ಮಾರ್ಚ್ 28 ಹಾಗೂ 29 ರಂದು ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲೆಂದೇ ರೈಲ್ವೆ ಇಲಾಖೆ ಚೆನ್ನೈ, ಬೆಂಗಳೂರು ಹಾಗೂ ಮೈಸೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲುಗಳನ್ನು ನಿಯೋಜನೆ ಮಾಡಿದೆ. ಆ ದಿನ ಯಾವ ಯಾವ ಜಿಲ್ಲೆಗಳಿಗೆ ವಿಶೇಷ ರೈಲು ಓಡಡಾಲಿವೆ ಎನ್ನುವ ಬಗ್ಗೆ ತಿಳಿಯೋಣ.
Railway : ಹಬ್ಬಗಳು ಬಂದರೆ ಸಾಕು ವೀಕೆಂಡ್ ಮಂದಿ ತಮ್ಮ ದುಡಿಯುವ ಕೆಲಸದಿಂದ ಕೊಂಚ ರಿಲೀಫ್ ಪಡೆಯಲು ಹಾಗೂ ತಮ್ಮ ಕುಟುಂಬದವರೊಂದಿಗೆ ಸಮಯ ಕಳೆದು ಹಬ್ಬ ಆಚರಿಸಲು ತಮ್ಮ-ತಮ್ಮ ಊರುಗಳಿಗೆ ಹೋಗೋದು ಸಾಮಾನ್ಯ. ಈ ಸಂದರ್ಭದಲ್ಲಿ ಅತೀ ಹೆಚ್ಚಿನ ಪ್ರಯಾಣಿಕರು ತಾವು ಕೆಲಸ ಮಾಡುವ ಸ್ಥಳವಾದ ಬೆಂಗಳೂರು ಹಾಗೂ ಮೈಸೂರಿನಿಂದ ತಮ್ಮ ಊರುಗಳಿಗೆ ಹೋಗಲು ಬಸ್ ಹಾಗೂ ರೈಲುಗಳ ಮೊರೆ ಹೋಗುತ್ತಾರೆ. ಎಲ್ಲಾ ಪ್ರಯಾಣೀಕರು ಒಂದೇ ಸಮಯದಲ್ಲಿ ರೈಲ್ವೇ ನಿಲ್ದಾಣಕ್ಕೆ ಜಮಾಯಿಸೋದನ್ನು ನಿಯಂತ್ರಿಸಲು ಈ ಬಾರಿಯ ಯುಗಾದಿ ಹಬ್ಬಕ್ಕೆ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದೆ.
ಮೈಸೂರಿನಿಂದ ಕಾರವಾರ, ಬೆಂಗಳೂರಿನಿಂದ ಕಲಬರಗಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಲಿದೆ. 07319 ಸಂಖ್ಯೆ ಹೊಂದಿರುವ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 28 ರಂದು ಬೆಳಿಗ್ಗೆ 08:05ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 2:40ಕ್ಕೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ. ರೈಲು ಸಂಖ್ಯೆ 07320 ರ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 28 ರಂದು ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಮಧ್ಯಾಹ್ನ 3.40ಕ್ಕೆ ಹೊರಟು, ಅದೇ ದಿನ ರಾತ್ರಿ 10.50ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ವಾಪಸ್ಸು ಬರಲಿದೆ.
ಮೈಸೂರು ಹಾಗೂ ಕಾರವಾರ ನಡುವೆ ವಿಶೇಷ ರೈಲು ಸೇವೆ ಇರಲಿದೆ. 06203 ಸಂಖ್ಯೆ ಹೊಂದಿರುವ ರೈಲು ಮಾರ್ಚ್ 28 ರಂದು ರಾತ್ರಿ 9.35ಕ್ಕೆ ಮೈಸೂರಿನಿಂದ ಹೊರಡಲಿದೆ. ಮರುದಿನ ಸಂಜೆ 4.15ಕ್ಕೆ ಕಾರವಾರ ತಲುಪಲಿದೆ. ಇದೇ ರೈಲು ಮಾರ್ಚ್ 29 ರಂದು ರಾತ್ರಿ 11.30 ಕ್ಕೆ ಕಾರವಾರದಿಂದ ಹೊರಟು, ಮರುದಿನ ಸಂಜೆ 4.40 ಕ್ಕೆ ಮೈಸೂರರಿಗೆ ಬಂದು ಸೇರಲಿದೆ.
ರೈಲು ಸಂಖ್ಯೆ 06519 ರ ಎಸ್ಎಂವಿಟಿ ಬೆಂಗಳೂರು-ಕಲಬುರಗಿ ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 28 ರಂದು ರಾತ್ರಿ 9:15ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 07:40ಕ್ಕೆ ಕಲಬುರಗಿ ತಲುಪಲಿದೆ. ರೈಲು ಸಂಖ್ಯೆ 06520 ಕಲಬುರಗಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 29 ರಂದು ಬೆಳಿಗ್ಗೆ 9:35ಕ್ಕೆ ಕಲಬುರಗಿಯಿಂದ ಹೊರಟು, ಅದೇ ದಿನ ರಾತ್ರಿ 8:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ರೈಲು ಸಂಖ್ಯೆ 17391 ಹಾಗೂ 17392 ರ ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ದೈನಂದಿನ ಎಕ್ಸ್ ಪ್ರೆಸ್ ರೈಲುಗಳಿಗೆ ಹರಿಹರ ಮತ್ತು ರಾಣಿಬೆನ್ನೂರು ನಿಲ್ದಾಣಗಳ ನಡುವೆ ಇರುವ ಚಲಗೇರಿ ನಿಲ್ದಾಣದಲ್ಲಿದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಏಪ್ರಿಲ್ 1, 2025 ರಿಂದ ಜೂನ್ 30ರವರೆಗೆ ಮೂರು ತಿಂಗಳ ಕಾಲ ಮುಂದುವರಿಸಲಾಗುತ್ತೆ ಎಂದು ನೈಋತ್ಯ ರೈಲ್ವೆ ಮಾಹಿತಿ ಹಂಚಿಕೊಂಡಿದೆ.
ಪ್ರಯಾಣಿಕರು ರೈಲು ಕಾಯ್ದಿರಿಸುವಿಕೆ, ಆಗಮನ ಮತ್ತು ನಿರ್ಗಮನ ಸಮಯ ಮತ್ತು ಹೆಚ್ಚಿನ ವಿವರಗಳಿಗಾಗಿ, ಅಧಿಕೃತ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್‌ಗಳನ್ನು ಸಂಪರ್ಕಿಸಿ ಹೆಚ್ಚಿನ ವಿವರ ಪಡೆಯಿರಿ.