- ಜಮ್ಮು-ಕಾಶ್ಮೀರ ಭಾಗದಲ್ಲಿ ಹೆಚ್ಚಿನ ಭದ್ರತೆ ಮತ್ತು ಕಟ್ಟೆಚ್ಚರ ಅವಶ್ಯ
- ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಇದರತ್ತಲೂ ಗಮನ ಇರಲೇ ಬೇಕು.
- ಒಡಿಶಾದಲ್ಲಿ ವಿಪರೀತಿ ಮಳೆಯಾಗಿ ಹೆಚ್ಚು ನಷ್ಟಕ್ಕೆ ಒಳಗಾಗುತ್ತಾರೆ. ಕರ್ನಾಟಕದ ಕರಾವಳಿ ಭಾಗದಲ್ಲೂ ಭಾರಿ ಮಳೆಯಿಂದ ಹಾನಿಯಾಗುತ್ತದೆ.
- ಮಹಾರಾಷ್ಟ್ರದಲ್ಲಿ ಮಳೆ ಮತ್ತು ಚಂಡಮಾರುತದಿಂದ, ಜನರ ಕ್ಷೇಮಕ್ಕೆ ಹಾನಿಯಾಗುತ್ತದೆ ಹಾಗೂ ಸರ್ಕಾರವು ಅಸ್ಥಿರವಾಗುವ ಲಕ್ಷಣವು ಕಾಣುತ್ತದೆ.
ಬೆಂಗಳೂರು: ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗಿನ ರಾಜಕೀಯ, ಸಾಮಾಜಿಕ, ಆರ್ಥಿಕ ಮುಂತಾದ ಕ್ಷೇತ್ರಗಳಲ್ಲಿ ಏನೇನು ಬದಲಾವಣೆಗಳಾಗಲಿವೆ, ಕಳೆದ ಸಂವತ್ಸರಕ್ಕಿಂತ ಇದು ಹೇಗೆ ಭಿನ್ನವಾಗಿ ಇರಲಿದೆ, ಮಳೆ-ಬೆಳೆ ಪರಿಸ್ಥಿತಿ ಹೇಗಿರುತ್ತದೆ, ಯಾವ ರಾಷ್ಟ್ರಗಳ ಉಪಟಳ ಹೆಚ್ಚಲಿದೆ ಮುಂತಾದ ವಿಷಯಗಳ ಮುನ್ನೋಟ ಇಲ್ಲಿದೆ ನೋಡಿ.
ಸನಾತನ ಧರ್ಮದ ಉದ್ಧಾರಕರಾದ ಆದಿ ಶಂಕರಾಚಾರ್ಯರು ಮತ್ತು ಅವರು ಸ್ಥಾಪಿಸಿದ ಚತುರಾಮ್ನಾಯ ಪೀಠಗಳಿಗೆ ಹಾಗೂ ದೇಶದ ಎಲ್ಲ ಗುರುಪೀಠಗಳಿಗೆ ನಮಸ್ಕರಿಸಿ, ಚತುರಾಮ್ನಾಯ ಪೀಠಗಳಲ್ಲಿ ಜ್ಞಾನಪೀಠವಾದ ಶಾರದಾ ಪೀಠದ ಗುರುಗಳಾದ ಮಹಾಸನ್ನಿಧಾನ ಶ್ರೀ ಭಾರತೀ ತೀರ್ಥ ಸ್ವಾಮೀಜಿ, ಸನ್ನಿಧಾನ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳಿಗೆ ನಮಸ್ಕರಿಸಿ, ನಮ್ಮ ಆರಾಧ್ಯ ದೇವರಾದ ಸುಬ್ರಹ್ಮಣ್ಯ ದೇವರು ಮತ್ತು ಮೈಲಾರಲಿಂಗೇಶ್ವರನ ಕೃಪೆಯಿಂದ ದೇಶವು ಸುರಕ್ಷಿತವಾಗಿ ಇರಲಿ ಎಂದು ಪ್ರಾರ್ಥಿಸುತ್ತ, ಹೊಸ ಸಂವತ್ಸರದ ಆಗುಹೋಗುಗಳನ್ನು ಗಮನಿಸೋಣ.
ಪರಾಭವ ನಾಮ ಸಂವತ್ಸರ 2026ರ ಮಾರ್ಚ್ 19ರಂದು ಆರಂಭವಾಗಿ 2027ರ ಏಪ್ರಿಲ್ 6ರವರೆಗೂ ಇರಲಿದೆ. ಈ ವರ್ಷ ಮಾರ್ಚ್ 19ರಂದು ಬೆಳಗ್ಗೆ 6.54ರವರೆಗೆ ಅಮಾವಾಸ್ಯೆ ಇದ್ದು, ಆ ಬಳಿಕ ಪಾಡ್ಯ ಆರಂಭವಾಗಿ, ಪಂಚಾಂಗರೀತ್ಯ ಅಂದೇ ಯುಗಾದಿ ಎಂದು ನಿರ್ಣಯಕಾರರು ಬರೆದಿದ್ದಾರೆ. ದಕ್ಷಿಣ ಭಾರತದಲ್ಲಿ ಯುಗಾದಿಗೆ ಹಳ ಮಹತ್ವವಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ಯುಗಾದಿಯನ್ನು ಆಚರಿಸುತ್ತಾರೆ. ಅಂದ ಹಾಗೆ, ಯುಗಾದಿ ಎಂದರೇನು? ಯುಗದ ಆರಂಭವೇ ಯುಗಾದಿ. ಆದಿ ಎಂದರೆ ಪ್ರಾರಂಭ. ಎಷ್ಟೋ ಯುಗ ಕಳೆದಿದ್ದೇವೆ. ಮೇಷ ರಾಶಿಯಲ್ಲಿ ಸಂಕ್ರಮಣ ಬಂದಾಗ ಸೌರ ಯುಗಾದಿಯಾಗುತ್ತದೆ. ಮಾರ್ಚ್ 19ರಂದು ಚಾಂದ್ರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. 60 ಸಂವತ್ಸರಗಳಿದ್ದು, ಇದು 40ನೇ ಸಂವತ್ಸರ.
ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ
ಎಂದು ಹೇಳುತ್ತ, ಜೀವನದಲ್ಲಿ ಕಹಿ ಬಂದರೂ ಸ್ವೀಕರಿಸೋಣ, ಸಿಹಿ ಬಂದರೂ ಸ್ವೀಕರಿಸೋಣ. ನೋವು ಬಂದರೂ ಸ್ವೀಕರಿಸೋಣ. ಸಂತೋಷ ಬಂದರೂ ಸ್ವೀಕರಿಸೋಣ. ಈ ಸಂವತ್ಸರದ ನಾಯಕ ಗುರುವೇ ಆಗಿದ್ದಾನೆ. ಜಗತ್ತಿಗೆ ಮಾರ್ಗದರ್ಶನ ಮಾಡುವ ಗುರುವೇ ನಾಯಕನಾಗಿರುವುದರಿಂದ ಅವನೇ ಎಲ್ಲ ಭವಿಷ್ಯ ತೀರ್ಮಾನಿಸುತ್ತಾನೆ. ಈ ಸಂವತ್ಸರದ ವೈಶಿಷ್ಟ್ಯವೆಂದರೆ ಯುಗಾದಿ ಗುರುವಾರವೇ ಬಂದಿರುವುದರಿಂದ, ಗುರುವೇ ಅಧಿಪತಿಯಾಗಿ, ಗುರುವೇ ರಾಜನಾಗಿರುತ್ತಾನೆ. ಎಲ್ಲರಿಗೂ, ನೋವನ್ನು ತಡೆದುಕೊಂಡ ಪ್ರಜೆಗಳಿಗೂ ಒಂದೇ ದಾರಿ- ಇಡೀ ಸಂವತ್ಸರದಲ್ಲಿ ಗುರುವನ್ನು ಧ್ಯಾನಿಸಿ, ಗುರುವನ್ನು ಪೂಜಿಸಿ. ಗುರುಕೃಪೆಯೊಂದಾದರೆ ಗುರಿಯನ್ನು ಮುಟ್ಟುವುದು, ಸೂರ್ಯ-ಚಂದ್ರರು ಬೆಳಕು ನೀಡುವಷ್ಟೇ ಸತ್ಯವಾದುದು.
ವಂಶಪಾರಂಪರ್ಯವಾಗಿ ಬಂದ ಗುರುಮಠವನ್ನು, ಗುರುವನ್ನು ಅಥವಾ ಮಾರ್ಗದರ್ಶನ ಮಾಡಿದ ಗುರುವನ್ನು ಮನಸಾ ಧ್ಯಾನಿಸಿ, ಪೂಜಿಸಿದರೆ ಗುರುವು ನಿಮ್ಮ ಇಷ್ಟಾರ್ಥ ನೆರವೇರಿಸುವನು.
ಜನ್ಮ ನೀಡಿದ ತಂದೆ-ತಾಯಿ ಗುರುಸಾರ್ವಭೌಮರು. ತಂದೆ-ತಾಯಿಯನ್ನು ಗುರು ಸ್ವರೂಪದಲ್ಲಿ ಪೂಜಿಸಿದರೆ, ಗೌರವಿಸಿದರೆ ನಿಮಗೆ ಯಾವ ಗ್ರಹವೂ ಬಾಧಿಸುವುದಿಲ್ಲ. ನಿಮ್ಮ ಜೀವನವು ಅತ್ಯುತ್ತಮವಾಗಿ ನಡೆಯುತ್ತದೆ. ಈ ಗುರು ಸಂವತ್ಸರದಲ್ಲಿ ಭಾರತೀಯರೆಲ್ಲರೂ ಪ್ರಾತಃಕಾಲದಲ್ಲಿ, ಮಧ್ಯಾಹ್ನ ಕಾಲದಲ್ಲಿ, ಪ್ರದೋಷ ಕಾಲದಲ್ಲಿ ಹತ್ತು ನಿಮಿಷವಾದರೂ, ಗುರು ಪೂಜೆ ಮಾಡಿ, ಧ್ಯಾನಾಸಕ್ತರಾದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ಮಾಡುವ ಕೆಲಸದಲ್ಲಿ ಜಯವನ್ನು ಕಂಡುಕೊಳ್ಳಬಹುದು. ಗುರುವಿನ ಸಂಪರ್ಕ ದೇಶಕ್ಕೆ ಬಂದಾಗ ಜನರಿಗೆ ಸದ್ಭುದ್ಧಿಯು, ವಿದ್ಯೆಯಿಂದ ಕೂಡಿದ ಬುದ್ಧಿಯು, ದೇಶಪ್ರೇಮಿಗಳಾಗಿಯೂ, ಕಲಹಗಳನ್ನು ಮಾಡದೆ ಶಾಂತಿಯನ್ನು ವೃದ್ಧಿಸಿಕೊಳ್ಳುವ ಕಾಲ ಹತ್ತಿರದಲ್ಲೇ ಇದೆ. ಗುರುವಿನ ರೂಪದಲ್ಲಿ ದತ್ತಾತ್ರೇಯನನ್ನು ಆರಾಧಿಸಿ. ಮುಖ್ಯವಾಗಿ, ಗುರುದ್ರೋಹ ಎಸಗಬೇಡಿ. ಗುರುವಿನಲ್ಲಿ ಲೋಪ ಹುಡುಕುವುದು, ಗುರುಗಳ ನಿಂದನೆ ಮಾಡುವುದು, ಗುರುಗಳ ಉಪಕಾರ ಸ್ಮರಣೆ ಮಾಡದಿರುವುದು ಅತ್ಯಂತ ಹೀನಕೃತ್ಯ ಎಂದು ಶಾಸಗಳೇ ಹೇಳಿವೆ.
ಈ ಸಂವತ್ಸರದಲ್ಲಿ ಗುರುವೇ ಅಧಿದೇವತೆ ಆಗಿರುವುದರಿಂದ, ಖಂಡಿತವಾಗಿಯೂ ಕಳೆದ ಸಂವತ್ಸರದಲ್ಲಿ ಪ್ರಜೆಗಳು ಅನುಭವಿಸಿದ ಕಷ್ಟ ಈ ಬಾರಿ ಇರದು. ಆಹಾರದ ಕೊರತೆ, ಮಳೆಯ ಕೊರತೆ ಇರುವುದಿಲ್ಲ. ಬೇಳೆ ಕಾಳು, ಕಡಲೆ ಸೇರಿ ಧಾನ್ಯ ಉತ್ಪಾದನೆ ತುಂ ಚೆನ್ನಾಗಿರುತ್ತದೆ. ಈ ಸಂವತ್ಸರದಲ್ಲಿ ಗುರುವು ಮಿಥುನ ರಾಶಿಯಲ್ಲಿದ್ದು, ಶನಿ ಮೀನ ರಾಶಿಯಲ್ಲಿದ್ದಾನೆ. ರಾಹು-ಕೇತುಗಳು ಕ್ರಮವಾಗಿ ಕುಂಭ-ಸಿಂಹ ರಾಶಿಯಲ್ಲಿದ್ದು, ಧರ್ಮ-ಕರ್ಮಗಳ ಆಧಾರದ ಮೇಲೆ ಫಲ ನೀಡುತ್ತವೆ. ಗುರು ಮತ್ತು ಶನಿಯ ಚಲನವಲನಗಳೇ ಮನುಷ್ಯರ ಕರ್ಮಾನುಸಾರವಾಗಿ ಸೂಚನೆ ನೀಡುತ್ತವೆ. ಈ ಭರತ ಖಂಡವು ತಪೋಭೂಮಿ. ಸನಾತನಧರ್ಮವನ್ನು ಮನುಷ್ಯರ ಅಭಿವೃದ್ಧಿಗಾಗಿ ಅನ್ವಯಿಸಬೇಕು. ಧರ್ಮದ ಆಳವನ್ನು ತಿಳಿಸಿ, ಯಾವ ಕಾರ್ಯ ಮಾಡಬೇಕು, ಯಾವ ಕಾರ್ಯವನ್ನು ಮಾಡಬಾರದು ಎಂಬ ವಿವೇಚನೆಯನ್ನು ಸನಾತನ ಧರ್ಮ ತಿಳಿಸುತ್ತದೆ ಮತ್ತು ಧರ್ಮಕ್ಕೆ ಹಾನಿ ಮಾಡಿದರೆ ನಮ್ಮ ಕೈಯನ್ನು ನಾವು ಬೆಂಕಿಯಲ್ಲಿ ಇಟ್ಟಂತೆ. ಎಲ್ಲರೂ ಅವರವರ ಧರ್ಮಗಳನ್ನು ಪಾಲಿಸಿ, ಅನುಸರಿಸಿದರೆ ನ್ಯಾಯದ ಮಾರ್ಗದಲ್ಲಿ ನಡೆಯಬಹುದು.
ರಾಷ್ಟ್ರವನ್ನು ಆಳುವವರು, ರಾಜ್ಯವನ್ನು ಆಳುವವರು ಪ್ರಜಾಧರ್ಮವನ್ನು ಬಿಟ್ಟು ಅವರವರ ಸ್ವಾರ್ಥಕ್ಕಾಗಿಯೇ ದೇಶವನ್ನು ನಡೆಸಿದ್ದಾರೆ ಎಂದರೆ ತಪ್ಪಾಗಲಾರದು. ರಾಜ್ಯ, ರಾಷ್ಟ್ರವನ್ನು ಆಳುವವರು ಗುರುವಿನಂತೆ, ಜನ್ಮ ನೀಡಿದ ತಂದೆಯಂತೆ ಕಾರ್ಯನಿರ್ವಹಿಸುವುದು ಅನಿವಾರ್ಯವಾಗುತ್ತದೆ. ತಪ್ಪು ಮಾಡಿದರೆ ಶಿವ ಕ್ಷಮಿಸಿಯಾನು, ವಿಷ್ಣು ತಿಳಿವಳಿಕೆಯನ್ನು ಕೊಟ್ಟಾನು. ಆದರೆ, ಗುರುವು ಶಿಕ್ಷೆಯನ್ನು ಕೊಡದೆ ಬಿಡುವುದೇ ಇಲ್ಲ. ಯಾರೇ ಶಿಕ್ಷೆ ಕೊಟ್ಟರೂ ಗುರುಬಲ, ಗುರುಕೃಪೆಯೊಂದಿದ್ದರೆ ಅಂಥ ವ್ಯಕ್ತಿಯನ್ನು ಏನೂ ಮಾಡಲು ಆಗುವುದಿಲ್ಲ ಎಂಬುದು ಈ ಸಂವತ್ಸರದ ಸಾರಾಂಶ ಎಂದು ಹೇಳಬಲ್ಲೆ.
ಈ ಸಂವತ್ಸರದ ನಾಯಕ ಗುರುವೇ ಆಗಿರುವುದರಿಂದ ಧರ್ಮವನ್ನು ತುಳಿದರೆ, ಈ ಜನ್ಮದಲ್ಲೇ ಕಷ್ಟಕಾರ್ಪಣ್ಯಗಳು ಒದಗಿಬಂದು, ಸ್ವಯಂನಾಶವಾಗುತ್ತಾನೆ ಎಂದು ಶಾಸ ಸಾರುತ್ತದೆ. ಆದ್ದರಿಂದ, ಸನಾತನ ಧರ್ಮವನ್ನು ಪವಿತ್ರವಾಗಿ ಇರಿಸಿ. ಧರ್ಮದ ಹಾದಿಯಲ್ಲೇ ದೇಶ, ರಾಜ್ಯವನ್ನು ಆಳುವವರು ನಡೆಯಬೇಕು. ಅದರಿಂದ ಅವರಿಗೆ ಹಿತ, ಪ್ರಜೆಗಳಿಗೆ ಲಾಭ. ಪರಾಭವ ಎಂದರೆ ಮನುಷ್ಯರಿಗೆ ಅಪಜಯದ ಸಂಕೇತ. ಸಂವತ್ಸರವೇ ಹೇಳುತ್ತಿದೆ, ಪರಾಭವ ಎಂದು. ಎಂದಿಗೂ ಕಂಡ, ಕೇಳರಿಯದ ತೊಂದರೆಗಳನ್ನು ನಿಗೂಢವಾಗಿ ರಾಹು-ಕೇತು ಕೊಟ್ಟು, ದೇಶಕ್ಕೆ ಆಪತ್ತು, ವಿಪತ್ತು, ನಷ್ಟುಗಳು ಉಂಟಾಗುವ ಸಂದರ್ಭಗಳು ಬರುತ್ತವೆ.
ಮಿನುಗಲಿದೆ ಭಾರತ
ಪ್ರಪಂಚದ ಉದ್ದಗಲಗಳಲ್ಲಿ ಭಾರತೀಯರು ಮಿಂಚಲಿದ್ದಾರೆ. ಜಗದಗಲ ಭಾರತೀಯರು ತಮ್ಮ ಸಾಧನೆಯಿಂದ ಗಮನ ಸೆಳೆಯಲಿದ್ದಾರೆ. ಜ್ಞಾನ-ವಿಜ್ಞಾನ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತೀಯರ ನೆರವಿಲ್ಲದೆ ಯಾವುದೇ ರಾಷ್ಟ್ರ ಉನ್ನತ ಸ್ಥಾನಕ್ಕೇರಲು ಸಾಧ್ಯವಿಲ್ಲ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ಭಾರತೀಯರು ಮತ್ತಷ್ಟು ಮುಂದುವರಿದು ದೇಶಕ್ಕೆ ಕೀರ್ತಿ ತರುವುದರಲ್ಲಿ ಸಂದೇಹವಿಲ್ಲ. ಕ್ರೀಡೆಯಲ್ಲಿ ವಿಶೇಷವಾಗಿ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಲಿದ್ದಾರೆ. ಬಾಹ್ಯಾಕಾಶ ರಂಗದಲ್ಲೂ ಸಾಧನೆ ಸಾಕಾರಗೊಳ್ಳಲಿದೆ.
ಭಾರತಕ್ಕೆ ಹಾನಿ ಮಾಡಲು ಸಾಧ್ಯವಿಲ್ಲ
ಭಾರತದ ವಿರುದ್ಧ ಹಲವು ರಾಷ್ಟ್ರಗಳು ಷಡ್ಯಂತ್ರ ನಡೆಸುತ್ತಲೇ ಇರುತ್ತವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅಲ್ಲದೆ ಬ್ರಿಟನ್, ಅಪ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಯಾವುದೇ ರಾಷ್ಟ್ರಗಳು ಈ ಸಂವತ್ಸರದಲ್ಲಿ ಭಾರತಕ್ಕೆ ಹಾನಿ ಮಾಡಲು ಸಾಧ್ಯವಿಲ್ಲ. ಗುರುವು ಉಚ್ಚರಾಶಿಯಲ್ಲಿದ್ದು, ಭಾರತದ ಮೇಲೆ ಯಾರೇ ಕೆಟ್ಟದೃಷ್ಟಿಯನ್ನು ಇಟ್ಟರೆ ಅವರಿಗೆ ತೊಂದರೆಯು ಬಂದು, ಅವರ ನಾಶಕ್ಕೆ ಅವರೇ ಕಾರಣರಾಗುತ್ತಾರೆ.
ಆತಂಕಗಳು
- ಇಡೀ ರಾಷ್ಟ್ರದಲ್ಲಿ ಅಂತರ್ಜಲ ಕಡಿಮೆ ಆಗುವ ದಟ್ಟ ಸಾಧ್ಯತೆ ಇದ್ದು, ಅಂತರ್ಜಲ ರಕ್ಷಣೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು.
- ಬಿಸಿಲಿನ ಬೇಗೆ ಹೆಚ್ಚಲಿದೆ. ಅತಿಯಾದ ಬಿಸಿಲು ಮತ್ತು ಅತಿಯಾದ ಮಳೆ ದೇಶಕ್ಕೆ ಹಾನಿ ಮಾಡಲಿದೆ. ಅಲ್ಲದೆ, ಶ್ವಾಸಕೋಶಕ್ಕೆ ಸಂಬಂಧಿಸಿದ ಸೋಂಕು ಬರುವ ಸಾಧ್ಯತೆ ಇದೆ. ಆದ್ದರಿಂದ, ಆರೋಗ್ಯ ಕ್ಷೇತ್ರದ ಕಡೆಗೆ ಸರ್ಕಾರದವರು ನಿಗಾ ಇಟ್ಟಿರಬೇಕು.
- ಪ್ರಾಣಿ, ಪಕ್ಷಿಗಳಿಗೆ, ವನ್ಯಮೃಗಗಳಿಗೆ ಕಷ್ಟಕಾಲ. ಅರಣ್ಯ ಒತ್ತುವರಿ ಹೆಚ್ಚಾಗುತ್ತದೆ. ಆದ್ದರಿಂದ, ಅರಣ್ಯಗಳ ರಕ್ಷಣೆಗೆ ಭಾರತ ಸರ್ಕಾರ ಹೊಸ ಕಾನೂನು ರೂಪಿಸದಿದ್ದರೆ ಭವಿಷ್ಯ ಕಷ್ಟಕರ.
- ಅರಬ್ಬಿ ಸಮುದ್ರ ಬಂಗಾಳದಲ್ಲಿ ಉಕ್ಕಿ ಹರಿದು, ಹಾನಿಯಾಗುವ ಸಾಧ್ಯತೆ ಇದೆ.
- ಈ ಸಂವತ್ಸರದಲ್ಲಿ ದೊಡ್ಡ ವ್ಯಕ್ತಿಯು ಮರೆಯಾಗುವ ಸಂಭವ ಇದೆ.
ಆದ್ಯತೆ ಇರಲಿ
- ಗುರು ಕರ್ಕಾಟಕಕ್ಕೆ ಬಂದಾಗ ಭೂಸೇನೆ, ವಾಯುಸೇನೆ, ಹಾಗೂ ನೌಕಾಸೇನೆ- ಈ ಮೂರೂ ವಿಭಾಗಗಳೂ, ಇದರ ಮುಖ್ಯಸ್ಥರೂ ಸಮನ್ವಯದಿಂದ ಕೆಲಸ ಮಾಡಿದರೆ, ದೇಶಕ್ಕೆ ಹೆಚ್ಚು ಲಾಭವಾಗುತ್ತದೆ.
- ಗುರು ಧರ್ಮ ಸಂರಕ್ಷಕ. ಹಾಗಾಗಿ, ನ್ಯಾಯ ಹೇಳುವ ನ್ಯಾಯಾಧೀಶರು ಮತ್ತು ವೈದ್ಯರು ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಯಾರು ಕೂಡ ನ್ಯಾಯಾಂಗ ಮತ್ತು ಆರ್ಥಿಕ ನೀತಿಗಳಲ್ಲಿ ಹಸ್ತಕ್ಷೇಪ ಮಾಡಬಾರದು, ಗುಪ್ತಚರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು.
- ಭಾರತದಲ್ಲಿ ಮತದಾನವನ್ನು ಕಡ್ಡಾಯಗೊಳಿಸಬೇಕು. ಆ ಬಳಿಕ ಹಂತ-ಹಂತವಾಗಿ ‘ಒಂದು ದೇಶ ಒಂದು ಚುನಾವಣೆ’ಯನ್ನು ಜಾರಿಗೆ ತರುವುದು ಸೂಕ್ತ. ಮತದಾನ ಕಡ್ಡಾಯ ಮಾಡಿದ್ದಲ್ಲಿ ಈಗಿನ ಸರ್ಕಾರ ನಿಜಾರ್ಥದಲ್ಲಿ ಜನಪರವಾದ ಕೆಲಸ ಮಾಡಿದಂತಾಗುತ್ತದೆ.
- ರಾಜ್ಯಗಳಲ್ಲಿ ಅಶಾಂತಿ ಉಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಭಾಯಿಸಬೇಕಿದೆ. ರಾಷ್ಟ್ರವನ್ನು ಕಾಪಾಡುವುದೇ ಮೊದಲ ಆದ್ಯತೆಯಾಗಬೇಕಾಗಿದೆ.
- ರಾಹು, ಕೇತುಗಳು ಕ್ರಮವಾಗಿ ಸಿಂಹ ಮತ್ತು ಕುಂಭ ರಾಶಿಯಲ್ಲಿ ಇರುವುದರಿಂದ ಭಾರತ ತನ್ನ ಸೇನಾ ಬಲವನ್ನು ಹೆಚ್ಚಿಸಿಕೊಳ್ಳಬೇಕು. ಯೋಧರಿಗೆ ಸೌಲಭ್ಯಗಳನ್ನು ಹೆಚ್ಚಿಸಿ, ಕಾಪಾಡುವುದು ಮನುಷ್ಯಧರ್ಮವೂ ಹೌದು, ರಾಷ್ಟ್ರಧರ್ಮವೂ ಹೌದು.
ರೈತರ ಹಿತ ಕಾಪಾಡಿ
ದೇಶದಲ್ಲಿ ಮಳೆ ಚೆನ್ನಾಗಿಯಾದರೆ ಮಾತ್ರ, ಬೆಳೆ ಉತ್ತಮವಾಗಿ ಬಂದು ರೈತರು ಸಂತೋಷ ಪಡುತ್ತಾರೆ. ಇಂಥ ರೈತರ ಬಾಳನ್ನು ಸರಿಪಡಿಸದಿದ್ದಲ್ಲಿ, ರೈತರೆಲ್ಲ ಒಟ್ಟುಗೂಡಿ ದೇಶದಲ್ಲಿ ಆಂದೋಲನ ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ರೈತರ ಜತೆ ಕುಳಿತು ಮಾತನಾಡಿ, ಅವರ ಯೋಗಕ್ಷೇಮ ಕಾಪಾಡಲು ಮುಂದಾದರೆ ಮಾತ್ರವೇ, ರೈತರು ಆಹಾರಧಾನ್ಯ ಬೆಳೆಯುವಲ್ಲಿ ವಿಕ್ರಮ ಸಾಧಿಸಬಲ್ಲರು.
ಉದ್ಯೋಗ ಸೃಷ್ಟಿಯಾಗಲಿ
ದೇಶದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಮತ್ತು ಉದ್ಯೋಗಸೃಷ್ಟಿ ನಿಟ್ಟಿನಲ್ಲಿ ಆಳುಗರು ಪರಿಣಾಮಕಾರಿ ಪ್ರಯತ್ನಗಳನ್ನು ಕೈಗೊಳ್ಳಬೇಕು. ಉದ್ಯೋಗಸೃಷ್ಟಿ ಆಗದಿದ್ದರೆ ವಿದ್ಯಾವಂತರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ದೇಶದಲ್ಲಿ ಕೆಲವೊಂದು ರಾಜ್ಯಗಳು ತಮ್ಮದೇ ಆದ ನಿರ್ಣಯವನ್ನು ತೆಗೆದುಕೊಂಡು, ಉದ್ಧಟತನದಿಂದ ವರ್ತನೆ ಮಾಡುವವರನ್ನು ಗುರುವೇ ಪಾಠ ಕಲಿಸುತ್ತಾನೆ.
ಅಂತಾರಾಷ್ಟ್ರೀಯ ಆಗುಹೋಗು
ಅಮೆರಿಕ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರಿ ಮುಟ್ಟುವುದು ಸಾಧ್ಯವಿಲ್ಲದ ಮಾತು. ಆರ್ಥಿಕವಾಗಿ ಅಮೆರಿಕದವರು ಹಿಂದೆ ಬಿದ್ದು, ಜ್ಞಾನ-ವಿಜ್ಞಾನಗಳಲ್ಲೂ ಸಾಧನೆ ಮಾಡಲಾಗದೆ, ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಲರಾಗುತ್ತಾರೆ. ಮುಖ್ಯವಾಗಿ, ಅಮೆರಿಕದಲ್ಲಿ ಅರಾಜಕತೆ ಹೆಚ್ಚಾಗಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗಿರುವ ಜನಬೆಂಬಲ ಕಡಿಮೆಯಾಗುವ ಸಾಧ್ಯತೆ ಇದೆ. ಅಮೆರಿಕ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದೆ. ಕೆಲವು ತೀರ್ಮಾನಗಳಿಂದ ಮತ್ತಷ್ಟು ಸಂಕಟ ಎದುರಾಗಲಿದೆ. ಆಳುವವರನ್ನು ಜನ ನಿಂದಿಸುತ್ತಾರೆ. ಟ್ರಂಪ್ ತಮ್ಮ ಆರೋಗ್ಯದ ಕಡೆಗೆ ಗಮನ ಕೊಡಬೇಕು.
- ಪಾಕಿಸ್ತಾನ ಮತ್ತು ಶ್ರೀಲಂಕಾದ ಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಎರಡೂ ರಾಷ್ಟ್ರಗಳಲ್ಲಿ ಬಡತನ ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ಈ ಎರಡು ರಾಷ್ಟ್ರಗಳ ಮೇಲೆ ಯಾವ ನಿರೀಕ್ಷೆಯೂ ಇಟ್ಟುಕೊಳ್ಳಬಾರದು.
- ಬ್ರಿಟನ್‌ನ ಒಂದು ಭಾಗ ಜಲಾವೃತವಾಗುವುದರಲ್ಲಿ ಸಂದೇಹವಿಲ್ಲ.
- ಬಾಂಗ್ಲಾದೇಶದಿಂದ ದಂಗೆಕೋರರು ಭಾರತದೊಳಗೆ ನುಸುಳಿ ಬಂದು, ದುಷ್ಕೃತ್ಯ ಎಸಗುವ ಸಾಧ್ಯತೆ ಇದ್ದು, ಬೇಹುಗಾರಿಕೆಯಿಂದ ಶ್ರಮಪಟ್ಟು, ಭಾರತ ರಾಷ್ಟ್ರವನ್ನು ಕಾಪಾಡಿಕೊಳ್ಳಬೇಕು.
- ಬಾಂಗ್ಲಾದೇಶದಲ್ಲಿ ಕಳೆದ ತಿಂಗಳಷ್ಟೇ ಚುನಾವಣೆ ನಡೆದಿದೆ. ಬಾಂಗ್ಲಾದೇಶವನ್ನು ನಿರ್ಮಿಸಿದವರೇ ಭಾರತೀಯರು. ಆದರೆ, ಅವರು ಕೃತಜ್ಞರಾಗಿ ಇರದೆ ಮೊಂಡುತನ ಹಾಗೂ ಗರ್ವದಿಂದ ವರ್ತಿಸಿ ತೊಂದರೆಗೀಡಾಗುತ್ತಾರೆ.
- ಶ್ರೀಲಂಕಾ, ನೇಪಾಳ ಕೂಡ ಭಾರತದೊಂದಿಗೆ ಸ್ನೇಹದಿಂದ ಇದ್ದರೆ ಆ ರಾಷ್ಟ್ರಗಳಿಗೆ ಶಾಂತಿ, ನೆಮ್ಮದಿ, ಸಂತೋಷ ಸಿಗುವುದರಲ್ಲಿ ಸಂದೇಹ ಇಲ್ಲ. ನೇಪಾಳ ರಾಷ್ಟ್ರವು ಹಿಂದೂ ಧರ್ಮವನ್ನು ಬಿಟ್ಟು ಅನ್ಯ ಮಾರ್ಗದಲ್ಲಿ ಸಾಗಿದರೆ, ದೇಶವೇ ಉಳಿಯದು.
- ಚೀನಾದಲ್ಲಿ ಕೂಡ ಅಶಾಂತಿ ತಲೆದೋರಲಿದೆ. ಹಣದುಬ್ಬರವು ಅತಿಯಾಗಿ, ಆ ದೇಶದ ನಾಯಕರಿಗೆ ತೊಂದರೆ ಉಂಟಾಗಬಹುದು.
ಕಾಡಲಿವೆ ಪ್ರಾಕೃತಿಕ ವಿಕೋಪಗಳು
ವಿವಿಧ ಕಡೆ ಮಳೆಹಾನಿ, ಪ್ರವಾಹ, ಉಷ್ಣ ಮಾರುತ, ಬೆಂಕಿಯಿಂದ ನಾಶ, ಬೆಟ್ಟ ಕುಸಿತದಂತಹ ಘಟನೆಗಳು ಸಂಭವಿಸುತ್ತವೆ. ಉತ್ತರ ಭಾರತದಲ್ಲಿ ಸಹ ಇಂತಹ ಘಟನೆಗಳು ನಡೆಯಲಿವೆ.
ಮಳೆಬೆಳೆಗೆ ಕೊರತೆ ಇಲ್ಲ
ಕರ್ನಾಟಕ ರಾಜ್ಯದಲ್ಲಿ ಕಾವೇರಿದ ವಾತಾವರಣ ಇರಲಿದೆ. ಆದರೆ, ಮಳೆ ಬೆಳೆಗೇನೂ ಕೊರತೆ ಕಾಣಿಸುತ್ತಿಲ್ಲ. ಆದರೆ, ಕರಾವಳಿಯಲ್ಲಿ ಅಧಿಕ ಮಳೆಯಿಂದ ಬೆಳೆಗೆ ಹಾನಿಯಾಗುತ್ತದೆ. ರಾಜ್ಯ ಸರ್ಕಾರ ಅಸ್ಥಿರವಾಗೇ ಮುಂದುವರಿಯಲಿದೆ.
ಗುರು ಸಂಚಾರ
ಮಿಥುನ ರಾಶಿಯಲ್ಲಿ ಚಲನೆ: ಪರಾಭವ ಸಂವತ್ಸರ ಆರಂಭವಾಗುವ ಸಮಯದಲ್ಲಿ ಗುರುವು, ಮಿಥುನ ರಾಶಿಯಲ್ಲಿ ಇರುತ್ತಾನೆ. 2026ರ ಜೂನ್ 2ರವರೆಗೆ ಗುರು ಮಿಥುನ ರಾಶಿಯಲ್ಲಿ ಇರುತ್ತಾನೆ.
ಕಟಕ ರಾಶಿಗೆ ಪ್ರವೇಶ: ಗುರುವು ತನ್ನ ಉಚ್ಚ ರಾಶಿಯಾದ ಕಟಕ ರಾಶಿಗೆ 2026ರ ಜೂನ್ 1ರಂದು ಪ್ರವೇಶಿಸಿ, ಅಕ್ಟೋಬರ್ 31ರವರೆಗೆ ಕಟಕ ರಾಶಿಯಲ್ಲಿ ಇರುತ್ತಾನೆ. ಕಟಕ ರಾಶಿಯು ಗುರುವಿಗೆ ಉಚ್ಚ ಸ್ಥಾನವಾಗಿದೆ. ಈ ಸಮಯದಲ್ಲಿ ಗುರುವು ಅತ್ಯಂತ ಬಲಿಷ್ಠನಾಗಿ ಇರುತ್ತಾನೆ. ಹಾಗಾಗಿ, ದೇಶದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ.
2026ರ ಅಕ್ಟೋಬರ್ 31 (ಶನಿವಾರ)ರಂದು ಗುರು ಸಿಂಹ ರಾಶಿಗೆ ಬರುತ್ತಾನೆ. ಅಲ್ಲಿಂದ 2027ರ ಜನವರಿ 24ರಂದು ವಕ್ರಗತಿಯಲ್ಲಿ ಮತ್ತೆ ಕರ್ಕ ರಾಶಿಗೆ ಬಂದು ಸೇರುತ್ತಾನೆ. ಈ ಸಂದರ್ಭದಲ್ಲಿ ತಪ್ಪನ್ನು ಮಾಡಲೇ ಬಾರದು. ಗುರುವೆಂದರೆ ಸರ್ವಸಂಗ ಪರಿತ್ಯಾಗ ಮಾಡಿದವನು. ಗುರುವಿಗೆ ಮಣ್ಣು ಒಂದೇ, ಬಂಗಾರವು ಒಂದೇ. ರಾಜರುಗಳು (ಆಳುಗರು) ಕೂಡ ಹೀಗೆ ತ್ಯಾಗ ಮನೋಭಾವ ಹೊಂದುವುದು ಅಗತ್ಯವಾಗುತ್ತದೆ.
ಪರಾಭದ ಸಂವತ್ಸರದ ಅಂತ್ಯದವರೆಗೆ
2026ರ ಡಿಸೆಂಬರ್ 5ರಿಂದ 2027ರ ಮಾರ್ಚ್‌ವರಗೆ ಗುರುವು ಮಿಥುನ ರಾಶಿಯಲ್ಲೇ ವಕ್ರಗತಿಯಲ್ಲಿ ಮತ್ತು ನಂತರ ಮಾರ್ಗಿ (ನೇರ ಚಲನೆ) ಆಗಿ ಮುಂದುವರಿಯುತ್ತಾನೆ. 2027ರ ೆಬ್ರವರಿ 25ರಂದು ಗುರುವು ವಕ್ರತ್ಯಾಗ ಮಾಡಿ, ನೇರ ಚಲನೆ ಆರಂಭಿಸುತ್ತಾನೆ.
ಗ್ರಹಣ ವಿಚಾರ
ಪರಾಭವ ಸಂವತ್ಸರದಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ. ಎರಡು ಬಾರಿ ಸೂರ್ಯ ಗ್ರಹಣ ಮತ್ತು ಎರಡು ಬಾರಿ ಚಂದ್ರಗ್ರಹಣ. ಈ ನಾಲ್ಕೂ ಗ್ರಹಣಗಳು ಭಾರತದಲ್ಲಿ ಗೋಚರವಾಗುವುದಿಲ್ಲ. ಆದರೆ, ಈ ಗ್ರಹಣಗಳಿಂದ ಪಾಶ್ಚಾತ್ಯ ರಾಷ್ಟ್ರಗಳು ವಿಪ್ಲವ ಎದುರಿಸಬೇಕಾಗುತ್ತದೆ.
- 2026ರ ಆಗಸ್ಟ್ 12ರಂದು ಶ್ರಾವಣ ಮಾಸದ ಅಮಾವಾಸ್ಯೆಗೆ ಸೂರ್ಯ ಗ್ರಹಣ ಸಂಭವಿಸಲಿದೆ. ಇದು ಉತ್ತರ ಧ್ರುವ, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್ ಮತ್ತು ಸ್ಪೇನ್ ದೇಶಗಳಲ್ಲಿ ಪೂರ್ಣವಾಗಿ ಕಾಣಿಸುತ್ತದೆ. ಭಾರತದಲ್ಲಿ ಗೋಚರಿಸದ ಕಾರಣ, ಆಚರಣೆ ಇರುವುದಿಲ್ಲ.
- 2026ರ ಆಗಸ್ಟ್ 28ರಂದು ಶ್ರಾವಣ ಮಾಸದ ಹುಣ್ಣಿಮೆಯಂದು ಪಾರ್ಶ್ವ ಚಂದ್ರ ಗ್ರಹಣ ಸಂಭವಿಸಲಿದೆ. ಇದು ಪ್ರಮುಖವಾಗಿ ಅಮೆರಿಕ, ಯುರೋಪ್ ಮತ್ತು ಆಫ್ರಿಕಾ ಖಂಡಗಳಲ್ಲಿ ಗೋಚರಿಸಲಿದೆ. ಭಾರತದಲ್ಲಿ ಗೋಚರವಿಲ್ಲ.
- 2027ರ ಫೆಬ್ರವರಿ 6ರಂದು, ಪುಷ್ಯ ಮಾಸದ ಅಮಾವಾಸ್ಯೆಗೆ ಸೂರ್ಯ ಗ್ರಹಣ ಸಂಭವಿಸಲಿದೆ. ಇದು ದಕ್ಷಿಣ ಅಮೆರಿಕ ಮತ್ತು ಅಂಟಾರ್ಟಿಕಾ ಭಾಗಗಳಲ್ಲಿ ಗೋಚರವಾಗಲಿದೆ.
- ಪೂರ್ಣ ಚಂದ್ರಗ್ರಹಣ: 2027ರ ೆಬ್ರವರಿ 21ರಂದು ಮಾಘ ಪೂರ್ಣಿಮೆಗೆ ಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವು ಅಮೆರಿಕ ಮತ್ತು ಯುರೋಪ್‌ನಲ್ಲಿ ಕಾಣಿಸಲಿದ್ದು, ಭಾರತದಲ್ಲಿ ಗೋಚರವಿಲ್ಲ.
ಮೋದಿ ವರ್ಚಸ್ಸು ಕುಂದದು
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಂಚಮದಲ್ಲಿ ಶನಿ ಇದ್ದರೂ ಸಹ, ಅವರನ್ನು ಏನೂ ಮಾಡಲು ಮಿತ್ರಪಕ್ಷಗಳಿಗೆ ಆಗಲಿಲ್ಲ. ಮೋದಿ ಏಕಾಂಗಿಯಾಗಿ ಹೋರಾಟವನ್ನು ನಡೆಸಿದ್ದಾರೆ. ಹೋರಾಟದಲ್ಲಿ ಸೋಲು-ಗೆಲುವು ಸ್ವಾಭಾವಿಕವೇ. ಆದರೆ, 2026ರ ಮಾರ್ಚ್ ಮತ್ತು ಏಪ್ರಿಲ್ ಈ ಎರಡು ತಿಂಗಳಲ್ಲಿ ರಾಷ್ಟ್ರದಲ್ಲಿ ಬಹಳಷ್ಟು ಅಯೋಮಯ ಹಾಗೂ ಬದಲಾವಣೆಗಳನ್ನು ಕಾಣಬಹುದು. ಹಾಗಾಗಿ, ಪ್ರಧಾನಿ ಭದ್ರತೆಯನ್ನು ಕಡೆಗಣಿಸಬಾರದು. ಶಿಷ್ಟಾಚಾರವನ್ನು ಬದಿಗಿಟ್ಟು ಅಥವಾ ಕಡಗಣಿಸಿ ಜನಸಂದಣಿಯೊಂದಿಗೆ ಬೆರೆಯಲು ಯತ್ನಿಸುವುದು ಬೇಡ.
2027ರ ಜೂನ್‌ನಲ್ಲಿ ಪಂಚಮ ಶನಿಯ ಪ್ರಭಾವವನ್ನು ದಾಟಿಬಿಟ್ಟರೆ ಪ್ರಧಾನಿ ನರೇಂದ್ರ ಮೋದಿಯವರ ವೇಗವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರೆ, 2026ರ ಮಾರ್ಚ್‌ನಿಂದ ನವೆಂಬರ್‌ವರೆಗೆ ದೇಶದಲ್ಲಿ ಅತಿಯಾದ ವಿದ್ಯಮಾನಗಳು ನಡೆದು, ಪ್ರಧಾನಿಯನ್ನು ಪದಚ್ಯುತಗೊಳಿಸುವ ಪ್ರಯತ್ನಗಳು ನಡೆಯುತ್ತವೆ. ಇರದಲ್ಲಿ ವಿದೇಶದವರ ಕೈವಾಡವೂ ಇರುತ್ತದೆ ಎಂದರೆ ತಪ್ಪಾಗಲಾರದು. ಒಟ್ಟಾರೆ, ಈ ವರ್ಷದ ಮಧ್ಯ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಆತಂಕ ಇದೆ. ಪಕ್ಷದವರೇ ಅವರಿಗೆ ವಿರೋಧಿಗಳಾಗಿ, ಅವರನ್ನು ಪದಚ್ಯುತಗೊಳಿಸಲು ಸಂಚು ಹೂಡುತ್ತಿರುತ್ತಾರೆ.
ಎಚ್ಚರಿಕೆ ಅಗತ್ಯ
- ಈ ಸಂವತ್ಸರದಲ್ಲಿ ಭಾರತದ ಉತ್ತರ ಭಾಗದಲ್ಲಿ ಮಳೆಯಿಂದ ಹಾನಿ ಸಂಭವಿಸುತ್ತದೆ. ಬೆಳೆನಷ್ಟವಾಗುತ್ತದೆ. ಚಂಡಮಾರುತವೂ, ವಿಮಾನ ಅಪಘಾತವೂ, ರೈಲ್ವೆ ದುರಂತ ನಡೆಯುವ ಸಾಧ್ಯತೆ ಇದೆ.
- ಯಾವುದೇ ಸುಳಿವು ನೀಡದೆ ಏಕಾಏಕಿಯಾಗಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದವರು ಭಾರತದ ಮೇಲೆ ಮುಗಿಬೀಳಲು ಹರಸಾಹಸ ಪಡುತ್ತಾರೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು.
- ವಿದ್ಯಾ ಕ್ಷೇತ್ರವನ್ನು ಸರಿ ಮಾಡದಿದ್ದರೆ ಭಾರತದಲ್ಲಿ ವೈದ್ಯರ ಕೊರತೆ ಗಂಭೀರ ಸಮಸ್ಯೆಯಾಗಿ ಕಾಡಲಿದೆ. ಪ್ರತಿಭೆ ಮತ್ತು ಮೆರಿಟ್‌ಗೆ ಆದ್ಯತೆ ನೀಡಬೇಕು. ವೈದ್ಯರಿಲ್ಲದ ದೇಶ ಎಂದು ಬ್ರ್ಯಾಂಡ್ ಆಗಬಾರದು.
ಚುನಾವಣೆ ರಾಜ್ಯಗಳಲ್ಲಿ ಏನಾಗಲಿದೆ?
- ಉತ್ತರ ಪ್ರದೇಶದಲ್ಲಿ 2027ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಯಾವುದೇ ಪಕ್ಷಕ್ಕೂ ಗೆಲುವು ಸುಲಭವಾಗಿಲ್ಲ.
- ತಮಿಳುನಾಡಿನಲ್ಲಿ ಇದೇ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಯಾವುದೇ ಪಕ್ಷ ಏಕಾಂಗಿಯಾಗಿ ಅಧಿಕಾರಕ್ಕೆ ಬರುವುದು ಕಷ್ಟಸಾಧ್ಯದ ಮಾತು.
- ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಲಿತಾಂಶದಿಂದ ಮಮತಾ ಬ್ಯಾನರ್ಜಿ ವಿಚಲಿತರಾಗುವ ಸಮಯ ಬರುತ್ತದೆ.
ಕರ್ನಾಟಕ
ಕರ್ನಾಟಕದಲ್ಲಿ ಕಳೆದ ಮೂರು ಸಂವತ್ಸರಗಳಿಂದ ಜನರಿಗೆ ‘ಗ್ಯಾರಂಟಿ’ ಯೋಜನೆಯೊಂದನ್ನು ಬಿಟ್ಟು, ಅಭಿವೃದ್ಧಿಯ ಇನ್ನಾವುದೇ ಗ್ಯಾರಂಟಿ ಇಲ್ಲದಂತಾಗಿದೆ. ಮನುಷ್ಯ ದುಡಿದು ತಿನ್ನಬೇಕು ಎಂಬ ಗಾದೆ ಇದೆ. ಉದ್ಯೋಗ ಸೃಷ್ಟಿ ಮಾಡಿ, ಗ್ಯಾರಂಟಿ ಯೋಜನೆಗಳನ್ನು ಕೈ ಬಿಡಬೇಕು. ರಾಜ್ಯ ಸಾಲದ ಸುಳಿಗೆ ಸಿಲುಕಿದ್ದು, 5 ಲಕ್ಷ ಕೋಟಿ ರೂ. ಸಾಲ ತೀರಿಸುವರು ಯಾರು? ಗುರು ಆಗಮನವಾಗುತ್ತಿದ್ದು, ಆರ್ಥಿಕ ಪರಿಸ್ಥಿತಿಯತ್ತ ಗಮನ ನೀಡಬೇಕಿದೆ ಎಂದು ಗ್ರಹಗಳ ಸ್ಥಿತಿಗತಿ ಆಧಾರದ ಮೇಲೆ ಹೇಳಿದ್ದೇನೆ. ರಾಜನು ಮಾಡಿದ ಒಂದೇ ಒಂದು ತಪ್ಪಿನಿಂದ ಪ್ರಜೆಗಳ ತಲೆಯ ಮೇಲೆ ಸಾಲ ಹೊರಿಸಲಾಗಿದೆ.
- ರಾಜ್ಯದಲ್ಲಿ ಸ್ಥಿರತೆ ಇಲ್ಲ. ಸ್ಥಿರತೆ ಬರಬೇಕಾದರೆ ಕೂಗು, ಗಲಾಟೆ ನಿಲ್ಲಬೇಕು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಜನರಿಗಾಗಿ ಕೆಲಸ ಮಾಡಲು ಬಂದಿದ್ದಾರೆ, ಮಾಡಿ ತೋರಿಸಬೇಕು. ನುಡಿದಂತೆ ನಡೆಯಬೇಕು.
- ರಾಜ್ಯದಲ್ಲಿ ಕೂಡ ಮುಂದಿನ ದಿನಗಳಲ್ಲಿ ಬದಲಾವಣೆಯಿಮದ ಕೂಡಿದ ಹಾಗೂ ತಮ್ಮ ತಪ್ಪನ್ನು ತಿದ್ದಿಕೊಂಡು ನಡೆಯುವ ಸಮಯವು ಗುರು ಕರ್ಕಾಟಕ ರಾಶಿಗೆ ಬಂದ ಮೇಲೆ ಬರಲಿದೆ.
ಭರವಸೆ ಈಡೇರಿಸಿ
ಪ್ರಧಾನಮಂತ್ರಿ, ವಿತ್ತ ಸಚಿವರು ಚುನಾವಣೆಯ ಮುನ್ನ ಪ್ರಣಾಳಿಕೆಯ ಮೂಲಕ ನೀಡಿದ ಆಶ್ವಾಸನೆಗಳನ್ನು ಈಡೇರಿಸಬೇಕು. ನೂತನ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ರೈತರಿಗೆ, ಯೋಧರಿಗೆ ಹೆಚ್ಚು ಲಾಭವನ್ನು ತರುವ ಮಾರ್ಗದಲ್ಲಿ ಕೆಲಸ ಮಾಡಬೇಕು.
ಚಿನ್ನದ ಬೆಲೆ ಇಳಿಕೆ
ಬಂಗಾರ-ಬೆಳ್ಳಿ ಬೆಲೆ ಇಳಿಯುತ್ತದೆ. ಭೂಮಿಯ ಬೆಲೆಯೂ ಕಡಿಮೆಯಾಗುತ್ತದೆ. ಹೂಡಿಕೆ ಮಾಡುವವರು ಎಚ್ಚರದಿಂದ ಇರಬೇಕು.
ದತ್ತಾತ್ರೇಯನ ಆರಾಧನೆ ಅಗತ್ಯ
ಪ್ರಪಂಚದಲ್ಲಿ ಅತಿ ವಿಸ್ಮಯವಾದ ಜಾಗ ಕರ್ನಾಟಕದ ದೇವಲ ಗಾಣಗಾಪುರ. ಕಲಬುರಗಿಯಿಂದ 35 ಕಿ.ಮೀ. ದೂರದಲ್ಲಿದೆ. ಬ್ರಹ್ಮ-ವಿಷ್ಣು-ಮಹೇಶ್ವರ ಈ ತ್ರಿಮೂರ್ತಿಗಳ ರೂಪ ಭಗವಾನ್ ದತ್ತಾತ್ರೇಯ. ಅಂತಹ ತ್ರಿಮೂರ್ತಿ ಸ್ವರೂಪ ದತ್ತಾತ್ರೇಯರು ಮುಂದೆ ಶ್ರೀಪಾದವಲ್ಲಭರಾಗಿ 2ನೇ ಅವತಾರವನ್ನು ಪೂರ್ಣಗೊಳಿಸಿ ಮೂರನೇ ಅವತಾರದಲ್ಲಿ ನರಸಿಂಹ ಸರಸ್ವತಿಗಳಾಗಿ ಶ್ರೀಕ್ಷೇತ್ರ ಗಾಣಗಾಪುರದಲ್ಲಿ ನಿರ್ಗುಣ ಪಾದುಕೆಗಳ ರೂಪದಲ್ಲಿ ಇಂದಿಗೂ ವಿರಾಜಮಾನರಾಗಿದ್ದಾರೆ. ಮಾನವರ ಉದ್ಧಾರಕ್ಕಾಗಿ ಕಲಿಯುಗದ ಕೈಲಾಸ, ವರ್ತಮಾನದ ವೈಕುಂಠವೆಂದು ಪ್ರಸಿದ್ಧವಾಗಿರುವ ಗಾಣಗಾಪುರದಲ್ಲಿ ನೆಲೆಸಿ ವ್ಯಕ್ತಾವ್ಯಕ್ತ ಸ್ವರೂಪದಿಂದ ಇಂದಿಗೂ ತಮ್ಮ ಲೀಲೆಯನ್ನು ತೋರಿಸುತ್ತಿದ್ದಾರೆ. ಇದು ಗುರುವಿಗೆ ಸಂಬಂಧಪಟ್ಟ ಸಂವತ್ಸರವಾಗಿರುವುದರಿಂದ ದತ್ತಾತ್ರೇಯನ ಆರಾಧನೆ ಎಲ್ಲ ಜನರಿಗೂ ಕ್ಷೇಮ ತರಲಿದೆ. ದೇಶದ ಬೇರೆ-ಬೇರೆ ಭಾಗಗಳಲ್ಲಿರುವ ದತ್ತ ಕ್ಷೇತ್ರಗಳ ದರ್ಶನ ಶ್ರೇಯಸ್ಕರ.
ದಕ್ಷಿಣಾಮೂರ್ತಿ ಮಂತ್ರ
ನಿಧಯೇ ಸರ್ವ ವಿದ್ಯಾನಾಂ ಭಿಷಜೇ ಭವರೋಗಿಣಾಮ್
ಗುರುವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ ॥
(ಪ್ರತಿನಿತ್ಯ ಈ ಮಂತ್ರವನ್ನು 108 ಅಥವಾ ಕನಿಷ್ಠ ಪಕ್ಷ 16 ಬಾರಿ ಪಠಿಸಿ)
ಈ ಸಂವತ್ಸರದಲ್ಲಿ ಗುರು ರಾಜ, ಕುಜ ಮಂತ್ರಿ ಅಂದರೆ ಸೇನಾನಿ. ಸುಬ್ರಹ್ಮಣ್ಯ ದೇವರು ಸೇನಾನಿಯಾಗಿ ಕಾಪಾಡುತ್ತಾನೆ. ಹಾಗಾಗಿ, ರಾಷ್ಟ್ರ ಪ್ರಗತಿ ಹೊಂದಬೇಕಾದರೆ ದೇಶವನ್ನು ಆಳುವವರು ಜ್ಞಾನಮೂರ್ತಿ ಸುಬ್ರಹ್ಮಣ್ಯ ದೇವರನ್ನು ಆರಾಧಿಸಲಿ.