ನ್ಯೂಸ್

18ರಂದು ಉಡುತಡಿ ನಾಟಕ ಕೃತಿ ಬಿಡುಗಡೆ

ಶಿವಮೊಗ್ಗ: ಮಲೆನಾಡು ಕಲಾ ತಂಡ ಶಿವಮೊಗ್ಗ, ಮಸರೂರು ಎಂ.ಕೆ.ರೇಣುಕಪ್ಪ ಗೌಡ ಪ್ರತಿಷ್ಠಾನದ ಆಶ್ರಯದಲ್ಲಿ ಡಾ. ಗಣೇಶ್ ಆರ್. ಕೆಂಚನಾಲ ರಚನೆಯ ಉಡುತಡಿ ನಾಟಕ ಕೃತಿ ಬಿಡುಗಡೆ ಮತ್ತು ನಾಟಕ ಪ್ರದರ್ಶನವನ್ನು ೆ.18ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಉಡುತಡಿ ನಾಟಕ ಶಿವಮೊಗ್ಗ ಜಿಲ್ಲೆಯ ವಚನಗಾರ್ತಿ ಅಕ್ಕಮಹಾದೇವಿ ಅವರ ಕುರಿತಾಗಿದೆ. ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ ಪುಸ್ತಕ ಬಿಡುಗಡೆಗೊಳಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೃತಿಯ ಲೇಖಕ ಹಾಗೂ ರಂಗನಿರ್ದೇಶಕ ಗಣೇಶ್ ಕೆಂಚನಾಲ ಹೇಳಿದರು.

ರಂಗಕಲಾವಿದ ಡಾ. ಎಚ್.ಎಸ್.ನಾಗಭೂಷಣ್ ಪುಸ್ತಕ ಕುರಿತು ಮಾತನಾಡುವರು. ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೀಶ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್.ಮಹಾರುದ್ರ ಉಪಸ್ಥಿತರಿರುವರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ರಂಗನಟಿ ಲಕ್ಷ್ಮೀ ಎಸ್. ಭದ್ರಾವತಿ ಅವರಿಗೆ ರಂಗಸನ್ಮಾನ ಮಾಡಲಾಗುವುದು. ನಾಟಕ ವೀಕ್ಷಿಸಲು ಬಂದವರಿಗೆ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು ಎಂದರು.

ನಾಟಕವನ್ನು ಸಾಣೇಹಳ್ಳಿಯ ಮಂಜುಳಾ ಬದಾಮಿ, ವೈ.ಡಿ.ಬದಾಮಿ ನಿರ್ದೇಶಿಸಿದ್ದಾರೆ. ಶರಣ ಚಳವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ ಅಕ್ಕಮಹಾದೇವಿಯದು. ಅವರ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದೆ. ಅಕ್ಕಮಹಾದೇವಿಯ ವಚನಗಳು ಅವರ ವ್ಯಕ್ತಿತ್ವ ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ನಾಡಿನ ಹಲವೆಡೆ ಯಶಸ್ವಿ ಪ್ರದರ್ಶನ ಕಂಡ ಈ ನಾಟಕ, ಅಕ್ಕನ ವ್ಯಕ್ತಿತ್ವವನ್ನು ಭಿನ್ನ ಆಯಾಮದಲ್ಲಿ ಕಟ್ಟಿಕೊಡುತ್ತದೆ ಎಂದು ಹೇಳಿದರು. ಬಸವರಾಜ್ ನೆಲ್ಲಿಸರ, ಶಕುಂತಲಾ, ಕಿರಣ್ ದೇಸಾಯಿ ಸುದ್ದಿಗೋಷ್ಠಿಯಲ್ಲಿದ್ದರು.