ನ್ಯೂಸ್

ಮಗಳ ಹೆಸರಿನ 667 ಟ್ಯಾಟೂವನ್ನು ಮೈ ತುಂಬಾ ಹಾಕಿಸಿ ವಿಶ್ವ ದಾಖಲೆ ಬರೆದ ತಂದೆ

ಬ್ರಿಟನ್: ಹೆತ್ತವರಿಗೆ ಮಕ್ಕಳ ಮೇಲೆ ಅಗಾಧವಾದ ಪ್ರೀತಿ ಇರುತ್ತದೆ. ಹೀಗೆ ಬ್ರಿಟನ್​​ನ ವ್ಯಕ್ತಿಯೊಬ್ಬ ತನ್ನ ಮಗಳ ಹೆಸರನ್ನು ತನ್ನ ದೇಹದ ಮೇಲೆ ಒಟ್ಟು 667 ಬಾರಿ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.

49 ವರ್ಷದ ಮಾರ್ಕ್ ಓವನ್ ಇವಾನ್ಸ್ ತನ್ನ ಏಳು ವರ್ಷದ ಮಗಳು ಲೂಸಿ (Lucy) ಹೆಸರನ್ನು ತನ್ನ ದೇಹದ ಮೇಲೆ ಟ್ಯಾಟೂ ಹಾಕಿಕೊಂಡಿದ್ದಾರೆ. ಬೆನ್ನು, ತೊಡೆ ಸೇರಿದಂತೆ ದೇಹದ ಅನೇಕ ಭಾಗಗಳಲ್ಲಿ ಈಗ 400ಕ್ಕೂ ಹೆಚ್ಚು ಹಚ್ಚೆ ಹಾಕಿಸಿಕೊಂಡಿರುವ ಇವಾನ್ಸ್ ಮೈಮೇಲೆ ಈಗ ಒಟ್ಟೂ 667 ಟ್ಯಾಟೂ ಇದೆ.

ಮಾರ್ಕ್ ತನ್ನ ಬೆನ್ನಿನ ಮೇಲೆ 267 ಬಾರಿ ಲೂಸಿ ಟ್ಯಾಟೂಗಳನ್ನು ಹಾಕಿಕೊಳ್ಳುವ ಮೂಲಕ 2017 ರಲ್ಲಿ ಮೊದಲ ಬಾರಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದ. ಆದ್ರೆ 2020 ರಲ್ಲಿ ಯುಎಸ್ ಎಯ 27 ವರ್ಷದ ಡೀಡ್ರಾ ವಿಜಿಲ್ ತನ್ನ ಹೆಸರನ್ನೇ 300 ಬಾರಿ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಇವಾನ್ಸ್ ದಾಖಲೆ ಮುರಿದಿದ್ದ. ಮಾರ್ಕ್ ಈ ದಾಖಲೆಯನ್ನು ಮರಳಿ ಪಡೆಯಲು ನಿರ್ಧರಿಸಿದ್ದಲ್ಲದೆ ಬೆನ್ನು ಹಾಗೂ ತೊಡೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ಮೂಲಕ ಮತ್ತೆ ದಾಖಲೆ ಬರೆದಿದ್ದಾನೆ.

ಪ್ರತಿ ಕಾಲಿನ ಮೇಲೆ 200 ಟ್ಯಾಟೂಗಳಂತೆ 400 ಟ್ಯಾಟೂ ಹಾಕಲು ಐದೂವರೆ ಗಂಟೆಗಳನ್ನು ತೆಗೆದುಕೊಂಡಿದೆ. ಮಾರ್ಕ್, ಲೂಸಿ ಜನ್ಮದಿನ ಹಾಗೂ ಆಸ್ಪತ್ರೆಗೆ ಹಣ ನೀಡುವ ಉದ್ದೇಶದಿಂದ ಈ ದಾಖಲೆ ಬರೆಯುವ ನಿರ್ಧಾರಕ್ಕೆ ಬಂದಿದ್ದ. ಮಾರ್ಕ್ ತನ್ನ ದೇಹದ ಎಲ್ಲ ಕಡೆ ಮಗಳ ಹೆಸರನ್ನು ಬರೆದುಕೊಂಡಿದ್ದಾನೆ. ಇಬ್ಬರು ಟ್ಯಾಟೂ ಕಲಾವಿದರು ಟ್ಯಾಟೂ ಹಾಕಿದ್ದಾರೆ.

ಈ  ಕುರಿತಾಗಿ ಮಾತನಾಡಿದ ಮಾರ್ಕ್​, ದಾಖಲೆ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೆ. ಇದನ್ನು ಮಗಳಿಗೆ ಅರ್ಪಿಸುತ್ತೇನೆ. ಹೆಸರು ಸದಾ ನನ್ನ ಜೊತೆಗಿರುತ್ತದೆ ಎಂದು ಹೆಮ್ಮೆ ಪಡುತ್ತೇನೆ ಎನ್ನುತ್ತಾರೆ.