ಬೆಂಗಳೂರು: ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ರೂಪಿಸಿರುವ ಕಲಿಕಾ ಪಠ್ಯಕ್ರಮ ಆಧಾರಿತ ಕಲಿಕಾ ಚೌಕಟ್ಟು (ಎಲ್‌ಒಸಿಎ್) ಕರಡನ್ನು ಒಪ್ಪುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್,ಯುಜಿಸಿ ಒಂದು ನಿಯಂತ್ರಣ ಸಂಸ್ಥೆ. ಅವರು ರೂಪಿಸಿದ ಪಠ್ಯಕ್ರಮವನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳುವುದಿಲ್ಲ. ಪಠ್ಯಕ್ರಮ ರೂಪಿಸುವ ಅಧಿಕಾರ ಪ್ರತಿ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಗಿದೆ. ಯುಜಿಸಿ ಬಿಡುಗಡೆ ಮಾಡಿದ ಪಠ್ಯಕ್ರಮ ಕರಡನ್ನು ಅಧ್ಯಯನ ಮಾಡಲು ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ತಜ್ಞರ ಸಮಿತಿಯನ್ನು ರಚಿಸಲಿದೆ ಎಂದರು.
ಯುಜಿಸಿ ಎಲ್ಲ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ನಮಗೂ ಅರ್ಥವಾಗುತ್ತಿಲ್ಲ. ಅದು ನಿಯಂತ್ರಣ ಸಂಸ್ಥೆಯಾಗಿದ್ದು, ಇತಿಮಿತಿಗಳನ್ನು ತಿಳಿದುಕೊಳ್ಳಬೇಕು. ಯುಜಿಸಿಗೆ ಪಠ್ಯದ ಚೌಕಟ್ಟನ್ನು ರೂಪಿಸುವ ಹಕ್ಕಿದೆಯೇ ಹೊರತು ಪಠ್ಯಕ್ರಮವಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಶಿಕ್ಷಣ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಮತ್ತು ತನ್ನ ತತ್ವಗಳನ್ನು ಮಕ್ಕಳ ಮೇಲೆ ಹೇರಲು ಯುಜಿಸಿ ಮೂಲಕ ಪ್ರಯತ್ನಿಸುತ್ತಿದೆ. ಮಕ್ಕಳ ಮೇಲೆ ತನ್ನ ಅಜೆಂಡಾವನ್ನು ಹೇರಲು ಅವಕಾಶ ನೀಡುವುದಿಲ್ಲ ಎಂದು ಸಚಿವರು ಆರೋಪಿಸಿದರು.
ಯುಜಿಸಿ ಹಿಂದಿನ ಕರಡು ಪ್ರತಿಯಲ್ಲಿ ರಾಜ್ಯ ಸರ್ಕಾರದ ಕುಲಪತಿಗಳ ನೇಮಕಾತಿ ಅಧಿಕಾರವನ್ನು ತೆಗೆದುಹಾಕಲು ಯತ್ನಿಸಿದ್ದನ್ನು ಮರೆಯುವಂತಿಲ್ಲ. ಈ ಕರಡು ಪ್ರತಿಗೆ ವಿರೋಧ ವ್ಯಕ್ತಪಡಿಸಿದವರಲ್ಲಿ ನಾವೇ ಮೊದಲಿಗರು. ಆನಂತರ ಆ ವಿಷಯ ತಣ್ಣಗಾಗಿದೆ. ಇದೀಗ ಯುಜಿಸಿ ಪಠ್ಯಕ್ರಮದ ಮೂಲಕ ಮತ್ತೊಂದು ಪ್ರಯತ್ನ ಮಾಡುತ್ತಿದೆ ಎಂದು ಡಾ.ಎಂ.ಸಿ. ಸುಧಾಕರ್ ಕಿಡಿಕಾರಿದರು.
ಉನ್ನತ ಅಧಿಕಾರಿಗಳ ತಂಡ ರಚನೆ
ರಾಜ್ಯ ಶಿಕ್ಷಣ ನೀತಿ ಆಯೋಗದ(ಎಸ್‌ಇಪಿ) ವರದಿಯ ತಿರುಳು ಸಂಕ್ಷಿಪ್ತವಾಗಿ ರಚಿಸಲು ಉನ್ನತ ಅಧಿಕಾರಿಗಳ ತಂಡ ರಚಿಸಿಸಲಾಗಿದೆ. ಇದನ್ನು ಸಚಿವ ಸಂಪುಟದಲ್ಲಿ ಇಟ್ಟು ಅನುಮೋದನೆ ಪಡೆಯುವುದಾಗಿ ಡಾ.ಎಂ.ಸಿ.ಸುಧಾಕರ್ ಹೇಳಿದರು. ಎಸ್‌ಇಪಿಯ ಗಾತ್ರದ ವರದಿಯನ್ನು ನೀಡಿದೆ. ಸಂಕ್ಷಿಪ್ತ ಸರಳವಾಗಿ ವರದಿ ರಚಿಸಲು ಪ್ರತ್ಯೇಕವಾಗಿ ಉನ್ನತ ಶಿಕ್ಷಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ತಂಡ ನೀಡುವ ವರದಿಯನ್ನು ಸಚಿವ ಸಂಪುಟದ ಗಮನಕ್ಕೆ ತರಲಾಗುತ್ತದೆ. ಎಸ್‌ಇಪಿ ನೀಡಿದ ಮಧ್ಯಂತರ ವರದಿ ಆಧಾರದ ಮೇಲೆ ಪದವಿ ತರಗತಿಗಳನ್ನು ನಡೆಸಲಾಗುತ್ತಿದೆ. ರಾಜ್ಯದಲ್ಲಿ ಎಸ್‌ಇಪಿ ಜಾರಿಯಾಗಿಲ್ಲ ಎನ್ನುವಂತಿಲ್ಲ. ಪೂರ್ಣಪ್ರಮಾಣದಲ್ಲಿ ಅನುಷ್ಠಾನ ಮಾಡುವುದಕ್ಕೆ ಸಮಯದ ಅವಶ್ಯಕತೆ ಇದೆ ಎಂದರು.