟನ್​ ಪ್ರಮಾಣ ಪತ್ರ ಅಥವಾ ಸನ್ನದುಗಳನ್ನು ಸಲ್ಲಿಸಿದರು.

ಫಿಲಿಪ್​ ಬಾರ್ಟನ್​ ​ ತಾಯಿ ಶೀಮ್ಲಾದಲ್ಲಿ ಜನಿಸಿದವರು. ಜತೆಗೆ, 1990ರಲ್ಲಿ ಫಿಲಿಫ್​ ಅವರನ್ನು ರಾಯಭಾರಿಯಾಗಿ ದೆಹಲಿಯಲ್ಲಿ ನಿಯೋಜಿಸಲಾಗಿತ್ತು. ಪತ್ನಿ ಅಮಂಡಾ ಅವರನ್ನು ಇಲ್ಲಿಯೇ ಭೇಟಿಯಾಗಿದ್ದು. ಇಲ್ಲಿಯೇ ಒಟ್ಟಿಗೆ ಕೆಲಸ ಮಾಡಿದ್ದು. ಹಾಗೂ ನಮ್ಮ ಮಗಳಿಗೆ ಇಂಡಿಯಾ ಎಂದೇ ಹೆಸರಿಟ್ಟಿದ್ದೇವೆ ಎಂದು ಭಾರತದೊಂದಿಗಿನ ತಮ್ಮ ಭಾವನಾತ್ಮಕ ಸಂಬಂಧವನ್ನು ಈ ವೇಳೆ ಫಿಲಿಫ್​ ಸ್ಮರಿಸಿಕೊಂಡರು.

ನಾನು ಮತ್ತೆ ಭಾರತಕ್ಕೆ ಹೈಕಮಿಷನರ್​ ಆಗಿ ಬರುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಪ್ರಧಾನಿ ಮೋದಿ ಬಣ್ಣಿಸಿದಂತೆ ಭಾರತ- ಬ್ರಿಟನ್​ ನಡುವಿನ ಅವಿಚ್ಛಿನ್ನ ಬಾಂಧವ್ಯವನ್ನು ವೃದ್ಧಿಸುವಲ್ಲಿ ಶ್ರಮಿಸುವುದಾಗಿ ಹೇಳಿದರು.