ಆತ ಮಸೀದಿಯಲ್ಲಿ ಪ್ರಾರ್ಥನಾ ಗುರು. ವಾರದ ಹಿಂದೆ ಮದುವೆಯಾದ. ವಿವಾಹ ಸಮಾರಂಭ ತುಂಬ ಅದ್ಧೂರಿಯಾಗಿ, ಸಾಂಪ್ರದಾಯಿಕವಾಗಿ ನಡೆಯಿತು..ಆದರೆ ಅದರ ಸಂತೋಷ ತುಂಬ ದಿನ ಉಳಿಯಲಿಲ್ಲ, ಆತನಿಗೆ ಬಹುದೊಡ್ಡ ಶಾಕ್ ಕಾದಿತ್ತು..! ಇದೊಂದು ವಿಚಿತ್ರ ನಡೆದಿದ್ದು ಉಗಾಂಡಾದಲ್ಲಿ
ಒಂದು ವಾರವಾಗುತ್ತ ಬಂದರೂ ಪತ್ನಿ ತನ್ನ ಮೈಮುಟ್ಟಲು ಮೊಹಮ್ಮದ್ ಮುತುಂಬಾಗೆ ಬಿಡಲಿಲ್ಲ. ನಾನೀಗ ಋತುಮತಿಯಾಗಿದ್ದೇನೆ. ಸ್ವಲ್ಪ ಸಮಯ ಬೇಕು ಎಂದು ಹೇಳಿದ್ದಳು. ಹಾಗಾಗಿ ಮುತುಂಬಾ ಕೂಡ ಕಾದಿದ್ದರು.
ಆಮೇಲೇನಾಯಿತು...ಎಂಬ ಬಗ್ಗೆ ಮುತುಂಬಾ ಅವರೇ ಮಾಧ್ಯಮಗಳಿಗೆ ಪೂರ್ಣ ವಿವರಣೆ ನೀಡಿದ್ದಾರೆ. ಪತ್ನಿ ಸಮಯ ಕೇಳಿದಾಗ ನಾನು ಸರಿ ಎಂದೆ. ತಾಳ್ಮೆಯಿಂದ ಕಾಯುತ್ತಿದ್ದೆ. ಆದರೆ ಪಕ್ಕದ ಮನೆಯವನು ಬಂದು ನನ್ನ ಬಳಿ ಒಂದು ದೂರು ಕೊಟ್ಟ. ನಿಮ್ಮ ಪತ್ನಿ ನಮ್ಮ ಮನೆಯ ಗೋಡೆಯನ್ನು ಹಾರಿ ನಮ್ಮ ಮನೆಗೆ ಬಂದು ಟಿವಿ ಸೆಟ್ ಮತ್ತು ಬಟ್ಟೆಗಳನ್ನು ಕದ್ದರು ಎಂದು ಹೇಳಿದ. ಅಷ್ಟೇ ಅಲ್ಲದೆ, ಆಕೆ ಮಹಿಳೆ ಅಲ್ಲ, ಪುರುಷ ಎಂದೂ ಪ್ರತಿಪಾದಿಸಿದ. ಸೀದಾ ಹೋಗಿ ಪೊಲೀಸರಿಗೆ ದೂರು ನೀಡಿದ ಎಂದು ತಿಳಿಸಿದರು.
ಪೊಲೀಸರ ಸೂಚನೆಯ ಮೇರೆಗೆ ನಾನು ಮತ್ತು ನನ್ನ ಪತ್ನಿ ಠಾಣೆಗೆ ಹೋದೆವು. ಆಕೆ ಮಹಿಳೆಯರ ಇಸ್ಲಾಮಿಕ್ ಬಟ್ಟೆ ಮತ್ತು ಚಪ್ಪಲಿಗಳನ್ನು ಧರಿಸಿದ್ದಳು. ಆದರೆ ನೆರೆಮನೆಯಾತ ಆಕೆ ಮಹಿಳೆಯೇ ಅಲ್ಲ ಎಂದು ಹೇಳಿದ್ದರಿಂದ ಪೊಲೀಸರು ಪರಿಶೀಲನೆ ನಡೆಸುವುದು ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಪೊಲೀಸ್ ಅಧಿಕಾರಿಯೋರ್ವರು ಮಾಧ್ಯಮಗಳಿಗೆ ಮಾಹಿತಿ ನೀಡಿ, ದೂರಿನ ಅನ್ವಯ ಮಹಿಳಾ ಪೊಲೀಸ್ ಅಧಿಕಾರಿಯೋರ್ವರು ಮಹಿಳೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರು. ಆಗ ನಿಜಕ್ಕೂ ಶಾಕ್ ಕಾದಿತ್ತು. ಮಹಿಳೆ ಅಲ್ಲ, ಪುರುಷ ಎಂಬುದು ಬಯಲಾಯಿತು. ತಾವು ಹೆಣ್ಣಿನಂತೆ ಕಾಣಿಸಬೇಕು ಎಂದು ಬ್ರಾ ಒಳಗೆ ಬಟ್ಟೆಗಳನ್ನು ತುಂಬಿ ಸ್ತನದಂತೆ ಹಾಕಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಜನನಾಂಗ ಕೂಡ ಪುರುಷರದ್ದೇ ಇದೆ. ಇಷ್ಟೆಲ್ಲ ಮಾಡಿ ಯಾಕೆ ಮದುವೆ ಮಾಡಿಕೊಂಡಿರಿ ಎಂದು ತೀವ್ರವಾಗಿ ವಿಚಾರಣೆ ನಡೆಸಿದ ಬಳಿಕ ಅವರೂ ಒಪ್ಪಿಕೊಂಡರು. ಮಸೀದಿಯ ಪ್ರಾರ್ಥನಾ ಗುರು ಮುತಾಂಬಾ ಬಳಿ ಇದ್ದ ಹಣಕ್ಕಾಗಿ ಇಷ್ಟು ನಾಟಕ ಆಡಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಷ್ಟಕ್ಕೂ ತಾನು ಎಲ್ಲಿ ಮೋಸ ಹೋದೆ ಎಂಬ ಬಗ್ಗೆ ಮುತಾಂಬಾ ಹೇಳಿದ್ದಾರೆ. ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದೆ. ಅದೇ ಸಮಯದಲ್ಲಿ ಇವರನ್ನು ನೋಡಿದೆ. ಹಿಜಾಬ್ ಧರಿಸಿ ಮಸೀದಿಗೆ ಬಂದಿದ್ದರು. ಹೋಗಿ ಮದುವೆಯ ಪ್ರಸ್ತಾಪ ಇಟ್ಟೆ. ಅವರೂ ಒಪ್ಪಿಕೊಂಡರು.
ನಾನು ಆಕೆಯ ಪಾಲಕರಿಂದ ವಧುದಕ್ಷಿಣೆ ತೆಗೆದುಕೊಳ್ಳುವವರೆಗೆ ಮತ್ತು ಅಧಿಕೃತವಾಗಿ ಮದುವೆಯಾಗುವವರೆಗೂ ಲೈಂಗಿಕ ಕ್ರಿಯೆಗೆ ಒತ್ತಾಯಿಸಬಾರದು ಎಂದು ಅವತ್ತೇ ನನ್ನಿಂದ ವಚನ ತೆಗೆದುಕೊಂಡಿದ್ದರು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)