ನ್ಯೂಸ್

ಯುಜಿ ನೀಟ್, ಸಿಇಟಿ: ಪ್ರವೇಶ ಅವಧಿ ವಿಸ್ತರಣೆ

ಬೆಂಗಳೂರು ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ವಿವಿಧ ಕೋರ್ಸ್‌ಗಳಿಗೆ ಮೊದಲ ಸುತ್ತಿನ ಸಂಯೋಜಿತ ಸೀಟು ಹಂಚಿಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು, ಪ್ರವೇಶಾತಿಗೆ ಆ.23ರ ವರೆಗೆ ಅವಧಿ ವಿಸ್ತರಿಸಲಾಗಿದೆ.

ಕಾಲೇಜು/ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಆ.22ರಂದು ಬೆಳಿಗ್ಗೆ 11ಗಂಟೆವರೆಗೆ ವಿಸ್ತರಿಸಲಾಗಿದೆ. ಶುಲ್ಕ ಪಾವತಿಸಲು ಆ.23ರಂದು ಮಧ್ಯಾಹ್ನ 2ಗಂಟೆವರೆಗೆ ಅವಕಾಶ ಇರುತ್ತದೆ. ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಆ.23ರ ಸಂಜೆ 4 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಶುಲ್ಕ ಪಾವತಿಸಿ, ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆ ಶನಿವಾರದಿಂದಲೇ ಆರಂಭವಾಗಿದೆ. ಭಾನುವಾರ (ಆ.20) ರಜೆ ಇರುವ ಕಾರಣ ಮೂಲ ದಾಖಲೆಗಳ ಸ್ವೀಕಾರ ಕೆಇಎನಲ್ಲಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಸಲ್ಲಿಸುವ ಬಾಂಡ್‌ನಲ್ಲಿ ಮೊದಲನೆ ಪಾರ್ಟಿ ಅಭ್ಯರ್ಥಿ, ಎರಡನೇ ಪಾರ್ಟಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ಸರ್ಕಾರ ಎಂದು ನಮೂದಿಸಬೇಕು ಎಂದು ಮಾಹಿತಿ ನೀಡಿದ್ದಾರೆ.